ಕ್ರೀಡೆ

ಆತನನ್ನು ಬಿಟ್ಟರೆ ಯಾವೊಬ್ಬ ಸ್ಟಾರ್​ ಕ್ರಿಕೆಟಿಗನೂ ಕರೆ ಮಾಡ್ಲಿಲ್ಲ... ನಾನು ಮಾಡಿದ ದೊಡ್ಡ ತಪ್ಪು ಇದೆ ಎಂದ ಪೃಥ್ವಿ ಶಾ! Prithvi Shaw

Prithvi Shaw : ಟೀಮ್​ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಕಳೆದ ಎರಡು ವರ್ಷಗಳಿಂದ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಅವರ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟಿದ್ದ ಮುಂಬೈಕರ್ ಈಗ ಅವಕಾಶಗಳಿಗಾಗಿ ಹೆಣಗಾಡುತ್ತಿದ್ದಾರೆ. ಜೀವನದಲ್ಲಿನ ಶಿಸ್ತು ಮತ್ತು ಫಿಟ್ನೆಸ್ ಕೊರತೆಯಿಂದಾಗಿ ಪೃಥ್ವಿ ತಮ್ಮ ವೃತ್ತಿಜೀವನದಲ್ಲಿ ಹಿಂದುಳಿದಿದ್ದಾರೆ.

ಶುಭಮಾನ್​ ಗಿಲ್ ಇಂದು ಟೀಮ್ ಇಂಡಿಯಾದ ನಾಯಕರಾಗಿದ್ದಾರೆ. ಆದರೆ, 19 ವರ್ಷದೊಳಗಿನವರ ತಂಡದ ನಾಯಕರಾಗಿ 2018ರಲ್ಲಿ ಭಾರತಕ್ಕೆ ವಿಶ್ವಕಪ್‌ ಗೆದ್ದು ಕೊಟ್ಟ ಪೃಥ್ವಿ ಶಾ ಅವರ ಅಡಿಯಲ್ಲಿ ಶುಭಮಾನ್ ಗಿಲ್ ಆಡಿದರು. ಗಿಲ್​ ಅದೃಷ್ಟ ಚೆನ್ನಾಗಿದ್ದು, ಇಂದು ಟೀಮ್ ಇಂಡಿಯಾದ ನಾಯಕರಾಗಿದ್ದಾರೆ. ಪೃಥ್ವಿ ಶಾ ಅವರು ಶಿಸ್ತು ಮತ್ತು ಫಿಟ್ನೆಸ್​ ಕಾಯ್ದುಕೊಂಡಿದ್ದರೆ, ಇಂದು ನಾಯಕನ ಸ್ಥಾನದಲ್ಲಿ ಅವರಿರುತ್ತಿದ್ದರು. ಆದರೆ, ಇಂದು ದೇಶೀಯ ತಂಡದಲ್ಲಿ ಸ್ಥಾನ ಪೃಥ್ವಿ ಶಾ ಅವರಿಗೆ ಸ್ಥಾನ ಸಿಗುತ್ತಿಲ್ಲ. ಐಪಿಎಲ್-2025 ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಪೃಥ್ವಿ ಶಾ ಅವರನ್ನು ಕನಿಷ್ಠ ಬೆಲೆಯಾದ 75 ಲಕ್ಷ ರೂ.ಗಳಿಗೆ ಖರೀದಿಸಲಿಲ್ಲ. ಇದು ಅವರ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಈ ಹಿನ್ನೆಲೆಯಲ್ಲಿ ಪೃಥ್ವಿ ಶಾ ಇತ್ತೀಚೆಗೆ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಅಲ್ಲದೆ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಕೂಡ ​​ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಋತುವಿನಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ ಪೃಥ್ವಿ ಶಾ, ಇತ್ತೀಚೆಗೆ ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಪಂತ್ ಹೊರತುಪಡಿಸಿ ಯಾರೂ ಮಾತನಾಡಲಿಲ್ಲ

ತಮ್ಮ ವೃತ್ತಿಜೀವನ ಸಂಕಷ್ಟದಲ್ಲಿದ್ದಾಗ, ಯಾವೊಬ್ಬ ಸ್ಟಾರ್​ ಕ್ರಿಕೆಟಿಗನು ಕೂಡ ತಮ್ಮ ಬೆಂಬಲಕ್ಕೆ ನಿಂತಿಲ್ಲ ಎಂದು ಪೃಥ್ವಿ ಹೇಳಿದರು. ಟೀಮ್ ಇಂಡಿಯಾ ಸ್ಟಾರ್ ರಿಷಭ್ ಪಂತ್ ಹೊರತುಪಡಿಸಿ, ಯಾರೂ ತಮ್ಮೊಂದಿಗೆ ಮಾತನಾಡಲಿಲ್ಲ ಎಂದರು. ನನಗೆ ಸಚಿನ್ ತೆಂಡೂಲ್ಕರ್ ಅವರ ಸಮಸ್ಯೆಗಳು ಗೊತ್ತು. ಅರ್ಜುನ್ ತೆಂಡೂಲ್ಕರ್ ಜೊತೆಗೆ ನಾನು ಕ್ರಿಕೆಟಿಗನಾಗಿ ಬೆಳೆಯುವುದನ್ನು ಅವರು ನೋಡಿದರು. ನಾನು ಒಮ್ಮೆ ಅವರ ಮನೆಗೆ ಹೋಗಿದ್ದೆ. ಆದರೆ, ನನ್ನ ವೃತ್ತಿಜೀವನದಲ್ಲಿ ಸಂಕಷ್ಟದಲ್ಲಿದ್ದಾಗ, ರಿಷಭ್ ಪಂತ್ ಹೊರತುಪಡಿಸಿ ಯಾರೂ ನನ್ನನ್ನು ಸ್ವಾಗತಿಸಲಿಲ್ಲ ಎಂದು ಪೃಥ್ವಿ ಶಾ ಬಹಿರಂಗಪಡಿಸಿದರು.

ಅದೇ ರೀತಿ, ತನ್ನ ಆಟದ ಮೇಲೆ ಗಮನಹರಿಸಲು ಸಾಧ್ಯವಾಗದ ಕಾರಣಗಳನ್ನು ವಿವರಿಸಿದ ಪೃಥ್ವಿ ಶಾ, ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ನನಗೆ ಮಾತ್ರ ತಿಳಿದಿದೆ. ಹೊರಗಿನಿಂದ ನೋಡುವ ಜನರಿಗೆ ಇದು ಅರ್ಥವಾಗದಿರಬಹುದು. ನಾನು ಜೀವನದಲ್ಲಿ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೂ ಸಹ ಅದು ಜನರಿಗೆ ತಿಳಿಯವುದಿಲ್ಲ. ತಪ್ಪು ಜನರೊಂದಿಗಿನ ನನ್ನ ಸ್ನೇಹದಿಂದಾಗಿ ನಾನು ನನ್ನ ಆಟಕ್ಕೆ ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ನಾನು ಗಂಟೆಗಟ್ಟಲೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದೆ. ಕನಿಷ್ಠ ಮೂರರಿಂದ ನಾಲ್ಕು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಕಳೆಯುತ್ತಿದ್ದೆ. ನಾನು ದಿನದ ಅರ್ಧ ಭಾಗವನ್ನು ಅಲ್ಲಿಯೇ ಕಳೆಯುತ್ತಿದ್ದೆ. ಆದರೆ, ಕೆಲ ತಪ್ಪು ಜನರಿಂದ ನನ್ನ ಗಮನ ಆಟದಿಂದ ಬೇರೆಡೆಗೆ ತಿರುಗಿತು ಎಂದು ಪೃಥ್ವಿ ಶಾ ಹೇಳಿದರು.

ನನ್ನ ತಪ್ಪುಗಳು ಅರಿವಾದ ಬಳಿಕ ನಾನು ವಿಷಾದಿಸಲು ಪ್ರಾರಂಭಿಸಿದೆ. ನಾನು ಯಾವುದಕ್ಕೆ ಎಷ್ಟು ಸಮಯ ಮೀಸಲಿಡಬೇಕೆಂದು ಅರ್ಥಮಾಡಿಕೊಂಡೆ. ನಾನು ತಪ್ಪು ಜನರೊಂದಿಗೆ ಸ್ನೇಹ ಬೆಳೆಸಿದೆ. ನಾನು ಕ್ರಿಕೆಟಿಗನಾಗಿ ಉತ್ತುಂಗದಲ್ಲಿದ್ದಾಗ ಅವರು ನನ್ನೊಂದಿಗೆ ಸೇರಿಕೊಂಡರು. ಅವರು ನನ್ನನ್ನು ಅನೇಕ ಸ್ಥಳಗಳಿಗೆ ಕರೆದೊಯ್ದರು. ಆಗ ನಾನು ದಾರಿ ತಪ್ಪಿದೆ ಎಂದು ಪೃಥ್ವಿ ಶಾ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು. ಈಗ ಅವರು ಆಟದ ಮೇಲೆ ಗಮನ ಹರಿಸುವುದಾಗಿ ಬಹಿರಂಗಪಡಿಸಿದರು. ಇದೇ ಸಂದರ್ಭದಲ್ಲಿ ಮುಂಬರುವ ದೇಶೀಯ ಋತುವಿನಲ್ಲಿ ಪೃಥ್ವಿ, ಮಹಾರಾಷ್ಟ್ರ ತಂಡಕ್ಕಾಗಿ ಆಡುವ ಸಾಧ್ಯತೆಯಿದೆ. (ಏಜೆನ್ಸೀಸ್​)