ಲಂಡನ್: ಎಜ್ಬಾಸ್ಟನ್ ಟೆಸ್ಟ್ ಒಂದರಲ್ಲೇ ಬರೋಬ್ಬರಿ 34 ದಾಖಲೆಗಳನ್ನು ಅಳಿಸಿಹಾಕಿರುವ ಭಾರತ ಟೆಸ್ಟ್ ತಂಡದ ನಾಯಕ ಹಾಗೂ ಬ್ಯಾಟರ್ ಶುಭಮಾನ್ ಗಿಲ್ ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಸರಣಿಯ ಉಳಿದ 3 ಪಂದ್ಯಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುವ ಅವಕಾಶವನ್ನು ಹೊಂದಿದ್ದಾರೆ. ಸರಣಿಯ ಮೊದಲ 2 ಪಂದ್ಯಗಳಲ್ಲೇ 3 ಶತಕಗಳ ಸಹಿತ 585 ರನ್ ಸಿಡಿಸಿರುವ ಗಿಲ್, ಮುಂದಿನ ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್, ಸುನೀಲ್ ಗಾವಸ್ಕರ್ ಮತ್ತು ಡಾನ್ ಬ್ರಾಡ್ಮನ್ರಂಥ ದಿಗ್ಗಜರ ದಾಖಲೆಗಳನ್ನು ಮುರಿಯುವ ನಿರೀೆ ಮೂಡಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ಗರಿಷ್ಠ ರನ್: ರಾಹುಲ್ ದ್ರಾವಿಡ್ 2002ರಲ್ಲಿ 4 ಪಂದ್ಯಗಳ ಸರಣಿಯಲ್ಲಿ 602 ರನ್ ದಾಖಲಿಸಿರುವುದು, ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್ ಗಳಿಸಿರುವ ಗರಿಷ್ಠ ರನ್ ಆಗಿದೆ. ಗಿಲ್ ಇನ್ನು ಸರಣಿಯ ಉಳಿದ 3 ಪಂದ್ಯಗಳಲ್ಲಿ 18 ರನ್ ಗಳಿಸಿದರೂ, 23 ವರ್ಷ ಹಿಂದಿನ ದ್ರಾವಿಡ್ ದಾಖಲೆಯನ್ನು ಮುರಿಯಲಿದ್ದಾರೆ. ಯಶಸ್ವಿ ಜೈಸ್ವಾಲ್ ಕಳೆದ ವರ್ಷ ತವರಿನ ಸರಣಿಯಲ್ಲಿ 712 ರನ್ ಗಳಿಸಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್ನ ಗರಿಷ್ಠ ಗಳಿಕೆಯಾಗಿದೆ. ಇನ್ನು 127 ರನ್ ಗಳಿಸಿದರೆ ಗಿಲ್ ಇದನ್ನೂ ಹಿಂದಿಕ್ಕಬಹುದು.
ಭಾರತ ಪರ ಸರಣಿಯೊಂದರಲ್ಲಿ ಗರಿಷ್ಠ ರನ್: ಸುನೀಲ್ ಗಾವಸ್ಕರ್ 1970-71ರ ವೆಸ್ಟ್ ಇಂಡೀಸ್ ಪ್ರವಾಸದ 4 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 774 ರನ್ ಸಿಡಿಸಿರುವುದು ಸರಣಿಯೊಂದರಲ್ಲಿ ಭಾರತ ಪರ ಗರಿಷ್ಠ ರನ್ ಆಗಿದೆ. ಗಿಲ್ ಇನ್ನು 190 ರನ್ ಗಳಿಸಿದರೆ ಗಾವಸ್ಕರ್ರ 54 ವರ್ಷ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ. ಇನ್ನು ಗಾವಸ್ಕರ್ 1978-79ರಲ್ಲಿ ವಿಂಡೀಸ್ ಎದುರಿನ 6 ಟೆಸ್ಟ್ಗಳಲ್ಲಿ 732 ರನ್ ಗಳಿಸಿರುವುದು, ಭಾರತೀಯ ನಾಯಕನೊಬ್ಬ ಸರಣಿಯೊಂದರಲ್ಲಿ ಗಳಿಸಿರುವ ಗರಿಷ್ಠ ರನ್ ಆಗಿದೆ. ಗಿಲ್ ಇನ್ನು 148 ರನ್ ಗಳಿಸಿದರೆ, ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ನಾಯಕ ಎನಿಸಲಿದ್ದಾರೆ.
ಸಾವಿರ ರನ್ ಚಾನ್ಸ್!
ಆಸ್ಟ್ರೆಲಿಯಾದ ದಂತಕಥೆ ಡಾನ್ ಬ್ರಾಡ್ಮನ್ 1930ರಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ 5 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 974 ರನ್ ಸಿಡಿಸಿರುವುದು, ಸರಣಿಯೊಂದರಲ್ಲಿ ದಾಖಲಾಗಿರುವ ಗರಿಷ್ಠ ರನ್ ವಿಶ್ವದಾಖಲೆಯಾಗಿದೆ. ಗಿಲ್ ಸರಣಿಯ ಉಳಿದ 3 ಪಂದ್ಯಗಳಲ್ಲಿ 390 ರನ್ ಗಳಿಸಿದರೆ, 95 ವರ್ಷ ಹಳೆಯ ಈ ದಾಖಲೆ ಮುರಿಯುವ ಅವಕಾಶವನ್ನು ಹೊಂದಿದ್ದಾರೆ.
ಬ್ರಾಡ್ಮನ್ 1936-37ರ ಆಶಸ್ನಲ್ಲಿ 810 ರನ್ ಗಳಿಸಿದ್ದು, 5 ಪಂದ್ಯಗಳ ಸರಣಿಯೊಂದರಲ್ಲಿ ಗರಿಷ್ಠ ರನ್ ದಾಖಲೆಯಾಗಿದೆ. ಇನ್ನು 225 ರನ್ ಗಳಿಸಿದರೆ ಗಿಲ್ ಇದನ್ನೂ ಮುರಿಯಬಹುದಾಗಿದೆ. ಅಲ್ಲದೆ ಗಿಲ್ ಇನ್ನು 415 ರನ್ ಗಳಿಸಿದರೆ, ಟೆಸ್ಟ್ ಸರಣಿಯೊಂದರಲ್ಲಿ ಸಾವಿರ ರನ್ ಗಳಿಸಿದ ವಿಶ್ವದ ಮೊಟ್ಟಮೊದಲ ಬ್ಯಾಟರ್ ಎನಿಸಲಿದ್ದಾರೆ. ಈ ಮೂಲಕ ಗಿಲ್ ನಾಯಕನಾಗಿ ಅತಿವೇಗದ ಸಾವಿರ ರನ್ ಸಿಡಿಸಿದ ಸಾಧನೆಯನ್ನೂ ಮಾಡಬಹುದು. ಬ್ರಾಡ್ಮನ್ ನಾಯಕನಾಗಿ 11 ಇನಿಂಗ್ಸ್ಗಳಲ್ಲಿ ಸಾವಿರ ರನ್ ಗಳಿಸಿದ್ದು ಹಾಲಿ ದಾಖಲೆಯಾಗಿದೆ. ಗಾವಸ್ಕರ್ 14 ಇನಿಂಗ್ಸ್ಗಳಲ್ಲಿ ಸಾವಿರ ರನ್ ಗಳಿಸಿದ್ದು, ಭಾರತೀಯ ನಾಯಕನ ದಾಖಲೆಯಾಗಿದೆ.