ಗ್ಲೋಬಲ್ ಚೆಸ್ ಲೀಗ್ 3ನೇ ಆವೃತ್ತಿಗೆ ಮುಂಬೈನಲ್ಲಿ ಅದ್ಧೂರಿ ಚಾಲನೆ
ಮುಂಬೈ: ಟೆಕ್ ಮಹೀಂದ್ರಾ ಮತ್ತು ವಿಶ್ವ ಚೆಸ್ ಫೆಡರೇಶನ್ (FIDE) ಜಂಟಿ ಸಹಯೋಗದ, ವಿಶ್ವದ ಮೊದಲ ಫ್ರಾಂಚೈಸಿ ಆಧಾರಿತ ಚೆಸ್ ಲೀಗ್ ಆದ (Global Chess League) ಗ್ಲೋಬಲ್ ಚೆಸ್ ಲೀಗ್ (GCL) ಮೂರನೇ ಆವೃತ್ತಿಗೆ ಮುಂಬೈನ ಐತಿಹಾಸಿಕ ರಾಯಲ್ ಒಪೇರಾ ಹೌಸ್‌ನಲ್ಲಿ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಭವ್ಯವಾದ ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿಯ ಚಾಂಪಿಯನ್‌ಷಿಪ್ ಟ್ರೋಫಿಯನ್ನು ಅನಾವರಣಗೊಳಿಸಲಾಗಿದ್ದು, ಡಿಸೆಂಬರ್ 14ರಿಂದ 10 ದಿನಗಳ ಕಾಲ ವಿಶ್ವದ ಶ್ರೇಷ್ಠ ಚೆಸ್ ಆಟಗಾರರ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಚೆಸ್ ದಂತಕಥೆ ವಿಶ್ವನಾಥನ್ ಆನಂದ್, ಭಾರತದ ಯುವ ತಾರೆಗಳಾದ ಅರ್ಜುನ್ ಎರಿಗೈಸಿ, ಆರ್. ಪ್ರಜ್ಞಾನಂದ ಮತ್ತು ವಿದೇಶಿ ದಿಗ್ಗಜರಾದ ಅಲಿರೆಜಾ ಫಿರೋಜ್ಜಾ ಅವರ ಉಪಸ್ಥಿತಿಯಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಟೆಕ್ ಮಹೀಂದ್ರಾ ಗ್ಲೋಬಲ್ ಚೆಸ್ ಲೀಗ್‌ನ ಅಧ್ಯಕ್ಷ ಪಿಯೂಷ್ ದುಬೆ, "ಚೆಸ್ ಕ್ರೀಡೆಯನ್ನು ಹೊಸ ಪೀಳಿಗೆಗೆ ತಲುಪಿಸಲು ಈ ಲೀಗ್ ಅನ್ನು ರೂಪಿಸಲಾಗಿದ್ದು, ಮೂರನೇ ಆವೃತ್ತಿಯು ಈ ಗುರಿಯತ್ತ ನಮ್ಮ ಮಹತ್ವದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ವಿಶ್ವದರ್ಜೆಯ ಆಟಗಾರರು, ಅಭಿಮಾನಿಗಳ ಅದ್ಭುತ ಪಾಲ್ಗೊಳ್ಳುವಿಕೆ ಮತ್ತು ಹೊಸತನದೊಂದಿಗೆ ಈ ಆವೃತ್ತಿಯು ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಿರಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಮಾತನಾಡಿ, "ಜಿಸಿಎಲ್, ಜಾಗತಿಕ ಮಟ್ಟದಲ್ಲಿ ಚೆಸ್‌ನ ಜನಪ್ರಿಯತೆಯನ್ನು ಹೆಚ್ಚಿಸುವ ಫಿಡೆಯ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಲೀಗ್, ವಿಶ್ವದ ಶ್ರೇಷ್ಠ ಆಟಗಾರರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಕ್ರೀಡೆಯನ್ನು ಇನ್ನಷ್ಟು ಆಕರ್ಷಕ ಮತ್ತು ಎಲ್ಲರಿಗೂ ತಲುಪುವಂತೆ ಮಾಡಿದೆ," ಎಂದರು.
ಈ ಆವೃತ್ತಿಯಲ್ಲಿ ಆರು ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 34 ಪಂದ್ಯಗಳು ನಡೆಯಲಿವೆ. ಎರಡು ಬಾರಿ ಚಾಂಪಿಯನ್ ಆಗಿರುವ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅವರ ತಂಡದ ವ್ಯವಸ್ಥಾಪಕ ಆಕಾಶ್ ಪ್ರೇಮ್‌ಸೆನ್, "ಚಾಂಪಿಯನ್ ಆಗಿ ಕಣಕ್ಕಿಳಿಯುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ, ಪ್ರಬಲ ಪೈಪೋಟಿಯ ನಡುವೆಯೂ ಪ್ರಶಸ್ತಿ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ," ಎಂದು ಹೇಳಿದರು.
ಇದೇ ವೇಳೆ, ಭಾರತದ ಆಟಗಾರರು ವಿಶ್ವ ಚಾಂಪಿಯನ್ ಆಗಿರುವುದು ಲೀಗ್‌ಗೆ ವಿಶೇಷ ಮಹತ್ವ ತಂದುಕೊಟ್ಟಿದೆ. ವಿಶ್ವ ಚಾಂಪಿಯನ್ ಗುಕೇಶ್ ಡಿ., ಅರ್ಜುನ್ ಎರಿಗೈಸಿ, ಆರ್. ಪ್ರಜ್ಞಾನಂದ, ಮತ್ತು ವಿದಿತ್ ಗುಜರಾತಿ ಅವರಂಥ ಆಟಗಾರರು ಭಾರತವನ್ನು ಚೆಸ್‌ನ ಜಾಗತಿಕ ಶಕ್ತಿಯಾಗಿ ರೂಪಿಸಿದ್ದಾರೆ. ಪಿಬಿಜಿ ಅಲಾಸ್ಕನ್ ನೈಟ್ಸ್ ತಂಡದ ಮಾಲೀಕ ಪುನಿತ್ ಬಾಲನ್ ಮಾತನಾಡಿ, "ಗುಕೇಶ್ ಮತ್ತು ಅರ್ಜುನ್ ನಮ್ಮ ತಂಡದಲ್ಲಿರುವುದರಿಂದ, ತವರಿನಲ್ಲೇ ಆಡುವುದು ವಿಶೇಷ ಶಕ್ತಿಯನ್ನು ನೀಡಲಿದೆ," ಎಂದರು.
ಲೀಗ್‌ನಲ್ಲಿ ಅಲಿರೆಜಾ ಫಿರೋಜ್ಜಾ, ಫ್ಯಾಬಿಯಾನೊ ಕರುವಾನ, ಹಿಕಾರು ನಕಮುರಾ, ಮ್ಯಾಕ್ಸಿಮ್ ವಾಶಿಯರ್-ಲಾಗ್ರೇವ್ ಅವರಂತಹ ವಿಶ್ವದ ದಿಗ್ಗಜರು ಹಾಗೂ ಮಹಿಳಾ ವಿಭಾಗದಲ್ಲಿ ಹೌ ಯಿಫಾನ್, ಜು ಜಿನರ್ ಅವರಂಥ ಆಟಗಾರರು ಭಾಗವಹಿಸಲಿದ್ದಾರೆ.
ಡಬಲ್ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯುವ ಈ ಲೀಗ್‌ನ ಫೈನಲ್ ಪಂದ್ಯ ಡಿಸೆಂಬರ್ 23 ರಂದು ನಡೆಯಲಿದೆ. ಭಾರತದಲ್ಲಿ ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಪಂದ್ಯಗಳು ನೇರಪ್ರಸಾರ ಕಾಣಲಿವೆ. ಉದ್ಘಾಟನಾ ಪಂದ್ಯದಲ್ಲಿ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ಮತ್ತು ಆಲ್ಪೈನ್ ಎಸ್‌ಜಿ ಪೈಪರ್ಸ್ ತಂಡಗಳು ಸೆಣಸಾಡಲಿವೆ.