ಕ್ರೀಡೆ

ಪಾಕಿಸ್ತಾನದ ಮಾಜಿ ಕೋಚ್​ಅನ್ನು ನೇಮಿಸುವಂತೆ ಪಟ್ಟು ಹಿಡಿದ ಗೌತಿಗೆ ಶಾಕ್​ ಕೊಟ್ಟ ಬಿಸಿಸಿಐ

ನವದೆಹಲಿ: ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಯಿಂದ ಗೌತಮ್​ ಗಂಭೀರ್​ ನೂತನ ಕೋಚ್​ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅವರ ಮುಂದೆ ಬೆಟ್ಟದಷ್ಟು ಸವಾಲಿದೆ ಎಂದು ಹೇಳಬಹುದಾಗಿದೆ. ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್​ ಮುಖ್ಯ ಕೋಚ್​ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್​ ಟ್ರೋಫಿ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​, 2026ರಲ್ಲಿ ಟಿ20 ವಿಶ್ವಕಪ್​, 2027ರಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಏಕದಿನ ವಿಶ್ವಕಪ್​ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ.

ತಂಡದಲ್ಲಿ ಕೆಲವೊಂದು ಬದಲಾವಣೆಗಳತ್ತ ಗಮನ ಹರಿಸಿರುವ ಗಂಭೀರ್​ ಪ್ರಸ್ತುತ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ ಕೋಚ್​ ಸೇರಿದಂತೆ ಮಹತ್ವದ ಬದಲಾವಣೆಯತ್ತ ಗಂಭೀರ್ ಗಮನ ಹರಿಸಿದ್ದು, ಅವರ ಸ್ಥಾನಕ್ಕೆ ಬದಲಿ ಕೋಚ್​ಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗಂಭೀರ್ ಉತ್ಸುಕರಾಗಿದ್ದಾರೆ. ರೆ. ಈ ಮೂಲಕ ಟೀಮ್​ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಮ್​​ ಮುಂದಾಗಿದ್ದಾರೆ.

ಮುಖ್ಯ ಕೋಚ್​ ಮಾತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಉಳಿದ ಕೋಚಿಂಗ್​ ಸ್ಟಾಫ್​​ಗೆ ಸಂಬಂಧಿಸಿದ ವಿವರಗಳು ಇನ್ನೂ ಬಾಕಿ ಉಳಿದಿವೆ. ಆದಾಗ್ಯೂ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ, ಫೀಲ್ಡಿಂಗ್ ಕೋಚ್ ಪಾತ್ರಕ್ಕೆ ಜಾಂಟಿ ರೋಡ್ಸ್ ಅವರನ್ನು ಪರಿಗಣಿಸಲಾಗಿದೆ ಎನ್ನಲಾಗುತ್ತಿದೆ. ಕೋಲ್ಕತ ನೈಟ್​ ರೈಡರ್ಸ್​ ತಂಡದ ಸಹಾಯಕ ಕೋಚ್ ಆಗಿರುವ ಅಭಿಷೇಕ್ ನಾಯರ್ ಅವರನ್ನು ತಮ್ಮೊಂದಿಗೆ ಸೇರಿಕೊಳ್ಳಲು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಇದರೊಂದಿಗೆ ಭಾರತದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಕೂಡ ಗಂಭೀರ್ ಅವರ ಕೋಚಿಂಗ್ ತಂಡದ ಭಾಗವಾಗಲಿದ್ದಾರೆ ಎಂಬ ವದಂತಿಗಳು ಸಹ ಹರಿದಾಡುತ್ತಿವೆ. ರಿಯಾನ್ ಟೆನ್ ಡೋಸ್ಚೇಟ್ ಹಾಗೂ ಲಕ್ಷ್ಮೀಪತಿ ಬಾಲಾಜಿ ಹೆಸರು ಕೂಡ ಕೇಳಿ ಬರುತ್ತಿವೆ.

ಆದರೆ, ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಂಭೀರ್ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕೋಚ್​ ಮಾರ್ನೆ ಮಾರ್ಕೆಲ್​ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಮುಂದಾಗಿದ್ದು, ಗೌತಮ್​ರ ಈ ಬೇಡಿಕೆಯನ್ನು ಬಿಸಿಸಿಐ ನಯವಾಗಿ ತಿರಸ್ಕರಿಸಿದೆ. ಭಾರತ ತಂಡಕ್ಕೆ ತರಬೇತಿ ನೀಡಲು ಬಿಸಿಸಿಐ ಭಾರತೀಯರಿಗಾಗಿ ಹುಡುಕಾಟ ನಡೆಸುತ್ತಿದ್ದು, ವಿದೇಶಿ ನೆಲದವರನ್ನು ಪರಿಗಣಿಸದೆ ಇರಲು ನಿರ್ಧರಿಸಿದೆ. ಇದರೊಂದಿಗೆ ಗೌತಮ್​ ಗಂಭೀರ್​ರ ಐದನೇ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದ್ದು, ನೂತನ ಕೋಚ್​ಗೆ ಆರಂಭದಲ್ಲೇ ಬ್ರೇಕ್​ ಹಾಕಲು ಮುಂದಾಗಿದೆ. ಸಹಾಯಕ ಕೋಚ್​ ಹುದ್ದೆಗೆ  ಅಂತಿಮವಾಗಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.