ಧಿನಿಧಿ ಮತ್ತು ಕೋಚ್​ ನಿಹಾರ್ ಅವರನ್ನು ಸನ್ಮಾನಿಸಿದ ಕೆಎಸ್​ಎ ಪದಾಧಿಕಾರಿಗಳು ಏಜೆನ್ಸಿ
ಕ್ರೀಡೆ

ತವರಿಗೆ ಮರಳಿದ ಅವಳಿ ಕಂಚಿನ ತಾರೆ ಧಿನಿಧಿಗೆ ಸನ್ಮಾನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಎಸ್​ಎನಿಂದ ಭವ್ಯ ಸ್ವಾಗತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸೆನೆಗಲ್​ನ ಡಕಾರ್​ನಲ್ಲಿ ನಡೆಯುತ್ತಿರುವ ಯೂತ್​ ಒಲಿಂಪಿಕ್ಸ್​ನಲ್ಲಿ ಅವಳಿ ಕಂಚಿನ ಪದಕ ಗೆದ್ದು ಸೋಮವಾರ ತವರಿಗೆ ಮರಳಿದ ಕರ್ನಾಟಕದ ಈಜುತಾರೆ ಧಿನಿಧಿ ದೇಸಿಂಘುಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಈಜು ಸಂಸ್ಥೆ (ಕೆಎಸ್​ಎ) ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ನಡೆದ ಸಮಾರಂಭದಲ್ಲಿ ಕೆಎಸ್​ಎ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಯೂತ್​ ಒಲಿಂಪಿಕ್ಸ್​ನಲ್ಲಿ ಬೆಂಗಳೂರಿನ 16 ವರ್ಷದ ಧಿನಿಧಿ ಮಹಿಳೆಯರ 100 ಮೀ. ಫ್ರೀಸ್ಟೈಲ್​ ಮತ್ತು 200 ಮೀ. ಫ್ರೀಸ್ಟೈಲ್​ ಸ್ಪರ್ಧೆಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಅವರು ಯೂತ್​ ಒಲಿಂಪಿಕ್ಸ್​ ಆವೃತ್ತಿಯೊಂದರಲ್ಲಿ ಅವಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಧಿನಿಧಿ ಸಾಧನೆ ಕರ್ನಾಟಕದ ಈಜು ವಲಯದಲ್ಲೂ ಅಮೋ ಮೈಲಿಗಲ್ಲು ಆಗಿದ್ದು, ದೇಶದೆಲ್ಲೆಡೆಯ ಯುವ ಈಜುಪಟುಗಳಿಗೆ ಸ್ಫೂರ್ತಿದಾಯಕವೆನಿಸಿದೆ.

ವಿಮಾನ ನಿಲ್ದಾಣದಲ್ಲಿ ಧಿನಿಧಿ ಮತ್ತು ಅವರ ಕೋಚ್​ ನಿಹಾರ್​ ಅಮೀನ್​ಗೆ ಡೊಳ್ಳು ಕುಣಿತದೊಂದಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಗಂಧದ ಹಾರ, ಮೈಸೂರು ಪೇಟ, ಹೈಗುಚ್ಛ ಮತ್ತು ಸಿಹಿತಿಂಡಿಗಳನ್ನು ನೀಡಿ ಧಿನಿಧಿಗೆ ಅಭಿನಂದನೆ ಸಲ್ಲಿಸಲಾಯಿತು.

ಬಳಿಕ ಡಾಲ್ಫಿನ್​ ಅಕಾಡೆಮಿಯಯ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಕೆಎಸ್​ಎ ಆಯೋಜಿಸಿದ್ದ ಸಮಾರಂಭದಲ್ಲಿ ಧಿನಿಧಿ ಮತ್ತು ಅವರ ಕೋಚ್​ಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಧಿನಿಧಿಗೆ ಭವ್ಯ ಸ್ವಾಗತ ನೀಡಿದ ಕೆಎಸ್​ಎ ಪದಾಧಿಕಾರಿಗಳು

ಈ ವೇಳೆ ಕೆಎಸ್​ಎ ಅಧ್ಯಕ್ಷ ಗೋಪಾಲ್​ ಬಿ. ಹೊಸೂರು, ಉಪಾಧ್ಯಕ್ಷ ಸುನೀಲ್​ ಕುಮಾರ್​, ಕಾರ್ಯದರ್ಶಿ ಸತೀಶ್​ ಕುಮಾರ್​, ಜಂಟಿ ಕಾರ್ಯದರ್ಶಿ ಸುಂದರೇಶ್​, ಸ್ವಿಮ್ಮಿಂಗ್​ ಡೆವಲಪ್​ಮೆಂಟ್​ ಅಧಿಕಾರಿ ರೋಹಿತ್​ ಬಾಬು ಮತ್ತು ಧಿನಿಧಿ ಪೋಷಕರು ಹಾಜರಿದ್ದರು.