ಕ್ಯಾನ್ಬೆರಾ: ನಾಯಕಿ ಹರ್ವನ್ಪ್ರೀತ್ ಕೌರ್ (42*ರನ್, 34 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ (30 ರನ್, 25 ಎಸೆತ, 4 ಬೌಂಡರಿ) ಜೋಡಿಯ ಅಬ್ಬರದ ಬ್ಯಾಟಿಂಗ್ ಫಲವಾಗಿ ಭಾರತ ತಂಡ ಮಹಿಳೆಯರ ಟಿ20 ತ್ರಿಕೋನ ಸರಣಿಯಲ್ಲಿ ಶುಭಾರಂಭ ಕಂಡಿತು.
ಶುಕ್ರವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದರೊಂದಿಗೆ ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಂಡಿತು. ಮನುಕಾ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಹೀದರ್ ನೈಟ್ (67 ರನ್, 44 ಎಸೆತ, 8 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ಗೆ 147 ರನ್ಗಳಿಸಿತು.
ಪ್ರತಿಯಾಗಿ ಭಾರತ ತಂಡ 19.3 ಓವರ್ಗಳಲ್ಲಿ 5 ವಿಕೆಟ್ಗೆ 150 ರನ್ಗಳಿಸಿ ಗೆಲುವು ದಾಖಲಿಸಿತು. ಭಾರತ ತಂಡದ ಪರ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ದೀಪ್ತಿ ಶರ್ಮ ತಲಾ 2 ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಶೆಫಾಲಿ ವರ್ಮ ಹಾಗೂ ಸ್ಮೃತಿ ಮಂದನಾ (15) ಜೋಡಿ ಉತ್ತಮ ಆರಂಭ ನೀಡಿತು.
ಬಳಿಕ ಜೆಮೀಮಾ ರೋಡ್ರಿಗಸ್ (26) ಹಾಗೂ ಹರ್ವನ್ಪ್ರೀತ್ ಕೌರ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು. ಕನ್ನಡತಿ ವೇದಾ ಕೃಷ್ಣಮೂರ್ತಿ (7) ಹಾಗೂ ತಾನಿಯಾ ಭಾಟಿಯಾ (11) ವೈಫಲ್ಯ ಅನುಭವಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಹೀದರ್ ನೈಟ್ ಹಾಗೂ ಟ್ಯಾಮಿ ಬಿಯಾಮೌಂಟ್ (37) ಬಿರುಸಿನ ಬ್ಯಾಟಿಂಗ್ನಿಂದ 140ರ ಗಡಿ ದಾಟಿತು.
ಭಾರತ ತಂಡ ಭಾನುವಾರ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್: 7 ವಿಕೆಟ್ಗೆ 147 (ಹೀದರ್ ನೈಟ್ 67, ರಾಜೇಶ್ವರಿ ಗಾಯಕ್ವಾಡ್ 19ಕ್ಕೆ 2, ಶಿಖಾ ಪಾಂಡೆ 33ಕ್ಕೆ 2, ದೀಪ್ತಿ ಶರ್ಮ 30ಕ್ಕೆ 2), ಭಾರತ: 19.3 ಓವರ್ಗಳಲ್ಲಿ 5 ವಿಕೆಟ್ಗೆ 150 (ಹರ್ವನ್ಪ್ರೀತ್ 42*, ರೋಡ್ರಿಗಸ್ 26, ಕ್ಯಾಥರಿನ್ ಬ್ರಂಟ್ 33ಕ್ಕೆ 2). -ಏಜೆನ್ಸೀಸ್