ಕ್ರೀಡೆ

ಬ್ಯಾಟಿಂಗ್​ ವೇಳೆ ವಿರಾಟ್​ ಕೊಹ್ಲಿ ಹೇಳುವ ಮಂತ್ರವನ್ನು ಬಹಿರಂಗಪಡಿಸಿದ ಗೌತಮ್​ ಗಂಭೀರ್​!

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ ನಡುವಿನ ಜಗಳದಷ್ಟು ಅವರ ನಡುವಿನ ಬಾಂಧವ್ಯ ಸುದ್ದಿಯಾಗಿಲ್ಲ. ಹೀಗಾಗಿ ಬಿಸಿಸಿಐ ಇಬ್ಬರನ್ನೂ ಕೂರಿಸಿಕೊಂಡು ವಿಶೇಷ ಮಾತುಕತೆಯೊಂದನ್ನು ಆಯೋಜಿಸುವ ಮೂಲಕ ಇಬ್ಬರ ನಡುವಿನ ಬಾಂಧವ್ಯ, ಪರಸ್ಪರರ ಬಗೆಗಿನ ತಿಳುವಳಿಕೆ ಮತ್ತು ಗೌರವವನ್ನು ಕ್ರಿಕೆಟ್​ ಪ್ರೇಮಿಗಳ ಎದುರು ತೆರೆದಿಟ್ಟಿದೆ.

ಕೊಹ್ಲಿ-ಗಂಭೀರ್​ ಬ್ಯಾಟಿಂಗ್​ ಸಮಯದ ದೈವಭಕ್ತಿ ಮತ್ತು ಅದರಿಂದ ಏಕಾಗ್ರತೆಗೆ ಆಗುವ ಲಾಭದ ಬಗ್ಗೆಯೂ ಇದೇ ವೇಳೆ ಚರ್ಚಿಸಿದರು. 2009ರಲ್ಲಿ ನ್ಯೂಜಿಲೆಂಡ್​ ವಿರುದ್ಧದ ನೇಪಿಯರ್​ ಟೆಸ್ಟ್​ನಲ್ಲಿ 436 ಎಸೆತಗಳನ್ನು ಎದುರಿಸಿ 137 ರನ್​ ಬಾರಿಸುವ ಮೂಲಕ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದ ಗಂಭೀರ್​, ಆ ವೇಳೆ ಕೊನೇ 2 ದಿನಗಳ ಹೋರಾಟದ ವೇಳೆ ಹನುಮಾನ್​ ಚಾಲೀಸ ಪಠಣ ತನಗೆ ನೆರವಾಗಿತ್ತು ಎಂದರು. ಜತೆಗೆ 2014ರಲ್ಲಿ ಕೊಹ್ಲಿ ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್​ ಸರಣಿಯಲ್ಲಿ 4 ಶತಕ ಸಿಡಿಸಿದ ವೇಳೆ ಪ್ರತಿ ಎಸೆತ ಎದುರಿಸುವ ಮುನ್ನ "ಓಂ ನಮಃ ಶಿವಾಯ' ಮಂತ್ರ ಹೇಳುತ್ತಿದ್ದುದನ್ನು ಬಹಿರಂಗಪಡಿಸಿದರು.