ನವದೆಹಲಿ: ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಹುದ್ದೆಯ ರೇಸ್ನಲ್ಲಿರುವ ಪ್ರಮುಖ ಅಭ್ಯರ್ಥಿ ಗೌತಮ್ ಗಂಭೀರ್ ಮಂಗಳವಾರ ಸಂದರ್ಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಗಂಭೀರ್ರನ್ನು ಝೂಮ್ ಕಾಲ್ ಮೂಲಕ ಸಂದರ್ಶನ ನಡೆಸಿದ್ದು, ಶ್ರೀ ನೇಮಕಾತಿ ಪ್ರಕ್ರಿಯೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಅಶೋಕ್ ಮಲ್ಹೋತ್ರಾ ನೇತೃತ್ವದ ಸಿಎಸಿಯಲ್ಲಿ ಜತಿನ್ ಪರಾಂಜಪೆ ಮತ್ತು ಸುಕ್ಷಣಾ ನಾಯ್ಕ್ ಇತರ ಸದಸ್ಯರಾಗಿದ್ದಾರೆ. ಮಂಗಳವಾರ ಗಂಭೀರ್ ಸಂದರ್ಶನದ ಒಂದು ಸುತ್ತು ಪೂರ್ಣಗೊಂಡಿದೆ. ಎರಡನೇ ಹಂತದ ಸಂದರ್ಶನ ಬುಧವಾರ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ಗಂಭೀರ್ ಕೋಚ್ ಹುದ್ದೆಗೆ ನೆಚ್ಚಿನ ಅಭ್ಯರ್ಥಿಯಾಗಿದ್ದು, 48 ಗಂಟೆಗಳ ಅವಧಿಯಲ್ಲಿ ಅವರ ನೇಮಕಾತಿ ಪ್ರಕ್ರಿಯೆಯನ್ನು ಬಿಸಿಸಿಐ ಮುಕ್ತಾಯಗೊಳಿಸಲಿದೆ ಎನ್ನಲಾಗಿದೆ.
ಹೊಸ ಕೋಚ್ ಅವಧಿಯು 2027ರ ಏಕದಿನ ವಿಶ್ವಕಪ್ವರೆಗೆ ಇರಲಿದೆ. ಹೀಗಾಗಿ ಮುಂದಿನ 3 ವರ್ಷಗಳ ರೂಪುರೇಷೆಯ ಬಗ್ಗೆ ಗಂಭೀರ್ ತನ್ನ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಅವಧಿಯಲ್ಲಿ 3 ಐಸಿಸಿ ಟೂರ್ನಿಗಳು (2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್, 2027ರ ಏಕದಿನ ವಿಶ್ವಕಪ್) ಇರಲಿವೆ.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯೂ ಮಂಗಳವಾರ ಸಂಜೆ ನಡೆದಿದ್ದು, ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಮುಗಿಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ಒಲವು ತೋರಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಗೆ ಉತ್ತರ ವಲಯದಿಂದ ಓರ್ವ ಆಯ್ಕೆಗಾರನ ಹುದ್ದೆಗೂ ಸಿಎಸಿ ಮಂಗಳವಾರ ಕೆಲ ಅಭ್ಯರ್ಥಿಗಳ ಸಂದರ್ಶನ ನಡೆಸಿದೆ ಎನ್ನಲಾಗಿದೆ.
ಟೀಮ್ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಟಿ20 ವಿಶ್ವಕಪ್ ಟೂರ್ನಿಯೊಂದಿಗೆ ಮುಗಿಯಲಿದೆ. ನಂತರದಲ್ಲಿ ಜುಲೈ 6ರಿಂದ ಜಿಂಬಾಬ್ವೆ ಪ್ರವಾಸದ ಟಿ20 ಸರಣಿಯೊಂದಿಗೆ ಭಾರತ ತಂಡದ ಮುಂದಿನ ಸವಾಲು ಶುರುವಾಗಲಿದೆ.
ರೇಸ್ನಲ್ಲಿದ್ದಾರೆ ರಾಮನ್?
ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಏಕೈಕ ಅಭ್ಯರ್ಥಿ ಎಂದು ಮೊದಲಿಗೆ ವರದಿಯಾಗಿತ್ತು. ಆದರೆ, ಮಂಗಳವಾರ ಸಂದರ್ಶನ ಎದುರಿಸಿದವರಲ್ಲಿ ಗಂಭೀರ್ ಒಬ್ಬರೇ ಅಲ್ಲ, ಭಾರತ ಮಹಿಳಾ ತಂಡದ ಮಾಜಿ ಕೋಚ್ ಡಬ್ಲ್ಯುವಿ ರಾಮನ್ ಕೂಡ ಸಂದರ್ಶನ ಎದುರಿಸಿದ್ದಾರೆ ಎನ್ನಲಾಗಿದೆ. ಬುಧವಾರ ವಿದೇಶಿ ಅಭ್ಯರ್ಥಿಯೊಬ್ಬರ ಸಂದರ್ಶನ ಪ್ರಕ್ರಿಯೆಯೂ ನಡೆಯಲಿದೆ ಎನ್ನಲಾಗಿದೆ.
ಪ್ರತ್ಯೇಕ ತಂಡಗಳಿಗೆ ಬೇಡಿಕೆ ಇಟ್ಟ ಗಂಭೀರ್!
ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಹುದ್ದೆಯನ್ನು ಒಪ್ಪಿಕೊಳ್ಳಲು ಕೆಲ ಪ್ರಮುಖ ಬೇಡಿಕೆಗಳನ್ನು ಬಿಸಿಸಿಐ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಪೈಕಿ ಟೆಸ್ಟ್ ಮತ್ತು ಸೀಮಿತ ಓವರ್ (ಏಕದಿನ/ಟಿ20) ಕ್ರಿಕೆಟ್ಗೆ ಪ್ರತ್ಯೇಕವಾದ ರಾಷ್ಟ್ರೀಯ ತಂಡವನ್ನು ರಚಿಸಿವುದು ಪ್ರಮುಖ ಬೇಡಿಕೆ ಎನಿಸಿದೆ. ಇದಕ್ಕೆ ಬಿಸಿಸಿಐ ಈಗಾಗಲೆ ಸಮ್ಮತಿಸಿದೆ ಎಂದೂ ಹೇಳಲಾಗುತ್ತಿದೆ. ಗಂಭೀರ್ ತನ್ನದೇ ಆದ ಇತರ ತರಬೇತಿ ಸಿಬ್ಬಂದಿ ಬಳಗದ ಆಯ್ಕೆಗೂ ಬೇಡಿಕೆ ಇಟ್ಟಿದ್ದು, ಅದಕ್ಕೂ ಬಿಸಿಸಿಐ ಈಗಾಗಲೆ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.