ಕ್ರೀಡೆ

ಜನಾಂಗೀಯ ತಾರತಮ್ಯ ಆರೋಪ ತಳ್ಳಿ ಹಾಕಿದ ಗ್ರೇಮ್ ಸ್ಮಿತ್

sspmiracle1982

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕರಾಗಿದ್ದ 11 ವರ್ಷಗಳ ಅವಧಿಯಲ್ಲಿ ಜನಾಂಗೀಯ ತಾರತಮ್ಯ ಮಾಡಿರುವ ಆರೋಪವನ್ನು ಗ್ರೇಮ್ ಸ್ಮಿತ್ ಶುಕ್ರವಾರ ತಳ್ಳಿಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಥಮಿ ಸೊಲೆಕಿಲೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ಮಿತ್ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ ಮಾಡಿದ್ದರು.

2012ರಲ್ಲಿ ಮಾರ್ಕ್ ಬೌಷರ್ ಅವರ ಉತ್ತರಾಧಿಕಾರಿಯಾಗಿ ತಾವು ಗುರುತಿಸಲ್ಪಟ್ಟಿದ್ದರೂ, ಸ್ಮಿತ್ ತಮ್ಮ ಬದಲಿಗೆ ಎಬಿ ಡಿವಿಲಿಯರ್ಸ್‌ರನ್ನು ಟೆಸ್ಟ್ ವಿಕೆಟ್ ಕೀಪರ್ ಆಗಿ ಆಡಿಸಿ ತಾರತಮ್ಯ ಎಸಗಿದ್ದರು ಎಂದು ಸೊಲೆಕಿಲೆ ಆರೋಪಿಸಿದ್ದರು.

ಸೊಲೆಕಿಲೆ ಆರೋಪವನ್ನು ನಿರಾಕರಿಸಿರುವ ಹೇಳಿಕೆಯನ್ನು ಟ್ವೀಟಿಸಿರುವ ಸ್ಮಿತ್, 2012ರ ಇಂಗ್ಲೆಂಡ್ ಪ್ರವಾಸದಲ್ಲಿ ಬೌಷರ್ ಗಾಯಗೊಂಡಾಗ ಎಬಿ ಡಿವಿಲಿಯರ್ಸ್‌ರನ್ನು ಕೀಪರ್ ಆಗಿ ಆಡಿಸಲು ಆಯ್ಕೆಗಾರರು ಮತ್ತು ಆಗಿನ ಕೋಚ್ ಗ್ಯಾರಿ ಕರ್ಸ್ಟನ್ ಸಮ್ಮತಿಸಿದ್ದರು. ಆಗ ಸೊಲೆಕಿಲೆ ಅವರು ವಿಲಿಯರ್ಸ್‌ಗೆ ಮೀಸಲು ಕೀಪರ್ ಆಗಿ ತಂಡದಲ್ಲಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ಮಿತ್ ಸ್ಪಷ್ಟನೆಯನ್ನು ಒಪ್ಪಿಕೊಳ್ಳದ ಸೊಲೆಕಿಲೆ, ಬೌಷರ್‌ಗೆ ಮೀಸಲು ಕೀಪರ್ ಆಗಿ ಆಯ್ಕೆಗಾರರು ತಮ್ಮನ್ನು ಕರೆಸಿಕೊಂಡಿದ್ದರು. ಬೌಷರ್ ಗಾಯಗೊಂಡ ವೇಳೆ ದಕ್ಷಿಣ ಆಫ್ರಿಕಾ ಎ ತಂಡದ ಪರ ನಾನು ಇಂಗ್ಲೆಂಡ್ ಪ್ರವಾಸದಲ್ಲೇ ಇದ್ದೆ ಎಂದು ಹೇಳಿದ್ದಾರೆ. ಸೊಲೆಕಿಲೆ 2004ರಲ್ಲಿ ದಕ್ಷಿಣ ಆಫ್ರಿಕಾ ಪರ 3 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವನ್ನಷ್ಟೇ ಪಡೆದುಕೊಂಡಿದ್ದರು.

ಆದರೆ ಸ್ಮಿತ್ ಅವರು, ವಿಕೆಟ್ ಕೀಪರ್ ಆಗಿದ್ದು ಸೊಲೆಕಿಲೆ ಅವರ ದುರದೃಷ್ಟ. ಯಾಕೆಂದರೆ ವಿಕೆಟ್ ಕೀಪರ್‌ಗೆ ಒಂದೇ ಸ್ಥಾನಕ್ಕಾಗಿ ಹೋರಾಡಬೇಕಾಗುತ್ತದೆ. ದಕ್ಷಿಣ ಆಫ್ರಿಕಾದ ಇತರ ಹಲವು ಉತ್ತಮ ವಿಕೆಟ್ ಕೀಪರ್‌ಗಳೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದಿಲ್ಲ. ದಕ್ಷಿಣ ಆಫ್ರಿಕಾ ಮಾತ್ರವಲ್ಲ, ಇದು ಇತರ ಅಂತಾರಾಷ್ಟ್ರೀಯ ತಂಡಗಳೂ ಈ ರೀತಿ ಆಗುತ್ತವೆ ಎಂದಿದ್ದಾರೆ. ತಾನು ನಾಯಕನಾಗಿದ್ದ ಅವಧಿಯಲ್ಲಿ ಲ್ಯಾನ್ಸ್ ಕ್ಲುಸ್ನರ್ ಮತ್ತು ಶಾನ್ ಪೊಲಕ್ ಅವರಂಥ ಆಟಗಾರರನ್ನೂ ತಂಡದಿಂದ ಕೈಬಿಡಬೇಕಾಗಿ ಬಂದಿತ್ತು ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

19 ವಯೋಮಿತಿ ಕ್ರಿಕೆಟ್‌ನಿಂದ ನಾವಿಬ್ಬರು ಉತ್ತಮ ಸಂಬಂಧ ಹೊಂದಿದ್ದೆವು ಎಂಬ ಸ್ಮಿತ್ ಮಾತನ್ನು ಸೊಲೆಕಿಲೆ ಒಪ್ಪಿಕೊಂಡಿದ್ದಾರೆ. ಆದರೆ ಸ್ಮಿತ್ ಅವರಿಂದ ಈ ಸಮಯದಲ್ಲಿ ನಾನು ಕ್ಷಮೆಯಾಚನೆಯನ್ನು ನಿರೀಕ್ಷಿಸುತ್ತಿದ್ದೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರಾದ ಮಖಾಯ ಎನ್‌ಟಿನಿ ಮತ್ತು ಆಶ್ವೆಲ್ ಪ್ರಿನ್ಸ್ ಕೂಡ ಈ ಹಿಂದೆ, ರಾಷ್ಟ್ರೀಯ ತಂಡದಲ್ಲಿ ಜನಾಂಗೀಯ ತಾರತಮ್ಯ ಇತ್ತು ಎಂದು ಆರೋಪಿಸಿದ್ದರು.