ಕ್ರೀಡೆ

ಈ ಓವರ್​ ಆ್ಯಕ್ಷನ್ ಬೇಡ ನಮ್ಮ ನಿರೀಕ್ಷೆಯೇ ಬೇರೆ! ಮಾಕ್ಸಿಗೆ ಆರ್​ಸಿಬಿ ಅಭಿಮಾನಿಗಳಿಂದ ಕ್ಲಾಸ್​

ನವದೆಹಲಿ: ಕಳೆದ ಭಾನುವಾರ (ಏಪ್ರಿಲ್​ 28) ಗುಜರಾತ್ ಟೈಟಾನ್ಸ್ ಮತ್ತು ಆರ್​ಸಿಬಿ ನಡುವೆ ಅಹಮದಾಬಾದ್‌ನಲ್ಲಿ ಐಪಿಎಲ್​ ಪಂದ್ಯ ನಡೆದಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಗುಜರಾತ್ ತಂಡ ನೀಡಿದ್ದ 201 ರನ್​ಗಳ ಗುರಿ ಬೆನ್ನತ್ತಿದ ಆರ್​ಸಿಬಿ ಕೇವಲ 16 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ ಭರ್ಜರಿ ಜಯಭೇರಿ ಬಾರಿಸಿತು. ವಿಲ್ ಜಾಕ್ಸ್ (100) ಅಜೇಯ ಶತಕ ಮತ್ತು ವಿರಾಟ್ ಕೊಹ್ಲಿ (70*) ಅರ್ಧಶತಕದೊಂದಿಗೆ ಮಿಂಚಿದರು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಈ ಪಂದ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ತಡವಾಗಿ ಬೆಳಕಿಗೆ ಬಂದಿದೆ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ಎಂಬುದನ್ನು ನಾವೀಗ ನೋಡೋಣ.

ಆರ್​ಸಿಬಿ ಸ್ಟಾರ್ ಆಟಗಾರ ಗ್ಲೇನ್​ ಮ್ಯಾಕ್ಸ್‌ವೆಲ್ ಡ್ರೆಸ್ಸಿಂಗ್ ರೂಮ್‌ನಿಂದ ಡಗೌಟ್‌ಗೆ ಹೋಗುವಾಗ ಅಭಿಮಾನಿಗಳು ಅವರನ್ನು ನೋಡಿ ಜೋರಾಗಿ ಕೂಗುತ್ತಾರೆ. ಕಿರುಚಾಟ ಹೆಚ್ಚಾದ್ದರಿಂದ ಅವರಿಗೆ ಮ್ಯಾಕ್ಸಿ ಸ್ವೀಟ್ ವಾರ್ನಿಂಗ್ ನೀಡುತ್ತಾರೆ. ತಮ್ಮ ಬೆರಳಿನಿಂದ ಬಾಯಿ ಮುಚ್ಚಿ, ಸೈಲೆಂಟ್ ಆಗಿರಿ ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಆ ನಂತರ ಮ್ಯಾಕ್ಸಿ ಅಭಿಮಾನಿಗಳ ಜತೆಗೂಡಿ ಆರ್​ಸಿಬಿ... ಆರ್​ಸಿಬಿ ಎಂದು ಘೋಷಣೆ ಕೂಗುತ್ತಾರೆ. ಇದಿಷ್ಟು ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ. ಆದರೆ, ಮ್ಯಾಕ್ಸಿಯ ಈ ವರ್ತನೆ ನೋಡಿದ ಕೆಲ ಅಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ನಿಮ್ಮ ಕೊಡುಗೆ ಏನೂ ಇಲ್ಲ. ಅಲ್ಲದೆ, ನೀವು ಈ ಬಾರಿ ಉತ್ತಮವಾಗಿ ಆಡೇ ಇಲ್ಲ. ಏನೂ ಮಾಡದಿದ್ದರೂ ಈ ರೀತಿ ಓವರ್​ ಆ್ಯಕ್ಷನ್​ ಮಾಡುವುದು ಸರಿಯಲ್ಲ. ಮೊದಲು ಫಾರ್ಮ್​ಗೆ ಬನ್ನಿ, ನಿಮ್ಮಿಂದ ನಾವು ವಿನಾಶಕಾರಿ ಬ್ಯಾಟಿಂಗ್​ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಮ್ಯಾಕ್ಸ್​ವೆಲ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸತತ ವೈಫಲ್ಯಗಳನ್ನು ಅನುಭವಿಸಿರುವ ಮ್ಯಾಕ್ಸ್​ವೆಲ್​ ಅವರನ್ನು ಸದ್ಯ ಆರ್​ಸಿಬಿ ಆಡುವ ಹನ್ನೊಂದರ ಬಳಗದಿಂದ ಹೊರಗಿಟ್ಟಿದೆ.

ಇನ್ನು ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಫೈನಲ್ ಇದೇ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆಗ ವಿರಾಟ್ ಕೊಹ್ಲಿ ವಿಕೆಟ್ ಪಡೆದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಪ್ರೇಕ್ಷಕರನ್ನು ನೋಡಿ ಮೌನವಾಗಿರಿ ಎಂದು ಬಾಯಿ ಮೇಲೆ ಬೆರಳಿಟ್ಟಿದ್ದರು. ಈಗ ಮ್ಯಾಕ್ಸ್‌ವೆಲ್ ಕೂಡ ಅದೇ ಮೈದಾನದಲ್ಲಿ ಅದೇ ರೀತಿ ಮಾಡಿದ್ದಾರೆ. ಈ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. (ಏಜೆನ್ಸೀಸ್​)