ಕ್ರೀಡೆ

ಫ್ರೀಸ್ಟೈಲ್ ಫುಟ್‌ಬಾಲ್‌ನಲ್ಲಿ ಮಿಂಚಿದ ಬೆಂಗಳೂರಿನ ತೇಜಸ್

ಕರೊನಾ ಭೀತಿ ನಡುವೆ ಬೆಂಗಳೂರಿನ ಫ್ರೀಸ್ಟೈಲ್ ಫುಟ್‌ಬಾಲ್ ತಾರೆ ಸಾಯಿ ತೇಜಸ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಫುಟ್‌ಬಾಲ್ ಫ್ರೀಸ್ಟೈಲ್ ಕಲಾವಿದನಾಗಿರುವ ತೇಜಸ್, ಏಕಕಾಲದಲ್ಲಿ 8 ಚೆಂಡುಗಳನ್ನು ತಿರುಗಿಸುವ ಕಲೆ ಹೊಂದಿದ್ದಾರೆ. ಪ್ರತಿಭಾನ್ವಿತ ತೇಜಸ್ ತಮ್ಮ ಕಲೆಯಿಂದಾಗಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿದ್ದಾರೆ. ವಿಶ್ವದಾದ್ಯಂತ 5 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಯೆಸ್ ಥಿಯೆರಿ ಅವರ ಲಿವಿಂಗ್ ರೂಮ್ಸ್ ಗಾಟ್ ಟ್ಯಾಲೆಂಟ್ ಚಾಲೆಂಜ್ ಸ್ಪರ್ಧೆಯಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆಯೂ ಸಂದೇಶ ರವಾನಿಸಿದ್ದಾರೆ. ಇಂಗ್ಲೆಂಡ್, ಕೊಲಂಬಿಯಾ, ಯುಎಸ್‌ಎ ಸೇರಿದಂತೆ ಹಲವು ದೇಶಗಳಿಂದ ಸಾವಿರಾರು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ನಿಮಿಷ ಮೀರದ ವಿಡಿಯೋ ಪ್ರದರ್ಶನ ನೀಡಲಾಯಿತು.

ಭಾರತದಿಂದ ಇಬ್ಬರು, ಬೆಂಗಳೂರಿನಿಂದ ನಾನೊಬ್ಬನೇ ಸ್ಪರ್ಧಿಯಾಗಿದ್ದೆ. ಆನ್‌ಲೈನ್ ಮೂಲಕವೇ ನಾನು ಕಲಿತ ಕಲೆಯಲ್ಲಿ ಪ್ರದರ್ಶನ ನೀಡಿದೆ. ಸುಮಾರು 10 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು, ಮೊದಲ ಸಾವಿರ ಸ್ಪರ್ಧಿಗಳಲ್ಲಿ 20ರೊಳಗೆ ಸ್ಥಾನ ಪಡೆದರೆ, ಬಳಿಕ ಅಂತಿಮ 7 ಜನರನ್ನು ವಿಜೇತರೆಂದು ಘೋಷಿಸಲಾಯಿತು ಎಂದು 25 ವರ್ಷದ ಸಾಯಿ ತೇಜಸ್ ಹೇಳುತ್ತಾರೆ. ಎಲ್ಲರಿಗೂ ತಲಾ 10 ಸಾವಿರ ಯುಎಸ್ ಡಾಲರ್ ನಗದು ಬಹುಮಾನ ನೀಡಲಾಯಿತು. ಬಂದ ಬಹುಮಾನ ಮೊತ್ತದಲ್ಲಿ ಅರ್ಧ ಮೊತ್ತವನ್ನು ಎನ್‌ಜಿಒಗೆ ದೇಣಿಗೆ ನೀಡಿದ್ದಾರೆ.

 ಫಿಫಾ ಇನ್‌ಸ್ಟಾ ಪುಟದಲ್ಲಿ ವಿಡಿಯೋ..!

ತೇಜಸ್ ಫ್ರೀಸ್ಟೈಲ್ ಕಲೆ ವರ್ಷದ ಹಿಂದೆಯೇ ವಿಶ್ವ ಫುಟ್‌ಬಾಲ್ ಫೆಡರೇಷನ್ (ಫಿಫಾ) ಗಮನಸೆಳೆದಿದೆ. ಫಿಫಾದ ಇನ್‌ಸ್ಟಾಗ್ರಾಂ ಪುಟದಲ್ಲಿ ತೇಜಸ್ ಅವರ ವಿಡಿಯೋ ಪ್ರಕಟಿಸಲಾಗಿದೆ. ಹಲವು ಫುಟ್‌ಬಾಲ್ ದಿಗ್ಗಜರೂ ಕೂಡ ತೇಜಸ್ ಕಲೆಯನ್ನು ಮೆಚ್ಚಿಕೊಂಡಿದ್ದಾರೆ.

ಎನ್‌ಜಿಒಗಳಿಗೆ ದೇಣಿಗೆ

ಕೇವಲ ಸ್ಪರ್ಧಾತ್ಮಕತೆ ಅಲ್ಲದೆ, ತೇಜಸ್ ತಾವು ಕಲಿತಿರುವ ಕಲೆಯನ್ನು ಯುವಕರಿಗೆ, ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ. ಕಾರ್ಪೋರೇಟ್ ವಲಯಗಳಿಂದ ತೇಜಸ್ ಅವರ ಕಲೆಯ ಪ್ರದರ್ಶನಕ್ಕೆ ಆಹ್ವಾನಗಳು ಬರುತ್ತಿವೆ. ಅಲ್ಲಿಂದ ಬರುವ ಹಣದಿಂದ ಕೆಲ ಎನ್‌ಜಿಒಗಳಿಗೆ ತೇಜಸ್ ದೇಣಿ ನೀಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾರು ಈ ಸಾಯಿ ತೇಜಸ್

ಮೂಲತಃ ಬೆಂಗಳೂರಿನವರೇ ಆದ ಸಾಯಿ ತೇಜಸ್, ಸಿವಿಲ್ ಇಂಜಿನಿಯರ್ ಪದವೀಧರ. ವೃತ್ತಿಗೆ ತೆರಳದೆ ಪೂರ್ಣಪ್ರಮಾಣದಲ್ಲಿ ಫ್ರೀಸ್ಟೈಲ್ ಫುಟ್‌ಬಾಲ್ ಕಲೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲಾ ದಿನಗಳಿಂದಲೇ ಫ್ರೀಸ್ಟೈಲ್ ಫುಟ್‌ಬಾಲ್ ಕಲೆ ಕಡೆಗೆ ಒಲವು ಬೆಳೆಸಿಕೊಂಡ ಸಾಯಿ ತೇಜಸ್, ಇಂದು ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಶಾಲೆಯಲ್ಲಿರುವಾಗ ಒಮ್ಮೆ ಬ್ರೆಜಿಲ್ ಫುಟ್‌ಬಾಲ್ ಆಟಗಾರ ರೋನಾಲ್ಡಿನೋ ಜಾಹೀರಾತುವೊಂದರಲ್ಲಿ ತಲೆಯಲ್ಲಿ ಫುಟ್‌ಬಾಲ್  ಸುತ್ತಿಸುತ್ತಿದ್ದನ್ನು ನೋಡಿ ನಾನು ಏಕೆ ಪ್ರಯತ್ನಿಸಬಾರದು ಎಂದು ಅಂದಿನಿಂದ ತೇಜಸ್ ಫ್ರೀಸ್ಟೈಲ್ ಫುಟ್‌ಬಾಲ್ ಕಡೆಗೆ ಒಲವು ಬೆಳೆಸಿಕೊಂಡರಂತೆ. ತಂದೆ ವಿ.ಸಿ ರಾಮನಾಥ್ ಹಾಗೂ ತಾಯಿ ವಿದ್ಯಾ ವಿ.ಆರ್ ಅವರ ಪ್ರೋತ್ಸಾಹವೇ ನಾನು ಈ ಕಲೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಸಾಯ್ ತೇಜಸ್.

ಶಾಲಾ ದಿನಗಳಿಂದಲೇ ಫ್ರೀಸ್ಟೈಲ್ ಫುಟ್‌ಬಾಲ್ ಆರಂಭಿಸಿದೆ. ಬಳಿಕ ವಿವಿಧ ಕಲೆಗಳನ್ನು ಅಭ್ಯಾಸ ಆರಂಭಿಸಿದೆ. ಕಾರ್ಪೋರೇಟ್ ಶೋಗಳನ್ನು ನೀಡುತ್ತಿದ್ದೇನೆ. ಜತೆಗೆ ಇದರ ಬಗ್ಗೆ ಎಲ್ಲರಿಗೂ ತಿಳಿ ಹೇಳುತ್ತೇನೆ. ಪೂರ್ಣ ಪ್ರಮಾಣದಲ್ಲೇ ಫ್ರೀಸ್ಟೈಲ್ ಫುಟ್‌ಬಾಲ್ ಕಲೆಯನ್ನೇ ತೊಡಗಿಸಕೊಂಡಿದ್ದೇನೆ, ಇದುವರೆಗೂ 75 ಶೋಗಳನ್ನು ನೀಡಿದ್ದೇನೆ. ಆನ್‌ಲೈನ್ ವಿಡಿಯೋ, ಯೂಟ್ಯೂಬ್‌ನಲ್ಲಿ ಹಾಕುವ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದೇನೆ

- ಸಾಯಿ ತೇಜಸ್, ಫ್ರೀಸ್ಟೈಲ್ ಫುಟ್‌ಬಾಲ್ ಆಟಗಾರ.