ಅಹಮದಾಬಾದ್: ಎಡಗೈ ಬ್ಯಾಟರ್ ಸಾಯಿ ಸುದರ್ಶನ್ (82 ರನ್, 53 ಎಸೆತ, 8 ಬೌಂಡರಿ, 3 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ (24ಕ್ಕೆ 3) ಸಹಿತ ಇತರ ಬೌಲರ್‌ಗಳ ಬಿಗಿ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು ರನ್‌ಮಳೆ ಹರಿಸಿ 58 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸೋಲಿನ ಆರಂಭದ ಬಳಿಕ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೆ ವಿಸ್ತರಿಸಿರುವ ಶುಭಮಾನ್ ಗಿಲ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್, ನಾಯಕ ಶುಭಮಾನ್ ಗಿಲ್ (2) ವಿಕೆಟ್ ಬೇಗನೆ ಕಳೆದುಕೊಂಡಿತು. ನಂತರ ಸಾಯಿ ಸುದರ್ಶನ್ ಹಾಗೂ ಶಾರುಖ್ ಖಾನ್ (36) ಜತೆಯಾಟದ ನೆರವಿನಿಂದ 6 ವಿಕೆಟ್‌ಗೆ 217 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ರಾಜಸ್ಥಾನ ರಾಯಲ್ಸ್ 68 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಲಯ ತಪ್ಪಿತು. ಆಗ ಶಿಮ್ರೊನ್ ಹೆಟ್ಮೆಯರ್ (52 ರನ್, 32 ಎಸೆತ, 4 ಬೌಂಡರಿ, 3 ಸಿಕ್ಸರ್) ಏಕಾಂಗಿ ಪ್ರತಿರೋಧ ನಡುವೆಯೂ ರಾಜಸ್ಥಾನ ಅಂತಿಮವಾಗಿ 19.2 ಓವರ್‌ಗಳಲ್ಲಿ 159 ರನ್‌ಗಳಿಗೆ ಸರ್ವಪತನ ಕಂಡಿತು.
ಟೈಟಾನ್ಸ್ ಸಂಘಟಿತ ದಾಳಿ
ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ (6) ಎರಡನೇ ಓವರ್‌ನಲ್ಲಿ ಅರ್ಷದ್ ಖಾನ್ ಎಸೆತದಲ್ಲಿ ಔಟಾಗಿ, ಅಸ್ಥಿರ ಬ್ಯಾಟಿಂಗ್ ಮುಂದುವರಿಸಿದರು. ಸಿರಾಜ್ ಎಸೆದ ಮರು ಓವರ್‌ನಲ್ಲಿ ನಿತೀಶ್ ರಾಣಾ (1) ನಿರಾಸೆ ಮೂಡಿಸಿದರು. ಆಗ ನಾಯಕ ಸಂಜು ಸ್ಯಾಮ್ಸನ್ (41) ಮತ್ತು ರಿಯಾನ್ ಪರಾಗ್ (26) ಜೋಡಿ ಮೂರನೇ ವಿಕೆಟ್‌ಗೆ 26 ಎಸೆತಗಳಲ್ಲಿ 48 ರನ್‌ಗಳಿಸಿ ಚೇಸಿಂಗ್ ಜೀವಂತವಿರಿಸಿತು.
ಇಂಪ್ಯಾಕ್ಟ್ ಪ್ಲೇಯರ್ ಕುಲ್ವಂತ್ ಖೆಜ್ರೋಲಿಯಾ ಈ ಜತೆಯಾಟವನ್ನು ಮುರಿದು ಗುಜರಾತ್‌ಗೆ ಮೇಲುಗೈ ಒದಗಿಸಿದರು. ಸ್ಯಾಮ್ಸನ್ ಹಾಗೂ ಶಿಮ್ರೊನ್ ಹೆಟ್ಮೆಯರ್ 5ನೇ ವಿಕೆಟ್‌ಗೆ 28 ಎಸೆತಗಳಲ್ಲಿ 48 ರನ್‌ಗಳಿಸಿ ಚೇಸಿಂಗ್‌ಗೆ ಬಲ ತುಂಬಿದರು. ಆಗ ದಾಳಿಗಿಳಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಈ ಜೋಡಿಯನ್ನು ಬೇರ್ಪಡಿಸಿದರು. ಇದರೊಂದಿಗೆ ಗುಜರಾತ್ ಗೆಲುವಿನ ಹಾದಿ ಸುಗಮಗೊಂಡಿತು. ವೇಗಿಗಳಿಗೆ ಸ್ಪಿನ್ನರ್‌ಗಳಾದ ರಶೀದ್ ಖಾನ್ (37ಕ್ಕೆ 2) ಮತ್ತು ಸಾಯಿ ಕಿಶೋರ್ (20ಕ್ಕೆ 2) ಸಮರ್ಥ ಬೆಂಬಲ ಒದಗಿಸಿ ರಾಯಲ್ಸ್‌ಗೆ ಕಡಿವಾಣ ಹಾಕಿದರು.