ಕ್ರೀಡೆ

ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ಲಂಕಾ ಮಾಜಿ ಕ್ರಿಕೆಟಿಗನ ಬಂಧನ

ಕೊಲಂಬೊ: ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ಅವರನ್ನು ಕ್ರೀಡಾ ಭ್ರಷ್ಟಾಚಾರ ತನಿಖಾ ದಳದ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. ಸೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) 2020ರ ಆವೃತ್ತಿಯ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಪ್ರಯತ್ನಿಸಿದ್ದ ಸಚಿತ್ರ, ಸಹ ಆಟಗಾರರನ್ನು ಫಿಕ್ಸಿಂಗ್‌ಗೆ ಸಹಕರಿಸುವಂತೆ ಕೋರಿದ್ದರು. ಇಬ್ಬರೂ ಆಟಗಾರರು ಅವರ ವಿರುದ್ಧ ಈ ಆರೋಪ ಮಾಡಿದ್ದರು. ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೂರು ತಿಂಗಳ ಅವಧಿಗೆ ಜಾರಿಯಲ್ಲಿರುವಂತೆ, ವಿದೇಶ ಪ್ರಯಾಣ ನಿಷೇಧ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕದ ಅಟರ್ನಿ ಜನರಲ್ ಇಲಾಖೆಗೆ ಸೂಚನೆ ನೀಡಿತ್ತು. 38 ವರ್ಷದ ಸಚಿತ್ರ ಸೇನಾನಾಯಕೆ 2012ರಿಂದ 2016ರ ಅವಧಿಯಲ್ಲಿ ಏಕೈಕ ಟೆಸ್ಟ್, 49 ಏಕದಿನ, 24 ಟಿ20 ಪಂದ್ಯಗಳಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ.