ಕ್ರೀಡೆ

ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್.... : ದ್ರಾವಿಡ್ ಉತ್ತರಾಧಿಕಾರಿ ಗಂಭೀರ್‌ಗೆ ಟೀಕೆಗಳ ಬಿಸಿ

ಪುಣೆ: ಹಾಲಿ ವರ್ಷ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬೆನ್ನಲ್ಲೇ ಗೌತಮ್ ಗಂಭೀರ್ ಭಾರಿ ಹೈಪ್‌ನೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಿಸಿಸಿಐ ಅವರು ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು.

ಆದರೆ ಈಗ ತವರಿನ 12 ವರ್ಷಗಳ ಪ್ರಾಬಲ್ಯ ಮುಂದುವರಿಸುವಲ್ಲಿ ಭಾರತ ವಿಲವಾಗುವುದರೊಂದಿಗೆ ಗಂಭೀರ್‌ಗೆ ಅಭಿಮಾನಿಗಳ ಟೀಕೆಗಳ ಬಿಸಿ ತಟ್ಟಲಾರಂಭಿಸಿದೆ. ಗಂಭೀರ್ ಕೋಚ್ ಆಗಿ 3 ತಿಂಗಳ ಅವಧಿಯಲ್ಲೇ ಭಾರತ 2 ಪ್ರಮುಖ ಸರಣಿ ಸೋಲಿನ ಶಾಕ್ ಎದುರಿಸಿದೆ. ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ 27 ವರ್ಷಗಳ ಬಳಿಕ ಏಕದಿನ ಸರಣಿ ಸೋತಿದ್ದ ಭಾರತ ಈಗ ಕಿವೀಸ್ ವಿರುದ್ಧ ಮೊದಲ ಬಾರಿ ತವರಿನಲ್ಲಿ ಟೆಸ್ಟ್ ಸರಣಿ ಬಿಟ್ಟುಕೊಟ್ಟಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ವರೆಗೂ ಅವಧಿ ಹೊಂದಿರುವ 43 ವರ್ಷದ ಗಂಭೀರ್‌ಗೆ ಮುಂಬರುವ ಆಸೀಸ್ ಪ್ರವಾಸ ಇನ್ನಷ್ಟು ಕಠಿಣ ಸವಾಲಾಗಿ ಮಾರ್ಪಟ್ಟಿದೆ.

ನಾವೂ ಸಾಮೂಹಿಕ ವೈಲ್ಯ ಕಂಡೆವು. ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ನಿಲ್ಲಲು ವಿಲರಾದೆವು. ಇದು ಅತ್ಯಂತ ಬೇಸರದ ಸೋಲು. ನ್ಯೂಜಿಲೆಂಡ್ ತಂಡ ನಮಗಿಂತ ಉತ್ತಮವಾಗಿ ಆಡಿತು. ನಮ್ಮ ಬ್ಯಾಟರ್‌ಗಳು ಸಾಕಷ್ಟು ರನ್‌ಗಳನ್ನು ಕೂಡಿಹಾಕಲಿಲ್ಲ.

ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ

ಇದೊಂದು ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಗೆಲುವು. ವಿಶೇಷ ಅನುಭವ ನೀಡಿದೆ. ಅಪಾರ ಹೆಮ್ಮೆಯಾಗುತ್ತಿದೆ. ಶ್ರೀಲಂಕಾದಲ್ಲಿ ನಮ್ಮ ಆಟ ಕೆಟ್ಟದಾಗಿರಲಿಲ್ಲ. ಆದರೂ ಸೋತೆವು. ಭಾರತದಲ್ಲಿ ಸಕಾರಾತ್ಮಕವಾಗಿ ಆಡುವುದು ನಮ್ಮ ಗುರಿಯಾಗಿತ್ತು. ಸ್ಯಾಂಟ್ನರ್ ಎರಡೂ ಇನಿಂಗ್ಸ್‌ಗಳಲ್ಲಿ ಅಮೋಘ ದಾಳಿ ನಡೆಸಿದರು.

ಟಾಮ್ ಲಾಥಮ್, ಕಿವೀಸ್ ನಾಯಕ