ಪ್ಯಾರಿಸ್: ಟೋಕಿಯೊ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಅದನ್ನು ಪುನರಾವರ್ತಿಸುವ ಹಂಬಲದೊಂದಿಗೆ ಮಂಗಳವಾರ ಕಣಕ್ಕಿಳಿಯಲಿದ್ದಾರೆ. ಮಧ್ಯಾಹ್ನ 3.20ರಿಂದ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ನೀರಜ್ ಮತ್ತು ಮಧ್ಯಾಹ್ನ 1.50ರಿಂದ ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್ ಜೆನಾ ಕಣಕ್ಕಿಳಿಯಲಿದ್ದಾರೆ. ಗುರುವಾರ ರಾತ್ರಿ 11.55ರಿಂದ ಫೈನಲ್ ಸ್ಪರ್ಧೆ ನಡೆಯಲಿದೆ.
ಅರ್ಹತಾ ಸುತ್ತಿನಲ್ಲಿ ಒಟ್ಟು 32 ಸ್ಪರ್ಧಿಗಳಿದ್ದು, ತಲಾ 16ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಕಿಶೋರ್ ಜೆನಾ ಎ ಮತ್ತು ನೀರಜ್ ಬಿ ಗುಂಪಿನಲ್ಲಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಂ ಕೂಡ ಬಿ ಗುಂಪಿನಲ್ಲಿದ್ದಾರೆ. 84 ಮೀಟರ್ ದೂರ ಜಾವೆಲಿನ್ ಎಸೆದವರು ಅಥವಾ ಅಗ್ರ 12 ಎಸೆತಗಾರರು ಫೈನಲ್ಗೆ ಅರ್ಹತೆ ಸಂಪಾದಿಸಲಿದ್ದಾರೆ.
ವಿಶ್ವ ಚಾಂಪಿಯನ್ ಕೂಡ ಆಗಿರುವ 26 ವರ್ಷದ ನೀರಜ್ ಚೋಪ್ರಾ, ಸತತ 2 ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸುವ ಅವಕಾಶ ಹೊಂದಿದ್ದಾರೆ. 89.94 ಮೀ. ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿದ್ದು, ಹಾಲಿ ವರ್ಷ ಮೇನಲ್ಲಿ ದೋಹಾ ಡೈಮಂಡ್ ಲೀಗ್ನಲ್ಲಿ 88.36 ಮೀ. ಎಸೆದಿದ್ದೇ ಶ್ರೇಷ್ಠ ನಿರ್ವಹಣೆಯಾಗಿದೆ. ಹಾಲಿ ವರ್ಷ 3 ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದು. ಈ ಪೈಕಿ ಜೂನ್ 18ರಂದು ಪಾವೊ ನುರ್ಮಿ ಗೇಮ್ಸ್ನಲ್ಲಿ ಕೊನೆಯದಾಗಿ 85.97 ಮೀ. ಎಸೆದಿದ್ದರು. ಅಡುಕ್ಟರ್ (ತೊಡೆ ಸ್ನಾಯು) ಗಾಯದ ಸಮಸ್ಯೆಯಿಂದಾಗಿ ಅವರು ಹಾಲಿ ವರ್ಷ ಕೆಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಆದರೆ ಒಲಿಂಪಿಕ್ಸ್ಗೆ ಶೇ. 100 ಫಿಟ್ ಆಗಿರುವುದಾಗಿ ತಿಳಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಚಿನ್ನ ಗೆಲುವಿನ ಬಳಿಕ ಸ್ಥಿರ ನಿರ್ವಹಣೆ ತೋರುತ್ತ ಬಂದಿರುವ ನೀರಜ್, 15 ಎಸೆತಗಳಲ್ಲಿ 2 ಬಾರಿ ಮಾತ್ರ 85 ಮೀ.ಗಿಂತ ಕಡಿಮೆ ದೂರ ಭರ್ಜಿ ಎಸೆದಿದ್ದಾರೆ.
ಭಾರತದ ಮತ್ತೋರ್ವ ಸ್ಪರ್ಧಿ ಒಡಿಶಾದ ಕಿಶೋರ್ ಜೆನಾ ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ 87.54 ಮೀ. ಎಸೆದು ನೇರವಾಗಿ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದರು. ಆದರೆ ನಂತರದಲ್ಲಿ ಕಿಶೋರ್ 80 ಮೀ. ಗಡಿ ದಾಟಲು ಪರದಾಡುತ್ತಿದ್ದಾರೆ. ಹಾಲಿ ಋತುವಿನಲ್ಲಿ 80.84 ಮೀ. ಎಸೆತವೇ ಅವರ ಶ್ರೇಷ್ಠ ಸಾಧನೆಯಾಗಿದೆ.
ಪ್ರಬಲ ಪ್ರತಿಸ್ಪರ್ಧಿಗಳು
ಟೋಕಿಯೊ ಒಲಿಂಪಿಕ್ಸ್ ರಜತ ವಿಜೇತ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಜ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ಮಾಜಿ ವಿಶ್ವ ಚಾಂಪಿಯನ್ ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದಾರೆ. ಜರ್ಮನಿಯ 19 ವರ್ಷದ ಮ್ಯಾಕ್ಸ್ ಡೆಹ್ನಿಂಗ್ ಹಾಲಿ ಋತುವಿನಲ್ಲಿ ಗರಿಷ್ಠ 90.20 ಮೀ. ಎಸೆತದ ದಾಖಲೆ ಹೊಂದಿದ್ದು, ಸ್ಪರ್ಧೆಯ ಕರಿಗುದುರೆ ಎನಿಸಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಂ ಹಾಲಿ ಋತುವಿನಲ್ಲಿ ಗರಿಷ್ಠ 84.21 ಮೀ. ಎಸೆತವನ್ನಷ್ಟೇ ಎಸೆದಿದ್ದಾರೆ. ಆದರೆ ನೀರಜ್ಗೆ ಇನ್ನೂ 90 ಮೀ. ಗಡಿ ದಾಟಲು ಸಾಧ್ಯವಾಗದಿರುವ ನಡುವೆ, ಸ್ಪರ್ಧೆಯಲ್ಲಿರುವ ಐವರು 90 ಮೀ.ಗಿಂತ ಅಧಿಕ ಎಸೆತದ ಜೀವನಶ್ರೇಷ್ಠ ನಿರ್ವಹಣೆ ಹೊಂದಿದ್ದಾರೆ ಎಂಬುದು ಗಮನಾರ್ಹ.