ಕ್ರೀಡೆ

ಗುಜರಾತ್​ ಟೈಟಾನ್ಸ್​ ಷೇರು ಮಾರಾಟ; ಖರೀದಿಗೆ ಅದಾನಿ, ಟೊರೆಂಟ್​ ಗ್ರೂಪ್​ ಮಾತುಕತೆ

ನವದೆಹಲಿ: ಐಪಿಎಲ್​ಗೆ 2022ರಲ್ಲಿ ಸೇರ್ಪಡೆಗೊಂಡ ಗುಜರಾತ್​ ಟೈಟಾನ್ಸ್​ ತಂಡದ ಮಾಲೀಕತ್ವ ಹೊಂದಿರುವ ಸಿವಿಸಿ ಕ್ಯಾಪಿಟಲ್​ ಕಂಪನಿಯು ಹೆಚ್ಚಿನ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಅದಾನಿ ಗ್ರೂಪ್​ ಮತ್ತು ಟೊರೆಂಟ್​ ಗ್ರೂಪ್​ಗಳು ಈ ಷೇರುಗಳ ಖರೀದಿಗೆ ಮಾತುಕತೆಯನ್ನೂ ನಡೆಸಿವೆ ಎನ್ನಲಾಗಿದೆ.

ಸಿವಿಸಿ ಕ್ಯಾಪಿಟಲ್​ ಕಂಪನಿ ಈಗ ಗುಜರಾತ್​ ಫ್ರಾಂಚೈಸಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಮಾತ್ರ ತನ್ನಲ್ಲಿ ಉಳಿಸಿಕೊಳ್ಳಲು ಬಯಸಿದೆ. ಬಿಸಿಸಿಐ ನಿಯಮದ ಅನುಸಾರ ಈ ಹೊಸ ತಂಡವನ್ನು 2025ರ ೆಬ್ರವರಿವರೆಗೆ ಸಂಪೂರ್ಣವಾಗಿ ಮಾರಾಟ ಮಾಡಲು ಮಾಲೀಕರಿಗೆ ಅನುಮತಿ ಇರುವುದಿಲ್ಲ.

ಸಿವಿಸಿ ಕ್ಯಾಪಿಟಲ್​ ಕಂಪನಿ 2021ರಲ್ಲಿ 5,625 ಕೋಟಿ ರೂ.ಗಳಿಗೆ ಅಹಮದಾಬಾದ್​ ನಗರ ಮೂಲದ ಗುಜರಾತ್​ ತಂಡವನ್ನು ಖರೀದಿಸಿತ್ತು. ಆಗ ಅದಾನಿ ಗ್ರೂಪ್​ (5,100 ಕೋಟಿ ರೂ.) ಮತ್ತು ಟೊರೆಂಟ್​ ಗ್ರೂಪ್​ (4,653 ಕೋಟಿ ರೂ.) ಬಿಡ್ಡಿಂಗ್​ಗಳನ್ನು ಸಿವಿಸಿ ಕಂಪನಿ ಹಿಮ್ಮೆಟ್ಟಿಸಿತ್ತು. 2022ರ ಐಪಿಎಲ್​ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ತಂಡದ ಹಾಲಿ ಮೌಲ್ಯ 8,366ರಿಂದ 12,549 ಕೋಟಿ ರೂ.ವರೆಗೆ ಇದೆ ಎನ್ನಲಾಗಿದೆ.

ಅಹಮದಾಬಾದ್​ ನಗರದ ಫ್ರಾಂಚೈಸಿಯನ್ನು ಖರೀದಿಸಲು ಭಾರಿ ಉತ್ಸಾಹದಲ್ಲಿದ್ದ ಅದಾನಿ ಗ್ರೂಪ್​, ಐಪಿಎಲ್​ನಲ್ಲಿ ತಂಡದ ಸಿಗದ ನಿರಾಸೆಯಲ್ಲಿ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ 1,289 ಕೋಟಿ ರೂ.ಗಳಿಗೆ ಅಹಮದಾಬಾದ್​ ಮಹಿಳಾ ತಂಡವನ್ನು (ಗುಜರಾತ್​ ಜೈಂಟ್ಸ್​) ಖರೀದಿಸಿತ್ತು.