ಕ್ರೀಡೆ

ತಮ್ಮ ನಡುವಿನ ಸಾಮ್ಯತೆಗಳನ್ನು ಬಿಚ್ಚಿಟ್ಟ ಗಂಭೀರ್-ಕೊಹ್ಲಿ! ಆಕ್ರಮಣಕಾರಿ ವ್ಯಕ್ತಿತ್ವದವರ ಟೆಸ್ಟ್​ ಕ್ರಿಕೆಟ್​ ಪ್ರೀತಿ, ಆಧ್ಯಾತ್ಮಿಕತೆಯ ಮೆಲುಕು

ನವದೆಹಲಿ: ಒಂದೊಮ್ಮೆ ಟೀಮ್​ ಇಂಡಿಯಾ, ದೆಹಲಿ ತಂಡದಲ್ಲಿ ಸಹ-ಆಟಗಾರರಾಗಿದ್ದ ಗೌತಮ್​ ಗಂಭೀರ್​-ವಿರಾಟ್​ ಕೊಹ್ಲಿ ಬಳಿಕ ಐಪಿಎಲ್​ನಲ್ಲಿ ಎದುರಾಳಿಗಳಾಗಿ ಜಟಾಪಟಿ ನಡೆಸಿದ್ದರು. ಇದೀಗ ಕೋಚ್​-ಆಟಗಾರರಾಗಿ ಇವರಿಬ್ಬರು ಮತ್ತೆ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಇಬ್ಬರನ್ನೂ ಕೂರಿಸಿಕೊಂಡು ವಿಶೇಷ ಮಾತುಕತೆಗೆ ವೇದಿಕೆ ಕಲ್ಪಿಸಿದೆ. ಕೊಹ್ಲಿ ನಡೆಸಿಕೊಟ್ಟ ಗಂಭೀರ್​ರ ವಿಶಿಷ್ಟ ಸಂದರ್ಶನದ ವೇಳೆ ಇಬ್ಬರೂ ಪರಸ್ಪರರ ಮೇಲಿನ ಗೌರವ, ಟೆಸ್ಟ್​ ಕ್ರಿಕೆಟ್​ ಮೇಲಿನ ಪ್ರೀತಿ, ಆಧ್ಯಾತ್ಮಿಕತೆ, ಭಾರತೀಯ ಕ್ರಿಕೆಟ್​ನ ಶಕ್ತಿ-ಭವಿಷ್ಯದ ಯೋಜನೆ, ತಮ್ಮ ನಡುವಿನ ಸಾಮ್ಯತೆ ಮತ್ತು ಆಕ್ರಮಣಕಾರಿ ಮನೋಭಾವದಿಂದ ತಮಗೆ ಆಗುವ ಲಾಭದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

"ಎಲ್ಲ ಮಸಾಲೆಗಳಿಗೆ ಕೊನೆ ಹಾಕುತ್ತಿದ್ದೇವೆ' ಎಂದು ಕೊಹ್ಲಿ ಮಾತು ಆರಂಭಿಸಿದರೆ, "ನಮ್ಮ ಮಾತುಕತೆಗೆ ಇದುವೇ ಉತ್ತಮ ಆರಂಭ' ಎಂದು ಗಂಭೀರ್​ ಧ್ವನಿಗೂಡಿಸಿದರು. ಈ ಮೂಲಕ ಹಿಂದಿನ ಜಗಳಗಳನ್ನೆಲ್ಲ ಮರೆತು ಭಾರತೀಯ ಕ್ರಿಕೆಟ್​ನ ಒಳಿತಿಗಾಗಿ ಮತ್ತೆ ಶ್ರಮಿಸುವುದೇ ತಮ್ಮ ಆದ್ಯತೆ ಎಂಬ ಸಂದೇಶ ರವಾನಿಸಿದರು.

2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಲಂಕಾ ವಿರುದ್ಧ ಆರಂಭಿಕ ಆಘಾತ ಎದುರಿಸಿದಾಗ ಗಂಭೀರ್​&ಕೊಹ್ಲಿ 83 ರನ್​ಗಳ ಉಪಯುಕ್ತ ಜತೆಯಾಟದೊಂದಿಗೆ ಚೇತರಿಕೆ ಒದಗಿಸಿ ಭಾರತದ ಗೆಲುವಿನ ಹಾದಿ ಭದ್ರಪಡಿಸಿದ್ದರು. ಆಗಿನಿಂದ ಇಬ್ಬರೂ ಸುದೀರ್ ಹಾದಿ ಸಾಗಿ ಬಂದಿದ್ದೇವೆ. ಒಂದೇ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದು ಏಳು&ಬೀಳುಗಳನ್ನು ಕಂಡಿದ್ದೇವೆ ಎಂದು ಕೊಹ್ಲಿ ಹೇಳಿದರೆ, "ನಮ್ಮ ನಡುವೆ ನಡೆದಿದ್ದೆಲ್ಲ ಉತ್ತಮ ಉತ್ಸಾಹದಿಂದಲೇ ಆಗಿದ್ದು ಎಂದು ಸೇರಿಸಿದರು.

ಕೊಹ್ಲಿ 2012ರ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ 183 ರನ್​ ಸಿಡಿಸಿದ್ದು, ಚೇಸಿಂಗ್​ ವೇಳೆ ನಾನು ನೋಡಿದ ಶ್ರೇಷ್ಠ ಇನಿಂಗ್ಸ್​ ಶ್ಲಾಘಿಸಿದ ಗಂಭೀರ್​, ಟೆಸ್ಟ್​ ಕ್ರಿಕೆಟ್​ ನನ್ನ ಪಾಲಿಗೆ ಅತ್ಯುನ್ನತವಾದುದು. ನಾನು ಏಕದಿನಕ್ಕೆ ಮುನ್ನ ಟೆಸ್ಟ್​ ಆಡಿದೆ. ಟೆಸ್ಟ್​ ಪದಾರ್ಪಣೆಯೇ ನನ್ನ ಪಾಲಿಗೆ ಇದುವರೆಗಿನ ಶ್ರೇಷ್ಠ ಕ್ಷಣ ಎಂದರು. ಜತೆಗೆ ಕೊಹ್ಲಿ ನಾಯಕತ್ವದ ಅವಧಿಯಲ್ಲಿ ಭಾರತ ಟೆಸ್ಟ್​ ಕ್ರಿಕೆಟ್​ನಲ್ಲಿ ಬಲಿಷ್ಠ ಬೌಲಿಂಗ್​ ವಿಭಾಗವನ್ನು ರೂಪಿಸಿತ್ತು. 26ನೇ ವಯಸ್ಸಿನಲ್ಲೇ ಟೆಸ್ಟ್​ ತಂಡದ ಭಾರ ಹೊರುವುದು ಕೊಹ್ಲಿಗೆ ಸುಲಭ ಸವಾಲು ಆಗಿರಲಿಲ್ಲ ಎಂದರು.

ಎದುರಾಳಿ ಬೌಲರ್​ಗಳ ಜತೆಗಿನ ಜಟಾಪಟಿಯ ಬಗ್ಗೆ ಕೊಹ್ಲಿ ಪ್ರಶ್ನಿಸಿದಾಗ ಗಂಭೀರ್​, "ನೀನೂ ನನಗಿಂತ ಹೆಚ್ಚು ವಾಗ್ವಾದಗಳನ್ನು ನಡೆಸಿರುವೆ. ನನಗಿಂತ ನೀನೇ ಉತ್ತಮ ಉತ್ತರ ನೀಡಬಹುದು' ಎಂದು ನಕ್ಕರು. ಬಳಿಕ, ಅದು ನನ್ನ ವ್ಯಕ್ತಿತ್ವ. ನೀನೂ ಅಂಥದ್ದೇ ವ್ಯಕ್ತಿತ್ವ ಹೊಂದಿರುವೆ ಎಂದುತ್ತರಿಸಿದರು.