ಬಾಕು (ಅಜರ್ಬೈಜಾನ್): ಭಾರತದ ಯುವ ಚದುರಂಗ ಪ್ರತಿಭೆ ಆರ್. ಪ್ರಜ್ಞಾನಂದ ಅಮೋಘ ನಿರ್ವಹಣೆಯ ನಡುವೆ ಫಿಡೆ ಚೆಸ್ ವಿಶ್ವಕಪ್ನಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ವಿಶ್ವ ನಂ. 1 ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್ನಲ್ಲಿ ಎಡವಿದ ಪ್ರಜ್ಞಾನಂದ 0.5-1.5ರಿಂದ ಮಣಿದರು. ಚೊಚ್ಚಲ ಚೆಸ್ ವಿಶ್ವಕಪ್ ಗೆದ್ದ ಕಾರ್ಲ್ಸೆನ್ 91.44 ಲಕ್ಷ ರೂ. ಬಹುಮಾನ ಪಡೆದರೆ, ರನ್ನರ್ಅಪ್ ಪ್ರಜ್ಞಾನಂದ 66.5 ಲಕ್ಷ ರೂ. ಬಹುಮಾನ ಗಳಿಸಿದರು.
ಮಂಗಳವಾರ ಮತ್ತು ಬುಧವಾರ ನಡೆದ ಮೊದಲೆರಡು ಕ್ಲಾಸಿಕಲ್ ಚೆಸ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರಿಂದ ಪ್ರಜ್ಞಾನಂದ ಮತ್ತು ನಾರ್ವೆಯ ತಾರೆ ಕಾರ್ಲ್ಸೆನ್ 1&1ರಿಂದ ಸಮಬಲ ಸಾಧಿಸಿದ್ದರು. ವಿಜೇತರ ನಿರ್ಧಾರಕ್ಕಾಗಿ ಗುರುವಾರ ನಡೆದ ಟೈಬ್ರೇಕರ್ ಹಂತದ ಮೊದಲ ಸುತ್ತಿನಲ್ಲಿ 25 ನಿಮಿಷಗಳ (+10ಸೆಕೆಂಡ್) ಎರಡು ರ್ಯಾಪಿಡ್ ಚೆಸ್ ಪಂದ್ಯಗಳು ನಡೆದವು. ಈ ಪೈಕಿ ಮೊದಲ ಪಂದ್ಯದಲ್ಲಿ ಕಾರ್ಲ್ಸೆನ್ ಗೆದ್ದರೆ, ಪ್ರಜ್ಞಾನಂದ ಗೆಲ್ಲಲೇಬೇಕಾಗಿದ್ದ 2ನೇ ಪಂದ್ಯದಲ್ಲಿ ಡ್ರಾ ಸಾಧಿಸಲಷ್ಟೇ ಶಕ್ತರಾದರು. ಇದರಿಂದ 5 ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್ಸೆನ್ ಚೊಚ್ಚಲ ಚೆಸ್ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಟ್ಟರು.
ಟೈಬ್ರೇಕರ್ ಹಂತದ ಮೊದಲ ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಬಿಳಿ ಕಾಯಿಯೊಂದಿಗೆ ಆಡಿದ ಪ್ರಜ್ಞಾನಂದ ಅವರಿಂದ ದಿಟ್ಟ ಸವಾಲು ಎದುರಿಸಿದ ಕಾರ್ಲ್ಸೆನ್ ಕೊನೆಗೂ 45ನೇ ನಡೆಯಲ್ಲಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ಬಳಿಕ 2ನೇ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ 32 ವರ್ಷದ ಕಾರ್ಲ್ಸೆನ್, ಅದರ ಪೂರ್ಣ ಲಾಭವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಪ್ರಶಸ್ತಿ ಆಸೆ ಜೀವಂತ ಉಳಿಸಿಕೊಳ್ಳಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಕಾರ್ಲ್ಸೆನ್ ಪ್ರಾಬಲ್ಯದೆದುರು ಮಂಕಾದ ಪ್ರಜ್ಞಾನಂದ, ಕೇವಲ 22 ನಡೆಗಳ ಬಳಿಕ ಡ್ರಾಕ್ಕೆ ಸಮ್ಮತಿಸಿದರು. ಇದರಿಂದ ಬ್ಲಿಟ್ಜ್ ಪಂದ್ಯದ ಅಗತ್ಯವಿಲ್ಲದೆ, ಲಿತಾಂಶ ಹೊರಹೊಮ್ಮಿತು. ಚೆನ್ನೈ ಆಟಗಾರ ಪ್ರಜ್ಞಾನಂದ ಫೈನಲ್ ಹಾದಿಯಲ್ಲಿ ವಿಶ್ವ ನಂ. 2 ಹಿಕರು ನಕಮುರಾ ಮತ್ತು ವಿಶ್ವ ನಂ. 3 ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿ ಗಮನಸೆಳೆದಿದ್ದರು. ಟೂರ್ನಿಯ 3ನೇ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಅಮೆರಿಕದ ಕರುವಾನಾ ಸ್ಥಳಿಯ ಆಟಗಾರ ನಿಜತ್ ಅಬಸೋವ್ಗೆ ಸೋಲುಣಿಸಿದರು.
ಇನ್ನು ವಿಶ್ವ ಚಾಂಪಿಯನ್ಗೆ ಸವಾಲೊಡ್ಡುವ ಅವಕಾಶ
ವಿಶ್ವಕಪ್ ಪ್ರಶಸ್ತಿ ಕೈತಪ್ಪಿದ ನಡುವೆ ಪ್ರಜ್ಞಾನಂದ, ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ಗೆ ಸವಾಲೊಡ್ಡುವ ಅವಕಾಶವನ್ನು ಪಡೆದಿದ್ದಾರೆ. ಇದಕ್ಕಾಗಿ ಅವರು ಮುಂದಿನ ವರ್ಷ ಕೆನಡದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆಲ್ಲಬೇಕಾಗಿದೆ. 2024ರ ಏಪ್ರಿಲ್ 2ರಿಂದ 25ರವರೆಗೆ ಟೊರಾಂಟೊದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ 8 ಆಟಗಾರರ ಆಡಲಿದ್ದಾರೆ. ಇದರಲ್ಲಿ ಗೆದ್ದವರು ಬಳಿಕ ಲಿರೆನ್ ಎದುರು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹೋರಾಡಲಿದ್ದಾರೆ.