ಕ್ರೀಡೆ

ಇಂದು ಲಖನೌ-ಗುಜರಾತ್ ಮರುಮುಖಾಮುಖಿ; ಗೆದ್ದವರಿಗೆ ಪ್ಲೇಆಫ್​ ಪ್ರವೇಶ ಖಚಿತ

ಮುಂಬೈ: ಹೊಸ ತಂಡಗಳಾಗಿದ್ದರೂ ಭರ್ಜರಿ ನಿರ್ವಹಣೆಯ ಮೂಲಕ ಗಮನಸೆಳೆಯುತ್ತ ಬಂದಿರುವ ಲಖನೌ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-15ರಲ್ಲಿ ಮಂಗಳವಾರ ಮರು ಮುಖಾಮುಖಿ ಆಗಲಿವೆ. ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಈ ಸ್ನೇಹಸಮರದಲ್ಲಿ ಗೆದ್ದವರಿಗೆ ಪ್ಲೇಆಫ್​ ಪ್ರವೇಶ ಖಚಿತಗೊಳ್ಳಲಿದೆ. ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವೂ ಒಲಿಯಲಿದೆ.

ಉಭಯ ತಂಡಗಳೂ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 3ರಲ್ಲಿ ಸೋತು ಸಮಾನ ಲಿತಾಂಶ ಕಂಡಿವೆ. ರನ್‌ರೇಟ್ ಲೆಕ್ಕಾಚಾರದಲ್ಲಿ ಮುಂದಿರುವ ಕಾರಣಕ್ಕೆ ಲಖನೌ ಸದ್ಯ ಅಗ್ರಸ್ಥಾನದಲ್ಲಿದ್ದರೆ, ಗುಜರಾತ್ 2ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಪರಸ್ಪರ ಮುಖಾಮುಖಿಯೊಂದಿಗೆ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದವು. ಅದರಲ್ಲಿ ಗೆದ್ದು ಗುಜರಾತ್ ಶುಭಾರಂಭ ಕಂಡಿದ್ದರೆ, ಲಖನೌ ಕೂಡ ಸೋಲಿನ ಆರಂಭದ ನಡುವೆಯೂ ನಂತರ ಗೆಲುವಿನ ಲಯ ಕಂಡುಕೊಂಡಿತ್ತು. ಇದೀಗ ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಖನೌ ಮುಂದಿದೆ.

ಗುಜರಾತ್ ತಂಡ ಕಳೆದೆರಡು ಪಂದ್ಯಗಳಲ್ಲಿ ಪಂಜಾಬ್ ಮತ್ತು ಮುಂಬೈ ವಿರುದ್ಧ ಸೋತಿದ್ದರೆ, ಲಖನೌ ತಂಡ ಸತತ 4 ಜಯದೊಂದಿಗೆ ಉತ್ತಮ ಲಯದಲ್ಲಿದೆ. ಮರಳಿ ಗೆಲುವಿನ ಹಳಿ ಏರುವ ಸವಾಲು ಈಗ ಹಾರ್ದಿಕ್ ಪಾಂಡ್ಯ ಬಳಗದ ಮುಂದಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 75 ರನ್‌ಗಳಿಂದ ಗೆದ್ದಿದ್ದ ಲಖನೌ ಭರ್ಜರಿ ರನ್‌ರೇಟ್ ಕೂಡ ಕಂಡುಕೊಂಡಿದೆ.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಹಿಂದಿನ ಮುಖಾಮುಖಿ: ಗುಜರಾತ್‌ಗೆ 5 ವಿಕೆಟ್ ಜಯ.

ಟೀಮ್ ನ್ಯೂಸ್:

ಲಖನೌ ಸೂಪರ್‌ಜೈಂಟ್ಸ್: ಸತತ 4 ಜಯದೊಂದಿಗೆ ಉತ್ತಮ ಲಯದಲ್ಲಿರುವುದರಿಂದ ಗೆಲುವಿನ ಕಾಂಬಿನೇಷನ್ ಬದಲಾಗುವ ಸಾಧ್ಯತೆಗಳಿಲ್ಲ. ಹೆಚ್ಚೆಂದರೆ ಬ್ಯಾಟಿಂಗ್ ಕ್ರಮಾಂಕ ಮತ್ತೆ ಬದಲಾವಣೆ ಕಾಣಬಹುದು.

ಗುಜರಾತ್ ಟೈಟಾನ್ಸ್: ಸತತ 2 ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಲು ಆಡುವ 11ರ ಬಳಗದಲ್ಲಿ ಬದಲಾವಣೆಯ ನಿರೀಕ್ಷೆ ಇದೆ. ಸಾಯಿ ಸುದರ್ಶನ ಸ್ಟ್ರೈಕ್‌ರೇಟ್ ಸಾಧಾರಣವಾಗಿರುವುದರಿಂದ ಬಿರುಸಿನ ಆಟವಾಡುವ ಕನ್ನಡಿಗ ಅಭಿನವ್ ಮನೋಹರ್ ಮತ್ತೆ ಅವಕಾಶ ಪಡೆಯಬಹುದು. ಯಶ್ ದಯಾಳ್ ಫಿಟ್ ಆದರೆ ಪ್ರದೀಪ್ ಸಂಗ್ವಾನ್ ಹೊರಗುಳಿಯಲಿದ್ದಾರೆ.