ಕ್ರೀಡೆ

ಟೀಮ್​ ಇಂಡಿಯಾದ ಈ ಬೌಲರ್​ ಕಂಡರೆ ಮ್ಯಾಕ್ಸಿಗೆ ಭಯವಂತೆ! ನನ್ನಿಂದ ಆಡಲಾಗದು ಎಂದ ಮ್ಯಾಕ್ಸ್​ವೆಲ್​ | Glenn Maxwell

Glenn Maxwell : ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಕ್ರೀಡಾಭಿಮಾನಿಗಳ ಮನದಲ್ಲಿ ಭದ್ರವಾಗಿ ನೆಲೆಯೂರಿರುವ ಮ್ಯಾಕ್ಸಿ, ಕ್ರಿಕೆಟ್​ ಲೋಕದ ದಂತಕತೆಯಾಗುವುದರಲ್ಲಿ ಸಂದೇಹವೇ ಇಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಮ್ಯಾಕ್ಸ್‌ವೆಲ್ ಆಡಿದ ಇನ್ನಿಂಗ್ಸ್ ಎಂದೆಂದಿಗೂ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಉಳಿಯುತ್ತದೆ. ಅಫ್ಘಾನಿಸ್ತಾನದ ಮೇಲೆ ಮೃಗದಂತೆ ದಾಳಿ ನಡೆಸಿ ದ್ವಿಶತಕ ಬಾರಿಸಿ ಸೋಲಬೇಕಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದನ್ನು ಮರೆಯುವಂತಿಲ್ಲ. ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಿದೆ ಅಂದರೆ ಅದಕ್ಕೆ ಮ್ಯಾಕ್ಸ್​ವೆಲ್​ ಕೂಡ ಪ್ರಮುಖ ಕಾರಣ.

ಮೈದಾನಕ್ಕೆ ಇಳಿದರೆ ಹಸಿದ ಸಿಂಹದಂತೆ ಬೇಟೆಯಾಡುವ ಈ ರಣಬೇಟೆಗಾರನನ್ನು ಕಂಡರೆ ಅನೇಕ ಬೌಲರ್​ಗಳೇ ನಡುಗುತ್ತಾರೆ. ಆದರೆ, ಮ್ಯಾಕ್ಸಿಗೆ ಈ ಓರ್ವ ಬೌಲರ್​ ಕಂಡರೆ ಮಾತ್ರ ತುಂಬಾ ಭಯವಂತೆ. ಅದು ಕೂಡ ಟೀಮ್​ ಇಂಡಿಯಾ ಬೌಲರ್​ ಎಂಬುದು ವಿಶೇಷ. ಆ ಬೌಲರ್​ ಬೇರೆ ಯಾರೂ ಅಲ್ಲ ಡೆತ್​ ಓವರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬುಮ್ರಾ.

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಟೀಮ್​ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಶ್ಲಾಘಿಸಿದ್ದಾರೆ. ಬುಮ್ರಾ ಅವರು ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್ ಎಂದು ಮ್ಯಾಕ್ಸಿ ಹೇಳಿದ್ದಾರೆ. ಅಂದಹಾಗೆ ಮ್ಯಾಕ್ಸಿ, ಆಸ್ಟ್ರೇಲಿಯಾ ತಂಡದಲ್ಲಿ ಮತ್ತು ಐಪಿಎಲ್ ಪಂದ್ಯಗಳಲ್ಲಿ ಬುಮ್ರಾ ಅವರ ಬೌಲಿಂಗ್ ಅನ್ನು ಹಲವು ಬಾರಿ ಎದುರಿಸಿದ್ದಾರೆ.

ESPN-Cricinfo ಹಂಚಿಕೊಂಡ ವಿಡಿಯೋದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಬುಮ್ರಾರನ್ನು ಕೊಂಡಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್. ಅವರು ಎಲ್ಲಾ ಸ್ವರೂಪಗಳಲ್ಲಿ ಸಾರ್ವಕಾಲಿಕ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮುತ್ತಿದ್ದಾರೆ. ಪಂದ್ಯದ ಕೊನೆಯ ಗಳಿಗೆಯಲ್ಲೂ ತಿರುವು ನೀಡಬಲ್ಲರು. ಅವರು ಅದ್ಭುತ ಯಾರ್ಕರ್ ಬೌಲಿಂಗ್ ಮಾಡುವುದಲ್ಲದೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಸ್ಲೋ ಬಾಲ್ ಕೂಡ ಮಾಡಬಲ್ಲರು. ಬುಮ್ರಾ ಅವರು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓರ್ವ ಉತ್ತಮ ವೇಗದ ಬೌಲರ್‌ಗೆ ಅಗತ್ಯವಿರುವ ಎಲ್ಲ ಅಸ್ತ್ರಗಳನ್ನು ಬುಮ್ರಾ ಹೊಂದಿದ್ದಾರೆ. ಅವರು ಬೌಲಿಂಗ್​ಗೆ ಬಂದರೆ ಭಯವಾಗುತ್ತದೆ. ಅವರ ಬೌಲಿಂಗ್​ನಲ್ಲಿ ಆಡಲಾರೆ ಎಂದು ಮ್ಯಾಕ್ಸಿ ಹೇಳಿದ್ದಾರೆ.

ಇನ್ನು ಜಸ್ಪ್ರೀತ್ ಬುಮ್ರಾ ಅವರು ವೈವಿಧ್ಯಮಯ ಹೊಡೆತಗಳಿಂದಲೇ ಫೇಮಸ್​ ಆಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ಇದುವರೆಗೆ 15 ಇನ್ನಿಂಗ್ಸ್‌ಗಳಲ್ಲಿ ಮ್ಯಾಕ್ಸಿಯನ್ನು ಏಳು ಬಾರಿ ಔಟ್ ಮಾಡಿದ್ದಾರೆ.

ಇನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಮುಂದಿನ ವರ್ಷ ಜನವರಿವರೆಗೂ ಈ ಸರಣಿ ನಡೆಯಲಿದ್ದು, ರೋಹಿತ್ ಸೇನೆಗೆ ಇದು ಅತ್ಯಂತ ಪ್ರಮುಖ ಸರಣಿಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಬುಮ್ರಾ​ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ. ಇನ್ನು ಬುಮ್ರಾ ಅವರು ಈಗ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. (ಏಜೆನ್ಸೀಸ್​)