ಕ್ರೀಡೆ

ಟೀಮ್​​ ಇಂಡಿಯಾದ ನೂತನ ಕೋಚ್​ ಗಂಭೀರ್ ಸಂಬಳ ಇಷ್ಟೊಂದಾ? ದ್ರಾವಿಡ್​ ಸಂಭಾವನೆ ಎಷ್ಟಿತ್ತು? ​

ನವದೆಹಲಿ: ಟೀಮ್​​ ಇಂಡಿಯಾದ ಮುಖ್ಯ ಕೋಚ್​ ಬಗ್ಗೆ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಟಿ20 ವಿಶ್ವಕಪ್​ ಆರಂಭವಾದಾಗಿನಿಂದಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಮಾಧ್ಯಮಗಳ ಕೂಡ ಈ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದರಿಂದ ಹೊಸ ಕೋಚ್ ಯಾರಾಗುತ್ತಾರೆ ಎಂಬುದು ಕುತೂಹಲ ಸಹಜವಾಗಿ ಮೂಡಿತ್ತು. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಕೂಡ ಆಸಕ್ತಿ ತೋರಿಸಿದ್ದರು. ಕೊನೆಗೂ ಈ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಮಂಡಳಿಯ ಕಾರ್ಯದರ್ಶಿ ಜಯ್​ ಷಾ ಅವರು ನಿನ್ನ ಅಧಿಕೃತ ಹೇಳಿಕೆ ನೀಡಿದ್ದಾರೆ.

ಗಂಭೀರ್​ ಅವರು ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆದ ಬೆನ್ನಲ್ಲೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರಲ್ಲಿ ಗಂಭೀರ್​ ಅವರು ಸಂಬಳದ ವಿಚಾರವೂ ಕೂಡ ಒಂದು. ಗಂಭೀರ್​ಗೆ ಎಷ್ಟು ಸಂಬಳ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಎಬಿಪಿ ನ್ಯೂಸ್​ ವೆಬ್​ಸೈಟ್​ ವರದಿಯ ಪ್ರಕಾರ, ಈ ಹಿಂದೆ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ವರ್ಷಕ್ಕೆ 12 ಕೋಟಿ ರೂ. ಪಡೆಯುತ್ತಿದ್ದರು. ಗೌತಮ್ ಗಂಭೀರ್ ಅವರು ಇದಕ್ಕಿಂತ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯ ಕೋಚ್​ಗೆ ವಾರ್ಷಿಕ ವೇತನ ಮಾತ್ರ ಸಿಗುವುದಿಲ್ಲ, 2019ರಲ್ಲಿ ಬಿಸಿಸಿಐ ತನ್ನ ದೈನಂದಿನ ಭತ್ಯೆ ನೀತಿಯನ್ನು ಪರಿಷ್ಕರಿಸಿದ್ದು, ಇದರ ಅಡಿಯಲ್ಲಿ ತರಬೇತುದಾರರಿಗೆ ವಿದೇಶ ಪ್ರವಾಸದಲ್ಲಿ ದಿನಕ್ಕೆ $250 (ಸುಮಾರು 21,000 ರೂಪಾಯಿ) ದೈನಂದಿನ ಭತ್ಯೆಗೆ ಅರ್ಹರಾಗಿರುತ್ತಾರೆ. ಇದು ಹಿಂದಿನ ಮೊತ್ತಕ್ಕಿಂತ ದ್ವಿಗುಣವಾಗಿದೆ. ಒಟ್ಟಾರೆ, ಗಂಭೀರ್​ ಸಂಭಾವನೆ ಕೋಟಿ ರೂ.ಗಳಲ್ಲಿದೆ. ಅಲ್ಲದೆ, ಗಂಭೀರ್ ರಾಷ್ಟ್ರೀಯ ಕರ್ತವ್ಯದಲ್ಲಿರುವಾಗ ವಿಶ್ವ ದರ್ಜೆಯ ಪ್ರಯಾಣ ಮತ್ತು ವಸತಿ ಸೌಲಭ್ಯವನ್ನು ಸಹ ಅನುಭವಿಸುತ್ತಾರೆ. ಅಂತಹ ವ್ಯವಸ್ಥೆಯನ್ನು ಮುಖ್ಯ ತರಬೇತುದಾರರಿಗೆ ಮಾಡಿಕೊಡಲಾಗುತ್ತದೆ.

ಇನ್ನು ತಂಡದ ಆಟಗಾರರ ಆಯ್ಕೆಯಲ್ಲೂ ತನಗೆ ಅಧಿಕಾರ ನೀಡಬೇಕು ಎಂದು ಗಂಭೀರ್​ ಆಗ್ರಹಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯ ವೇಳೆ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಗೌತಮ್ ಗಂಭೀರ್, 2027ರ ವಿಶ್ವಕಪ್​ವರೆಗೆ ಕೋಚ್​ ಪಾತ್ರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಸರಣಿಯನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅವರು ಐಪಿಎಲ್‌ನಲ್ಲಿ 7 ಸೀಸನ್‌ಗಳಲ್ಲಿ ಕೋಲ್ಕತ್ತ ತಂಡವನ್ನು ಮುನ್ನಡೆಸಿದರು, 2 ಟ್ರೋಫಿಗಳನ್ನು ಗೆದ್ದರು ಮತ್ತು ತಂಡವನ್ನು 5 ಬಾರಿ ಪ್ಲೇ-ಆಫ್‌ಗೆ ಕೊಂಡೊಯ್ದರು.

ಗಂಭೀರ್​ ಹೇಳಿದ್ದೇನು? ಕೋಚ್ ಆಗಿ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಪಡೆದ ಬೆನ್ನಲ್ಲೇ ಗಂಭೀರ್ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ದೇಶ ಸೇವೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ಎಂದಿದ್ದಾರೆ. ಟೀಮ್​ ಇಂಡಿಯಾಗೆ ಮರುಪ್ರವೇಶ ಮಾಡಲು ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಭಾರತ ನನ್ನ ಗುರುತು. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದಕ್ಕಿಂತ ಉತ್ತಮವಾದದ್ದೇನೂ ಜೀವನದಲ್ಲಿ ಇಲ್ಲ. ಭಾರತ ತಂಡಕ್ಕೆ ಮರುಪ್ರವೇಶ ಮಾಡಿರುವುದು ನನಗೆ ಗೌರವವಾಗಿದೆ. ಟೀಮ್​ ಇಂಡಿಯಾ ಕ್ಯಾಪ್ ಧರಿಸಲು ಕಾತರದಿಂದ ಕಾಯುತ್ತಿದ್ದೇನೆ. ಆದರೆ ಕೋಚ್ ಆಗಿ ನನ್ನ ಗುರಿ ಒಂದೇ. ಪ್ರತಿ ಭಾರತೀಯರು ಹೆಮ್ಮೆ ಪಡುವಂತೆ ಮಾಡುವುದು ನನ್ನ ಗುರಿಯಾಗಿದೆ. ಮೆನ್ ಇನ್ ಬ್ಲೂ 140 ಕೋಟಿ ಜನರ ಕನಸುಗಳನ್ನು ಹೊತ್ತಿದೆ. ಆ ಕನಸುಗಳನ್ನು ನನಸು ಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.

ಗಂಭೀರ್ ಅವರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಲೆಜೆಂಡ್‌ಗೆ ಸ್ವಾಗತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆಟಗಾರನಾಗಿ ಹಲವು ಪುರಸ್ಕಾರ ಪಡೆದಿರುವ ಗಂಭೀರ್​, ಐಪಿಎಲ್​ನಲ್ಲಿ ಕೆಕೆಆರ್​ ತಂಡದ ನಾಯಕನಾಗಿ ಮತ್ತು ಮೆಂಟರ್ ಆಗಿ ಯಶಸ್ವಿ ವೃತ್ತಿ ಜೀವನವನ್ನು ಹೊಂದಿದ್ದಾರೆ. ಇದೀಗ ಅವರ ಆಗಮನದಿಂದ ಟೀಮ್​ ಇಂಡಿಯಾಗೆ ಬಲ ಬಂದಿದೆ. ಗಂಭೀರ್ ಅವರ ಕೋಚಿಂಗ್‌ನಲ್ಲಿ ತಂಡವು ಹೆಚ್ಚಿನ ಐಸಿಸಿ ಟ್ರೋಫಿಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ.

ಗಂಭೀರ್​ ಅವರನ್ನು ಕೋಚ್ ಆಗಿ ಘೋಷಿಸುವಾಗ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ, ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಟೀಮ್​ ಇಂಡಿಯಾದ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಆಧುನಿಕ ಕ್ರಿಕೆಟ್‌ ಬಹಳ ವೇಗವಾಗಿ ಬದಲಾಗುತ್ತಿದ್ದು ಗೌತಮ್ ಅವರು ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾವನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂಬ ವಿಶ್ವಾಸ ನನಗಿದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಗೌತಮ್‌ ಗಂಭೀರ್‌ ಅವರಿಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜಯ್‌ ಷಾ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)