ಕ್ರೀಡೆ

ದೇಣಿಗೆಗಾಗಿ ಹರ್ಷಲ್​ ಗಿಬ್ಸ್ ಬ್ಯಾಟ್ ಹರಾಜು; ಕೋವಿಡ್​ 19 ವಿರುದ್ಧ ಹೋರಾಟಕ್ಕೆ ದೇಣಿಗೆ

ಜೊಹಾನ್ಸ್​ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಹರ್ಷಲ್ ಗಿಬ್ಸ್, 2006ರಲ್ಲಿ 175 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆಯ ರನ್ ಚೇಸಿಂಗ್​ಗೆ ನೆರವಾಗಿದ್ದ ಬ್ಯಾಟ್ ಹರಾಜು ಹಾಕಲು ಮುಂದಾಗಿದ್ದಾರೆ. ಇದರಿಂದ ಬಂದ ಮೊತ್ತವನ್ನು ಅವರು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಲಿದ್ದಾರೆ. ವಾಂಡರರ್ಸ್ ಮೈದಾನದಲ್ಲಿ ನಡೆದ ಈ ಸ್ಮರಣೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 435 ರನ್​ಗಳ ಬೃಹತ್ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ದಕ್ಷಿಣ ಆಫ್ರಿಕಾ ತಂಡ ವಿಶ್ವದಾಖಲೆ ಬರೆದಿತ್ತು. ಆಸ್ಟ್ರೇಲಿಯಾ 4 ವಿಕೆಟ್​ಗೆ 434 ರನ್ ಗಳಿಸಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 400 ಪ್ಲಸ್ ಮೊತ್ತ ಪೇರಿಸಿದ ಮೊದಲ ತಂಡವೆನಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡ ಒಂದು ಎಸೆತ ಬಾಕಿ ಇರುವಂತೆಯೇ 438 ರನ್ ಗಳಿಸುವ ಮೂಲಕ 1 ವಿಕೆಟ್​ನಿಂದ ರೋಚಕ ಗೆಲುವು ದಾಖಲಿಸಿತ್ತು. ಈ ಮೂಲಕ 5 ಪಂದ್ಯಗಳ ಸರಣಿಯನ್ನೂ ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತ್ತು.

ನಿಕೋಲಸ್​ ಬ್ಯಾಟ್ ಕೂಡ ಹರಾಜು: ನ್ಯೂಜಿಲೆಂಡ್ ಬ್ಯಾಟ್ಸ್​ಮನ್ ಹೆನ್ರಿ ನಿಕೋಲಸ್, ಕೋವಿಡ್-19ರ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ಸಂಗ್ರಹಿಸಲು 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡಿದ್ದ ಬಳಸಿದ್ದ ಬ್ಯಾಟ್ ಹರಾಜು ಹಾಕಲು ನಿರ್ಧರಿಸಿದ್ದಾರೆ. ಪಂದ್ಯದ ವೇಳೆ ಧರಿಸಿದ್ದ ಜೆರ್ಸಿಯನ್ನು ಯುನಿಸೆಫ್ ನ್ಯೂಜಿಲೆಂಡ್​ಗೆ ನೀಡಿದ್ದಾರೆ. ‘ತಂಡದ ಎಲ್ಲ ಆಟಗಾರರು ಸಹಿ ಹಾಕಿರುವ ಜೆರ್ಸಿಯನ್ನು ನಿಕೋಲಸ್ ನೀಡಿದ್ದು, ನಮ್ಮ ಚಾರಿಟಿ ಪ್ರೋತ್ಸಾಹಿಸುವ ದಾನಿಗಳು ಇದನ್ನು ಕೊಂಡುಕೊಳ್ಳಬಹುದು’ ಎಂದು ಯುನಿಸೆಫ್ ಹೇಳಿದೆ. ಜತೆಗೆ ಫೈನಲ್ ಪಂದ್ಯದಲ್ಲಿ ಬಳಸಿದ್ದ ಬ್ಯಾಟ್ ಹರಾಜು ಹಾಕುತ್ತಿರುವೆ ಎಂದಿದ್ದಾರೆ.