ಕ್ರೀಡೆ

ಲಖನೌ ಸೋಲಿನ ಬಳಿಕ ಕೆಎಲ್ ರಾಹುಲ್‌ಗೆ ಕ್ಲಾಸ್ ತೆಗೆದುಕೊಂಡರೇ ಗಂಭೀರ್?

ಕೋಲ್ಕತ: ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಮೆಗಾ ಹರಾಜಿಗೆ ಮುನ್ನವೇ 17 ಕೋಟಿ ರೂ. ಮೌಲ್ಯಕ್ಕೆ ಲಖನೌ ಸೂಪರ್‌ಜೈಂಟ್ಸ್ ತಂಡ ಖರೀದಿಸಿತ್ತು. ಬಳಿಕ ಅವರು ನಾಯಕರಾಗಿ ನೇಮಕಗೊಂಡಿದ್ದರು ಮತ್ತು ಮೆಂಟರ್ ಗೌತಮ್ ಗಂಭೀರ್ ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಹುಲ್ ಆಡಿದ ನಿಧಾನಗತಿ ಬ್ಯಾಟಿಂಗ್ ನಿರ್ವಹಣೆ ಗಂಭೀರ್ ಅವರನ್ನು ಸಿಡಿಮಿಡಿಗೊಳಿಸಿದಂತಿದೆ!

ಪಂದ್ಯದ ಬಳಿಕ ರಾಹುಲ್ ಜತೆಗೆ ಗಂಭೀರ್ ಗಂಭೀರವಾಗಿ ಮಾತನಾಡುತ್ತಿರುವ ಚಿತ್ರವೊಂದು ವೈರಲ್ ಆಗಿದ್ದು, ನಿಧಾನಗತಿ ಆಟಕ್ಕೆ ರಾಹುಲ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೆ ರಾಹುಲ್ ಕ್ಯಾಚ್ ಕೈಚೆಲ್ಲಿದಾಗಲೂ ಗಂಭೀರ್ ಬೇಸರಿಸಿದ ವಿಡಿಯೋ ವೈರಲ್ ಆಗಿದೆ.

ಕ್ಯಾಚ್ ಕೈಚೆಲ್ಲಿ ಸೋತೆವು

ಆರ್‌ಸಿಬಿ ವಿರುದ್ಧದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಕೆಲ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇ ಸೋಲಿಗೆ ಕಾರಣವಾಯಿತು ಎಂದು ಲಖನೌ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬೇಸರಿಸಿದ್ದಾರೆ. ಆರ್‌ಸಿಬಿ ತಂಡದ 208 ರನ್ ಸವಾಲಿಗೆ ಪ್ರತಿಯಾಗಿ ಲಖನೌ 6 ವಿಕೆಟ್‌ಗೆ 193 ರನ್ ಪೇರಿಸಿ 14 ರನ್‌ಗಳಿಂದ ಶರಣಾಯಿತು.

‘ನಮ್ಮ ಸೋಲಿಗೆ ಕಾರಣ ಸರಳವಾಗಿದೆ. ನಾವು ಫೀಲ್ಡಿಂಗ್‌ನಲ್ಲಿ ಉತ್ತಮ ನಿರ್ವಹಣೆ ತೋರಲಿಲ್ಲ. ಕೆಲ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಅದರಿಂದಾಗಿ 30-40 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಡುವಂತಾಯಿತು. ರಜತ್ ಪಾಟಿದಾರ್ ಅವರ ಇನಿಂಗ್ಸ್ ನಿಜಕ್ಕೂ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ವ್ಯತ್ಯಾಸ ತಂದಿತು. ಅಗ್ರ ಮೂವರಲ್ಲಿ ಒಬ್ಬರು ಶತಕ ಸಿಡಿಸಿದಾಗ ಆ ತಂಡವೇ ಹೆಚ್ಚಾಗಿ ಗೆಲ್ಲುತ್ತದೆ’ ಎಂದು ರಾಹುಲ್ ವಿವರಿಸಿದರು. ಲಖನೌ ತಂಡ ಪಾಟಿದಾರ್ 59, 72 ಮತ್ತು 93 ರನ್ ಗಳಿಸಿದ್ದಾಗ ಮತ್ತು ದಿನೇಶ್ ಕಾರ್ತಿಕ್ 2 ರನ್ ಗಳಿಸಿದ್ದಾಗ 1 ಕ್ಯಾಚ್ ಕೈಚೆಲ್ಲಿತ್ತು.

ಮೊದಲ ಓವರ್‌ನಲ್ಲೇ ಡಿಕಾಕ್ (6) ವಿಕೆಟ್ ಕಳೆದುಕೊಂಡ ಲಖನೌಗೆ ಕೆಎಲ್ ರಾಹುಲ್ (79) ಮತ್ತು ದೀಪಕ್ ಹೂಡಾ (45) 3ನೇ ವಿಕೆಟ್‌ಗೆ 61 ಎಸೆತಗಳಲ್ಲಿ 96 ರನ್ ಸೇರಿಸಿ ಚೇತರಿಕೆ ಒದಗಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (9) ಮತ್ತು ಕೃನಾಲ್ ಪಾಂಡ್ಯ (0) ಕೈಕೊಟ್ಟರು. ಕೊನೇ 9 ಎಸೆತಗಳಲ್ಲಿ 28 ರನ್ ಬೇಕಿದ್ದಾಗ ರಾಹುಲ್ ಕೂಡ ಔಟ್ ಆಗುವುದರೊಂದಿಗೆ ಲಖನೌ ಸೋಲು ಖಚಿತಗೊಂಡಿತು.