ಕ್ರೀಡೆ

ಜೋಹರ್​ ಕಪ್​ನಲ್ಲಿ ಭಾರತ ಶುಭಾರಂಭ; ಕಿರಿಯರ ತಂಡದ ಕೋಚ್​ ಪಿಆರ್​ ಶ್ರೀಜೇಶ್​ಗೆ ಗೆಲುವಿನ ಸ್ವಾಗತ

ಜೋಹರ್​ (ಮಲೇಷ್ಯಾ): ಭಾರತದ ಕಿರಿಯರ ತಂಡ ಸುಲ್ತಾನ್​ ಜೋಹರ್​ ಕಪ್​ 21 ವಯೋಮಿತಿ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಜಪಾನ್​ ವಿರುದ್ಧ 4-2 ಗೋಲುಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಮಾಜಿ ಗೋಲು ಕೀಪರ್​ ಪಿಆರ್​ ಶ್ರೀಜೇಶ್​ ಕಿರಿಯರ ತಂಡದ ಮುಖ್ಯ ಕೋಚ್​ ಆಗಿ ಗೆಲುವಿನ ಆರಂಭ ಕಂಡಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಆಮಿರ್​ ಅಲಿ (12ನೇ ನಿಮಿಷ) ಗುಜೋರ್ತ್​ ಸಿಂಗ್​ (36), ಆನಂದ್​ ಸೌರಭ್​ ಕುಶ್ವಾಹ (44) ಮತ್ತು ಅಂಕಿತ್​ ಪಾಲ್​ (47) ಭಾರತ ಪರ ಗೋಲು ದಾಖಲಿಸಿದರು. ಜಪಾನ್​ ಪರ ಸುಬಸ ತನಕ (26) ಮತ್ತು ರಕುಸಿ ಯಮನಕ (57) ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತು. 12ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿದ ಭಾರತ ಮೊದಲಾರ್ಧದಲ್ಲಿ 1-1 ಸಮಬಲದಲ್ಲಿತ್ತು. ದ್ವೀತಿಯಾರ್ಧದ 6ನೇ ನಿಮಿಷದಲ್ಲಿ ಭಾರತ ಮತ್ತೆ ಮುನ್ನಡೆ ಸಾಧಿಸಿತು. ನಂತರ ಮತ್ತೆ 2 ಗೋಲು ಗಳಿಸಿ 4-1 ಮುನ್ನಡೆಗೇರಿತು. ಪಂದ್ಯ ಮುಕ್ತಾಯಕ್ಕೆ 3 ನಿಮಿಷ ಬಾಕಿ ಇರುವಾಗ ಜಪಾನ್​ ಮತ್ತೊಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿಕೊಂಡಿತು.

ಮಾಜಿ ಚಾಂಪಿಯನ್​ ಭಾರತ ಮುಂದಿನ ಪಂದ್ಯದಲ್ಲಿ ಭಾನುವಾರ ಬ್ರಿಟನ್​ ವಿರುದ್ಧ ಆಡಲಿದೆ.