ಕ್ರೀಡೆ

ನಾಡಾ ಜವಾನನ ಕೆಲಸಕ್ಕೆ ಅರ್ಜಿ ಹಾಕಿದ ಭಾರತ ತಂಡದ ಮಾಜಿ ನಾಯಕ

ನವದೆಹಲಿ: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಭಾರತ ವಿಕಲಚೇತನರ ಕ್ರಿಕೆಟ್ ತಂಡದ ಮಾಜಿ ನಾಯಕ ದಿನೇಶ್ ಸೈನ್ ರಾಷ್ಟ್ರೀಯ ಉದ್ದೀಪನ ನಿಗ್ರಹ ದಳದ (ನಾಡಾ) ಕಚೇರಿಯ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಹುಟ್ಟುತ್ತಲೇ ಪೊಲೀಯೋಗೆ ತುತ್ತಾಗಿದ್ದ ದಿನೇಶ್, 2015 ರಿಂದ 2019 ರವರೆಗೆ ಭಾರತ ತಂಡವನ್ನು ಮುನ್ನಡೆಸಿದ್ದರು. 35 ವರ್ಷದ ದಿನೇಶ್‌ಗೆ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದು, ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದಾರೆ. ‘ನನಗೀಗ 35 ವರ್ಷ, ಮೊದಲ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ, 12ನೇ ತರಗತಿ ಬಳಿಕ ರಾಷ್ಟ್ರೀಯ ತಂಡದ ಪರ ಆಡಿದೆ. ಸದ್ಯ ನನ್ನ ಬಳಿಕ ಹಣವಿಲ್ಲ. ನಾಡಾದಲ್ಲಿ ಒಂದು ಜವಾನನ ಕೆಲಸ ಬಾಕಿಯಿದೆ ಎಂದು ತಿಳಿಯಿತು. ಅದಕ್ಕೆ ಅರ್ಜಿ ಹಾಕಿರುವೆ’ ಎಂದು ಹರಿಯಾಣದ ಸೊನೆಪತ್‌ನಲ್ಲಿ ದಿನೇಶ್ ಸೈನ್ ತಿಳಿಸಿದ್ದಾರೆ.

ಮನೆಗೆ ನಾನೇ ದೊಡ್ಡವನು, ಕುಟುಂಬ ನಿರ್ವಹಣೆಯ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ನಾಡಾದಲ್ಲಿ ಖಾಲಿ ಇರುವ ಜವಾನನ ಹುದ್ದೆಗೆ ಅರ್ಜಿ ಹಾಕಿದ್ದೇನೆ ಎಂದು ಹೇಳಿದ್ದಾರೆ. ಸಾಮಾನ್ಯ ಅಭ್ಯರ್ಥಿಗೆ 25 ವರ್ಷ ನಿಗದಿಯಾಗಿದ್ದರೆ, ವಿಕಲಚೇತನರಿಗೆ 35 ವರ್ಷದವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಸರ್ಕಾರಿ ನೌಕರಿ ಪಡೆಯಲು ಇದೇ ನನಗಿರುವ ಕಡೇ ಅವಕಾಶ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಹಲವು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕಿದ್ದೆ. ಆದರೆ, ಯಾವುದೇ ಸಿಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಪೊಲೀಯೋ ನಡುವೆಯೂ ಕ್ರಿಕೆಟ್ ಆಡುವುದು ನನ್ನ ಅಭ್ಯಾಸವಾಗಿತ್ತು. ಬಳಿಕ ಜನ್ನ ಪಾಲಿಗೆ ಕ್ರಿಕೆಟ್ ಜೀವನವಾಯಿತು ಎಂದಿದ್ದಾರೆ.

2015ರ ಬಾಂಗ್ಲಾದೇಶದಲ್ಲಿ ನಡೆದ ಐದು ರಾಷ್ಟ್ರಗಳ ಟೂರ್ನಿಯಲ್ಲಿ ನಾನು ಅತಿಹೆಚ್ಚು ವಿಕೆಟ್ (8) ಕಬಳಿಸಿದ್ದೆ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಇದೇ ಟೂರ್ನಿಯಲ್ಲಿ ಆಡಲು ತಂಡದೊಂದಿಗೆ ತೆರಳಿದರೂ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ ಎಂದು ಸ್ಮರಿಸಿದರು. ನಾಡಾದಲ್ಲಿ ಉದ್ಯೋಗ ದಕ್ಕುವ ಭರವಸೆಯಿದೆ ಎಂದು ದಿನೇಶ್ ಹೇಳಿದ್ದಾರೆ.