ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 2027-29 ಅಂದರೆ ಐದನೇ ಆವೃತ್ತಿಯಲ್ಲಿ ಚಿಕ್ಕ ದೇಶಗಳಿಗೆ ಚತುರ್ದಿನ ಟೆಸ್ಟ್ ಅಂದರೆ ಚುಟುಕು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವನ್ನು ಕಲ್ಪಿಸಲು ಐಸಿಸಿ ಸಿದ್ಧವಾಗಿದೆ. ಆದರೆ ಭಾರತ, ಆಸ್ಟ್ರೆಲಿಯಾ, ಇಂಗ್ಲೆಂಡ್ನಂಥ ಬಲಿಷ್ಠ ತಂಡಗಳು ಸಾಂಪ್ರದಾಯಿಕ 5 ದಿನಗಳ ಟೆಸ್ಟ್ ಪಂದ್ಯಗಳನ್ನೇ ಆಡುವುದನ್ನೇ ಮುಂದುವರಿಸಬಹುದಾಗಿದೆ ಎಂದು ವರದಿಯಾಗಿದೆ.
ಟೆಸ್ಟ್ ಪಂದ್ಯಗಳನ್ನು ಒಂದು ದಿನ ಕಡಿತಗೊಳಿಸುವುದು ಚಿಕ್ಕ ಮತ್ತು ಬಡ ಕ್ರಿಕೆಟ್ ಮಂಡಳಿ ಹೊಂದಿರುವ ದೇಶಗಳಿಗೆ ದೊಡ್ಡ ಮಟ್ಟದ ಅನುಕೂಲಗಳನ್ನು ಕಲ್ಪಿಸಲಿವೆ. ಇದರಿಂದ ಆ ದೇಶಗಳು ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಮತ್ತು ದೊಡ್ಡ ಸರಣಿಗಳನ್ನು ಆಡಬಹುದಾಗಿರುತ್ತದೆ.
ಕಳೆದ ವಾರ ಲಾರ್ಡ್ಸ್ನಲ್ಲಿ ಡಬ್ಲ್ಯುಟಿಸಿ 3ನೇ ಆವೃತ್ತಿಯ ಫೈನಲ್ ವೇಳೆ ನಡೆದ ಚರ್ಚೆಯ ಸಮಯದಲ್ಲಿ ಐಸಿಸಿ ಚೇರ್ಮನ್ ಜಯ್ ಷಾ ಚತುರ್ದಿನ ಟೆಸ್ಟ್ ಪಂದ್ಯಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. 2027-29ರ ಡಬ್ಲ್ಯುಟಿಸಿ ಆವೃತ್ತಿಯಿಂದ ಇದು ಜಾರಿಗೆ ಬರಬಹುದು ಎಂದು ವರದಿ ತಿಳಿಸಿದೆ.
ಇಂಗ್ಲೆಂಡ್, ಆಸ್ಟ್ರೆಲಿಯಾ, ಭಾರತ ತಂಡಗಳು ತಾವು ಆಡುವ ಆಶಸ್, ಬಾರ್ಡರ್-ಗಾವಸ್ಕರ್ ಟ್ರೋಫಿ ಮತ್ತು ಆಂಡರ್ಸನ್-ತೆಂಡುಲ್ಕರ್ ಟ್ರೋಫಿಗಳಲ್ಲಿ ಐದು ದಿನಗಳ ಐದು ಟೆಸ್ಟ್ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಬಹುದು ಎಂದೂ ಹೇಳಲಾಗಿದೆ. ಐಸಿಸಿ 2017ರಲ್ಲಿ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಚತುರ್ದಿನ ಟೆಸ್ಟ್ ಪಂದ್ಯಗಳನ್ನು ಆಡಲು ಅನುಮತಿ ನೀಡಿತ್ತು. ಇದರನ್ವಯ ಅದೇ ವರ್ಷ ದ.ಆಫ್ರಿಕಾ-ಜಿಂಬಾಬ್ವೆ ತಂಡಗಳು ಚತುರ್ದಿನ ಟೆಸ್ಟ್ ಆಡಿದ್ದವು. ನಂತರ ಇಂಗ್ಲೆಂಡ್ ತಂಡ 2019 ಮತ್ತು 2023ರಲ್ಲಿ ಐರ್ಲೆಂಡ್ ಎದುರು ಚತುರ್ದಿನ ಟೆಸ್ಟ್ ಆಡಿದ್ದರೆ, ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧವೂ 4 ದಿನಗಳ ಟೆಸ್ಟ್ ಆಡಿತ್ತು. ಐದು ದಿನಗಳ ಟೆಸ್ಟ್ ಪಂದ್ಯಗಳು ತೆಗೆದುಕೊಳ್ಳುವ ಸಮಯ ಮತ್ತು ವೆಚ್ಚದಿಂದಾಗಿ ಹೆಚ್ಚಿನ ಚಿಕ್ಕ ದೇಶಗಳು ಟೆಸ್ಟ್ ಪಂದ್ಯಗಳ ಆತಿಥ್ಯಕ್ಕೆ ಹಿಂದೇಟು ಹಾಕುತ್ತವೆ. ಆದರೆ ಚತುರ್ದಿನ ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ 3 ವಾರಕ್ಕೂ ಕಡಿಮೆ ಅವಧಿಯಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸಬಹುದಾಗಿರುತ್ತದೆ.
ಮಂಗಳವಾರ ಆರಂಭಗೊಂಡಿರುವ 2025-27ರ ಡಬ್ಲ್ಯುಟಿಸಿ 4ನೇ ಆವೃತ್ತಿಯಲ್ಲಿ ಹಿಂದಿನಂತೆ 5 ದಿನಗಳ ಟೆಸ್ಟ್ ಪಂದ್ಯಗಳೇ ನಡೆಯಲಿವೆ. ಒಟ್ಟು 27 ಸರಣಿಗಳನ್ನು ಒಳಗೊಂಡ ಡಬ್ಲ್ಯುಟಿಸಿ 4ನೇ ಆವೃತ್ತಿಯಲ್ಲಿ 17 ಸರಣಿಗಳು 2 ಟೆಸ್ಟ್ ಪಂದ್ಯಗಳನ್ನಷ್ಟೇ ಒಳಗೊಂಡಿವೆ. 6 ಸರಣಿಗಳು ತಲಾ 3 ಪಂದ್ಯಗಳಿಂದ ಕೂಡಿದ್ದರೆ, ಇಂಗ್ಲೆಂಡ್, ಭಾರತ, ಆಸ್ಟ್ರೆಲಿಯಾ ನಡುವಿನ 3 ಸರಣಿಗಳಲ್ಲಷ್ಟೇ 5 ಪಂದ್ಯಗಳು ನಡೆಯಲಿವೆ.
ಚುಟುಕು ಟೆಸ್ಟ್ ನಿಯಮ
ಚತುರ್ದಿನ ಟೆಸ್ಟ್ಗಾಗಿ 2017ರಲ್ಲೇ ಐಸಿಸಿ ನಿಯಮಗಳಲ್ಲೂ ಕೆಲ ಬದಲಾವಣೆ ತಂದಿತ್ತು. 5 ದಿನಗಳ ಟೆಸ್ಟ್ನಲ್ಲಿ ದಿನವೊಂದರಲ್ಲಿ 90 ಓವರ್ ಆಟ ನಡೆದರೆ, 4 ದಿನಗಳ ಟೆಸ್ಟ್ ಪಂದ್ಯಗಳಲ್ಲಿ ದಿನವೊಂದರಲ್ಲಿ ಕನಿಷ್ಠ 98 ಓವರ್ಗಳ ಆಟ ಆಡಿಸಲಾಗುತ್ತದೆ. ದಿನವೊಂದರಲ್ಲಿ ಕನಿಷ್ಠ ಆರಕ್ಕೆ ಬದಲಾಗಿ ಆರೂವರೆ ಗಂಟೆ ಆಡಬೇಕು. ಇನ್ನು 200ಕ್ಕೆ ಬದಲಾಗಿ 150 ರನ್ ಹಿನ್ನಡೆ ಕಂಡರೆ ಫಾಲೋಆನ್ ಹೇರಬಹುದು. 5 ದಿನಗಳ ಟೆಸ್ಟ್ನಲ್ಲಿ ಒಟ್ಟಾರೆ 450 ಓವರ್ ಆಟ ನಡೆದರೆ, 4 ದಿನದ ಟೆಸ್ಟ್ನಲ್ಲಿ ಒಟ್ಟು 392 ಓವರ್ ಆಟ ನಡೆಯುತ್ತದೆ. ಇದು ಶೇ. 13ರಷ್ಟು ಅಂದರೆ 58 ಓವರ್ ಕಡಿಮೆಯಾಗಿರುತ್ತದೆ.
1906ರಲ್ಲೇ ನಡೆದಿತ್ತು ಚತುರ್ದಿನ ಟೆಸ್ಟ್!
ನಾಲ್ಕು ದಿನಗಳ ಟೆಸ್ಟ್ 1906ರ ಜನವರಿಯಲ್ಲೇ ಮೊದಲ ಬಾರಿ ನಡೆದಿತ್ತು. ಆಗ ಇಂಗ್ಲೆಂಡ್, ಆಫ್ರಿಕಾ ತಂಡಗಳು ಜೊಹಾನ್ಸ್ರ್ಬಗ್ನಲ್ಲಿ ಈ ಚತುರ್ದಿನ ಟೆಸ್ಟ್ ಆಡಿದ್ದವು. ಆ ಪಂದ್ಯ 3 ದಿನಗಳಲ್ಲೇ ಲಿತಾಂಶ ಕಂಡಿತ್ತು! ನಂತರ 1973ರವರೆಗೆ ಒಟ್ಟು 134 ಚತುರ್ದಿನ ಟೆಸ್ಟ್ ನಡೆದಿದ್ದವು. ಈ ಪೈಕಿ ಕೆಲವು ಓವರ್ಗೆ 8 ಎಸೆತ ಹೊಂದಿದ್ದರೆ, ಮತ್ತೆ ಕೆಲವು 5 ದಿನಗಳ ಪೈಕಿ 1 ದಿನ ವಿರಾಮ ಹೊಂದಿದ್ದವು. 1973ರಲ್ಲಿ ನ್ಯೂಜಿಲೆಂಡ್&ಪಾಕ್ ನಡುವೆ ಕೊನೆಯದಾಗಿ ಚತುರ್ದಿನ ಟೆಸ್ಟ್ ಪಂದ್ಯಗಳ ಸರಣಿ ನಡೆದಿತ್ತು. 1877ರಲ್ಲಿ ಹುಟ್ಟಿಕೊಂಡ ಟೆಸ್ಟ್ ಕ್ರಿಕೆಟ್ನಲ್ಲಿ 99 ಟೈಮ್ಲೆಸ್ ಟೆಸ್ಟ್ಗಳು. 77 ಪಂದ್ಯಗಳು 6 ದಿನಗಳ ಟೆಸ್ಟ್ ಆಗಿವೆ. ಇನ್ನು 119 ತ್ರಿದಿನ ಟೆಸ್ಟ್ ಪಂದ್ಯಗಳೂ ನಡೆದಿದ್ದವು. ಇನ್ನುಳಿದ ಟೆಸ್ಟ್ಗಳೆಲ್ಲ 5 ದಿನಗಳ ಟೆಸ್ಟ್ಗಳಾಗಿವೆ. 1973ರಿಂದ 2017ರವರೆಗೆ ಐಸಿಸಿ ಟೆಸ್ಟ್ ಪಂದ್ಯಗಳನ್ನು ಕಡ್ಡಾಯವಾಗಿ 5 ದಿನಗಳಿಗೆ ಸೀಮಿತಗೊಳಿಸಿತ್ತು.