ಕ್ರೀಡೆ

ಬಿಗ್ ಬ್ಯಾಷ್ ಟಿ20: ನಾಯಕತ್ವದಿಂದ ಕೆಳಗಿಳಿದ ಮ್ಯಾಕ್ಸ್‌ವೆಲ್!

ಆಸ್ಟ್ರೇಲಿಯಾ: ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕತ್ವದ ಸ್ಥಾನದಿಂದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದಾರೆ.

ಬಿಗ್​ಬ್ಯಾಷ್ ಟಿ20 ಲೀಗ್ 2024 ರಲ್ಲಿ ಮ್ಯಾಕ್ಸ್‌ವೆಲ್ ನಾಯಕತ್ವದ ಮೆಲ್ಬೋರ್ನ್ ಸ್ಟಾರ್ಸ್ ತಂಡ ಕಳಪೆ ಪ್ರದರ್ಶನ ನೀಡಿದ್ದು, ತಂಡದ ಈ ಕಳಪೆ ಪ್ರದರ್ಶನವು ಮ್ಯಾಕ್ಸ್‌ವೆಲ್ ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಬಿಗ್ ಬ್ಯಾಷ್ ಟಿ20 ಲೀಗ್ ಇದೀಗ ಅಂತಿಮ ಹಂತವನ್ನು ತಲುಪಿದೆ. ಈ ಮಧ್ಯೆ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಅಘಾತಕಾರಿ ವಿಷಯವಾಗಿದೆ.

ಮ್ಯಾಕ್ಸ್‌ವೆಲ್‌ 2018ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ತಂಡ ಈ ಸೀಸನ್​ನ ಲೀಗ್ ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಗಳಿಸಿದ್ದು, ಇದು ತಂಡದ ನೀರಸ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಮೆಲ್ಬೋರ್ನ್ ಸ್ಟಾರ್ಸ್ ತಂಡ ಆಡಿರುವ 10 ಪಂದ್ಯಗಳ ಪೈಕಿ ಈ ತಂಡ 6 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದರೆ, ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ತಮ್ಮ ತಂಡದ ಆಟಗಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಮ್ಯಾಕ್ಸ್‌ವೆಲ್ ಮುಂದಿನ ಸೀಸನ್​ನಿಂದ ತಂಡದಲ್ಲಿ ಕೇವಲ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ.

ಹೋಬರ್ಟ್ ಹರಿಕೇನ್ಸ್ ತಂಡದ ವಿರುದ್ಧ 7 ರನ್ ಅಂತರದ ಸೋಲಿನ ನಂತರ ಮ್ಯಾಕ್ಸ್‌ವೆಲ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳನ್ನು ಮ್ಯಾಕ್ಸ್‌ವೆಲ್ ನಾಯಕತ್ವದ ತಂಡ ಸತತವಾಗಿ ಗೆದ್ದಿತ್ತು. ಇದರೊಂದಿಗೆ ತಂಡ ಪ್ಲೇ ಆಫ್ ಗೆ ತಲುಪುದು ಖಚಿತವಾಗಿತ್ತು. ಆದರೆ ಲೀಗ್ ಹಂತದ ಕೊನೆಯ 3 ಪಂದ್ಯಗಳನ್ನು ಸೋತು ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಗುಳಿದಿದೆ.