ಕ್ರೀಡೆ

ಗ್ಲೆನ್​ ಮ್ಯಾಕ್ಸ್​ವೆಲ್​ ಭರ್ಜರಿ ಫಾರ್ಮ್​! ಆರ್​ಸಿಬಿ ಕೈಬಿಟ್ಟ ಬಳಿಕ ಪಂಜಾಬ್​ ಕಿಂಗ್ಸ್​ಗೆ ಖುಲಾಯಿಸಿತು ಲಕ್! Glenn Maxwell

Glenn Maxwell : ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ ( BBL )ನಲ್ಲಿ ಮಿಂಚುತ್ತಿದ್ದಾರೆ. ಈ ಸೀಸನ್​ನಲ್ಲಿ ಮ್ಯಾಕ್ಸಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 59.40 ರನ್​ ಸರಾಸರಿ ಮತ್ತು 194.11 ಸ್ಟ್ರೈಕ್ ರೇಟ್‌ನಲ್ಲಿ ಮ್ಯಾಕ್ಸಿ 297 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ.

ಈ ಬಿಬಿಎಲ್​ ಸೀಸನ್​ನಲ್ಲಿ ಮ್ಯಾಕ್ಸಿ ಅವರು ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟು 26 ಸಿಕ್ಸರ್‌ಗಳನ್ನು ಬಾರಿಸಿದ್ದು, ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮ್ಯಾಕ್ಸಿ ಅಜೇಯ ಪ್ರದರ್ಶನ ನೀಡಿದ್ದಾರೆ. ಅಂದಹಾಗೆ ಮ್ಯಾಕ್ಸಿ, ಮೆಲ್ಬೋರ್ನ್​ ಸ್ಟಾರ್ಸ್​ ತಂಡದ ಪರ ಆಡುತ್ತಿದ್ದಾರೆ.

ಇತ್ತೀಚೆಗೆ ಹೋಬಾರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ, ಮ್ಯಾಕ್ಸಿ ಬ್ಯಾಟಿಂಗ್​ನಲ್ಲಿ ಬಿರುಗಾಳಿ ಎಬ್ಬಿಸಿದರು. ಕೇವಲ 32 ಎಸೆತಗಳಲ್ಲಿ 5 ಬೌಂಡರಿ ಮತ್ತು ಅರ್ಧ ಡಜನ್ ಸಿಕ್ಸರ್‌ಗಳ ಸಹಾಯದಿಂದ ಅಜೇಯ 76 ರನ್ ಗಳಿಸಿದರು. ಇದರ ಪರಿಣಾಮವಾಗಿ, ಮೆಲ್ಬೋರ್ನ್ ಸ್ಟಾರ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು.

ಮ್ಯಾಕ್ಸ್‌ವೆಲ್ ಜೊತೆಗೆ ಬ್ಯೂ ವೆಬ್‌ಸ್ಟರ್ (51 ರನ್​, 31 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ನಾಯಕ ಮಾರ್ಕಸ್ ಸ್ಟೊಯಿನಿಸ್ (32 ರನ್​, 19 ಎಸೆತ, 4 ಬೌಂಡರಿ, 3 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಹರಿಕೇನ್ಸ್ ಬೌಲರ್‌ಗಳಲ್ಲಿ ಮಾರ್ಕಸ್ ಬೀನ್, ನಾಥನ್ ಇಲ್ಲಿಸ್, ಮಿಚೆಲ್ ಓವನ್ ಮತ್ತು ನಿಖಿಲ್ ಚೌಧರಿ ತಲಾ ಒಂದು ವಿಕೆಟ್ ಪಡೆದರು.

220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹರಿಕೇನ್ಸ್ ತಂಡವು 19.3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 179 ರನ್​ಗಳಿಗೆ ಆಲೌಟ್​ ಆಗಿದೆ. ಮಿಚೆಲ್ ಓವನ್ (38), ನಿಖಿಲ್​ ಚೌಧರಿ (27), ಮ್ಯಾಥ್ಯೂ ವೇಡ್​ (21), ನಾಥನ್​ ಎಲ್ಲಿಸ್​ (40) ಮತ್ತು ಟಿಮ್​ ಡೇವಿಡ್​ (27) ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರನು ಕೂಡ ಎರಡಂಕಿಯನ್ನು ದಾಟಲಿಲ್ಲ. ಅಂತಿಮವಾಗಿ ಹೋಬಾರ್ಟ್ ಹರಿಕೇನ್ಸ್ ತಂಡ 40 ರನ್​ಗಳ ಅಂತರದಿಂದ ಸೋಲು ಅನುಭವಿಸಿದೆ. ಮೆಲ್ಬೋರ್ನ್​ ಸ್ಟಾರ್ಸ್​ ಪರ ಮಾರ್ಕ್​ ಸ್ಟೆಕೆಟ್​ 4, ಜೋಯಲ್​ ಪ್ಯಾರಿಸ್​ 2, ಉಸ್ಮಾನ್​ ಮಿರ್​ 2, ಮಾರ್ಕಸ್​ ಸ್ಟೋನಿಸ್​ 1 ಮತ್ತು ಟಾಮ್​ ಕರನ್​ 1 ವಿಕೆಟ್​ ಪಡೆದರು.

ಪಂಜಾಬ್​ ಕಿಂಗ್ಸ್​ಗೆ ಲಕ್​

ಕಳೆದ 4 ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಕ್ರಮವಾಗಿ 20*(10), 58*(32), 90(52) ಹಾಗೂ 76*(32) ರನ್​ ಗಳಿಸಿದ್ದಾರೆ. ಹೀಗಾಗಿ ಪಂಜಾಬ್​ ಕಿಂಗ್ಸ್​ ತಂಡಕ್ಕೆ ಇದು ಖುಷಿಯ ವಿಚಾರವಾಗಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ಮ್ಯಾಕ್ಸ್‌ವೆಲ್ ಅವರನ್ನು 4.2 ಕೋಟಿ ರೂ.ಗೆ ಖರೀದಿಸಿದೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ಮ್ಯಾಕ್ಸ್‌ವೆಲ್ ಭಾರಿ ನಿರಾಶೆ ಮೂಡಿಸಿದ್ದರು. 10 ಪಂದ್ಯಗಳಲ್ಲಿ ಕೇವಲ 52 ರನ್ ಗಳಿಸಿದ್ದರು. ಹೀಗಾಗಿ ಹರಾಜಿಗೂ ಮುನ್ನವೇ ಆರ್​ಸಿಬಿ ಮ್ಯಾಕ್ಸಿ ಅವರನ್ನು ತಂಡದಿಂದ ಕೈಬಿಟ್ಟಿತು. ಐಪಿಎಲ್-2025 ಕ್ಕಿಂತ ಮೊದಲು ಮ್ಯಾಕ್ಸ್‌ವೆಲ್ ಫಾರ್ಮ್‌ಗೆ ಮರಳಿರುವುದು ಪಂಜಾಬ್ ತಂಡಕ್ಕೆ ವರವಾಗಿದೆ. ಮ್ಯಾಕ್ಸಿ ಇದೇ ಫಾರ್ಮ್‌ನಲ್ಲಿ ಮುಂದುವರಿದರೆ, ಪಂಜಾಬ್​ ತಂಡಕ್ಕೆ ಲಾಭವಾಗಲಿದೆ ಎಂದು ಅಭಿಮಾನಿಗಳು ಬಯಸಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದ ಪಂಜಾಬ್ ಕಿಂಗ್ಸ್ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. (ಏಜೆನ್ಸೀಸ್​)