ಗ್ರೇಟರ್ ನೋಯ್ಡ: ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನವೂ ಒಂದು ಎಸೆತ ಕಾಣದೆ ರದ್ದುಗೊಂಡಿದೆ. ಮಂಗಳವಾರ ಮಳೆ ಇಲ್ಲದ ನಡುವೆಯೂ ಮೈದಾನವನ್ನು ಒಣಗಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಟ್ರೋಲ್‌ಗೆ ಗುರಿಯಾಗಿದೆ.
ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಪಂದ್ಯದ ಮೊದಲ ದಿನದ ಆಟ ರದ್ದುಗೊಳಿಸಲಾಗಿತ್ತು. ಆದರೆ ಮಳೆಯಿಂದ ತೇವಗೊಂಡಿದ್ದ ಅಂಗಣವನ್ನು ಒಣಗಿಸಲು ಎರಡನೇ ದಿನ ಟಾರ್ಪಲಿನ್ ಹಾಗೂ ಎಲೆಕ್ಟ್ರಿಕ್ ಟೇಬಲ್ ಫ್ಯಾನ್ಗಳನ್ನು ಬಳಸಲಾಯಿತು. ಮೈದಾನದಲ್ಲಿ ತೀವ್ರ ತೇವಾಂಶ ಹೊಂದಿದ್ದ ಸ್ಥಳದ ಹುಲ್ಲುಹಾಸನ್ನು ಕತ್ತರಿಸಿ, ಬದಲಿ ಹುಲ್ಲುಹಾಸನ್ನು ಹಾಕಲು ಗ್ರೌಂಡ್ಸ್‌ಮನ್‌ಗಳು ಹರಸಾಹಸಪಟ್ಟರು.
ದೆಹಲಿ ಕ್ರಿಕೆಟ್ ಸಂಸ್ಥೆಯ ಟಾರ್ಪಲಿನ್ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಸೂಪರ್ ಸಾಪ್ಪರ್‌ಗಳನ್ನು (ನೀರನ್ನು ಮೈದಾನದಿಂದ ಹೊರಹಾಕುವ ಯಂತ್ರ) ಎರವಲು ಪಡೆದ ನಡುವೆಯೂ ಗ್ರೇಟರ್ ನೋಯ್ಡ ಪ್ರಾಧಿಕಾರಕ್ಕೆ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. 2 ದಿನದಲ್ಲಿ ಪಂದ್ಯ ಆರಂಭಿಸಲು ಸಾಧ್ಯವಾಗದ ಹಿನ್ನೆಲೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೂ ಬಿಸಿಸಿಐ ವಿರುದ್ಧ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಆದರೆ ಟೆಸ್ಟ್ ಆಯೋಜನೆಗೆ ಕಾನ್ಪುರ, ಬೆಂಗಳೂರು ಹಾಗೂ ನೋಯ್ಡದ ಅಂಗಣವನ್ನು ಬಿಸಿಸಿಐ ಆಯ್ಕೆಯಾಗಿ ನೀಡಿತ್ತು. ಲಾಜಿಸ್ಟಿಕ್ಸ್ ಕಾರಣದಿಂದ ಆ್ಘನ್ ಕ್ರಿಕೆಟ್ ಮಂಡಳಿ ನೋಯ್ಡವನ್ನು ಆಯ್ಕೆಮಾಡಿಕೊಂಡಿತ್ತು.2016 ರಿಂದ ಇದುವರೆಗೆ 11 ಸೀಮಿತ ಓವರ್‌ಗಳ ಪಂದ್ಯವನ್ನು ಆಫ್ಘನ್ ಕ್ರಿಕೆಟ್ ಮಂಡಳಿ ಇದೇ ಅಂಗಣವನ್ನು ತವರು ಮೈದಾನವನ್ನಾಗಿ ಬಳಸಿಕೊಂಡಿದೆ.