ಕೊಲಂಬೊ: ಶ್ರೀಲಂಕಾದ ಅಂಡರ್-19 ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಶನಾ(41) ಹತ್ಯೆ ಹಿಂದೆ ಮ್ಯಾಚ್ ಫಿಕ್ಸಿಂಗ್ ದಂಧೆ ನಡೆಸುವವರ ಕೈವಾಡವಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಾಲೆಯ ಅಂಲಂಗೋಡದಲ್ಲಿರುವ ಅವರ ನಿವಾಸದ ಬಳಿ ಮಂಗಳವಾರ ರಾತ್ರಿ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದು, ಹತ್ಯೆಗೆ ಕಾರಣ ಪತ್ತೆಹಚ್ಚಿ, ಹಂತಕನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ನಿರೋಶನ್ ಹತ್ಯೆಗೂ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ದಕ್ಷಿಣ ವಲಯದ ಮಾಜಿ ಕ್ರಿಕೆಟ್ ಆಡಳಿತಗಾರ ಎಚ್.ಪ್ರೇಮಸಿರಿ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
ಮಾಜಿ ಕ್ರಿಕೆಟಿಗನನ್ನು ಕೊಲ್ಲಲು 12 ಬೋರ್ ಬಂದೂಕನ್ನು ಬಳಸಲಾಗಿದೆ. ಅಂಬಲಂಗೋಡ ಪ್ರದೇಶದಲ್ಲಿ ತನ್ನ ಆತ್ಮೀಯ ಸ್ನೇಹಿತ ದಾಸುನ್ ಮನವಾಡು ಎಂಬಾತನನ್ನು ಹತ್ಯೆಗೈದ ನಂತರ ಜೀವಭಯದಿಂದ ದೇಶ ತೊರೆದಿದ್ದ ನಿರೋಷನಾ ಮೂರು ತಿಂಗಳ ಹಿಂದೆಯಷ್ಟೇ ದ್ವೀಪ ರಾಷ್ಟ್ರಕ್ಕೆ ಮರಳಿದ್ದ.
2016ರ ಆಗಸ್ಟ್ 12 ರಂದು ಗಾಲೆ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರೇಮಸಿರಿ ಅವರನ್ನು ನಿವಾಸದ ಬಳಿ ಅಪರಿಚಿತ ಬಂದೂಕುಧಾರಿ ಗುಂಡು ಹಾರಿಸಿ ಹತ್ಯೆಗೈದಿದ್ದ.
ಪ್ರೇಮಸಿರಿಯ ಹತ್ಯೆಯು ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳ ಅಂತಾರಾಷ್ಟ್ರೀಯ ಮ್ಯಾಚ್ ಫಿಕ್ಸಿಂಗ್ ದಂಧೆಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ.
ಕ್ರಿಕೆಟ್‌ಗೆ ಸಂಬಂಧಿಸಿದವರೂ ಸೇರಿದಂತೆ ಭೂಗತ ಜಗತ್ತಿನ ಚಟುವಟಿಕೆಗಳು ಮತ್ತು ಪ್ರತಿಸ್ಪರ್ಧಿ ಗುಂಪು ಹತ್ಯೆಗಳಿಗೆ ಗಾಲೆ ಕುಖ್ಯಾತವಾಗಿದೆ.
19 ವರ್ಷದೊಳಗಿನವರ ರಾಷ್ಟ್ರೀಯ ತಂಡದ ನಾಯಕರಾಗಿದ್ದ ಧಮಿಕಾ, ಏಂಜೆಲೊ ಮ್ಯಾಥ್ಯೂಸ್ ಮತ್ತು ಉಪುಲ್ ತರಂಗ ಅವರಂತಹ ಸ್ಟಾರ್ ಆಟಗಾರರೊಂದಿಗೆ ಆಡಿದ್ದಾರೆ. ಆದರೆ 20ನೇ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.