ಬೆಂಗಳೂರು: ಪಿತೃತ್ವ ರಜೆಯ ಮೇರೆಗೆ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯನ್ನು ಅರ್ಧದಲ್ಲೇ ತ್ಯಜಿಸಿ ತವರಿಗೆ ಮರಳಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಮವಾರ ಮೊದಲ ಮಗುವನ್ನು ಸ್ವಾಗತಿಸಿದರು. ಈ ಮೂಲಕ ಅವರ ಬಾಳಿನಲ್ಲಿ 11ರ ನಂಟು ಮತ್ತೆ ಮುಂದುವರಿದಿದೆ!
ಹೌದು, ವಿರಾಟ್ ಕೊಹ್ಲಿಗೂ 11 ಸಂಖ್ಯೆಗೂ ಬಹಳ ಉತ್ತಮ ಸಂಬಂಧವಿದೆ. ವಿರಾಟ್ ಕೊಹ್ಲಿ ಜನಿಸಿದ್ದು 11ನೇ ತಿಂಗಳಿನಲ್ಲಿ (ನವೆಂಬರ್). ಬಾಲಿವುಡ್ ನಟಿ ಅನುಷ್ಕಾ ಶರ್ಮ ಜತೆಗೆ ಅವರ ವಿವಾಹವಾಗಿದ್ದು ಕೂಡ 11ನೇ (2017ರ ಡಿಸೆಂಬರ್ 11) ತಾರೀಕಿನಂದು. ಇದೀಗ ಅವರ ಪುತ್ರಿನ ಜನನವೂ 11ನೇ ತಾರೀಕಿನಂದು ಆಗಿರುವುದು ವಿಶೇಷವಾಗಿದೆ. ಇದು ಕೊಹ್ಲಿಗೆ ಹೆಚ್ಚಿನ ಅದೃಷ್ಟ ತಂದುಕೊಡಲಿದೆ ಎಂದೂ ಹೇಳಲಾಗುತ್ತಿದೆ.
ಇನ್ನು ಕ್ರಿಕೆಟ್ ಬದುಕಿನಲ್ಲೂ ಅವರಿಗೆ 11 ಸಂಖ್ಯೆ ಸಾಕಷ್ಟು ಅದೃಷ್ಟ ತಂದಿದೆ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ 11 ಶತಕ ಸಿಡಿಸಿದ ಏಕೈಕ ನಾಯಕರಾಗಿದ್ದಾರೆ. ಭಾರತ ತಂಡದ ಪರ ಅವರು ಮೊದಲ ಬಾರಿಗೆ ವಿಶ್ವಕಪ್ ಗೆಲುವು ಕಂಡಿರುವುದು 2011ರಲ್ಲಿ. ಇದರಲ್ಲೂ 11 ಸಂಖ್ಯೆ ಇದೆ.
ಇನ್ನು ಮುಂಬರುವ ದಿನಗಳಲ್ಲೂ ಕೊಹ್ಲಿ ಬದುಕಿನಲ್ಲಿ 11ರ ನಂಟು ಮುಂದುವರಿದರೆ ಭಾರತ ತಂಡ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಜಯಿಸಲಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇದು ವಿರಾಟ್ ಕೊಹ್ಲಿ ಆಡಲಿರುವ 11ನೇ ಐಸಿಸಿ ಟೂರ್ನಿಯಾಗಿದೆ!