ಬೆಂಗಳೂರು: ಭಾರತೀಯ ಕ್ರಿಕೆಟ್ನ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಒಬ್ಬರೆನಿಸಿರುವ ವೆಂಕಟೇಶ್ ಪ್ರಸಾದ್ ಬುಧವಾರ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 90ರ ದಶಕದಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿದ್ದ ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ವಿಡಿಯೋ ಪ್ರಕಟಿಸಿ ಶುಭಾಶಯ ಕೋರಿದೆ. ಬೆಂಗಳೂರಿನಲ್ಲಿ ನಡೆದ 1996ರ ಏಕದಿನ ವಿಶ್ವಕಪ್ ಟೂನಿರ್ಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಮೀರ್ ಸೊಹೈಲ್ ಅವರನ್ನು ಬೌಲ್ಡ್ ಮಾಡಿದ್ದ ವಿಡಿಯೋವನ್ನು ಐಸಿಸಿ ಪ್ರಕಟಿಸಿದೆ. ಅಲ್ಲದೆ, ಮಾಜಿ ವೇಗಿ ದೊಡ್ಡ ಗಣೇಶ್ ಸೇರಿದಂತೆ, ಹಾಲಿ -ಮಾಜಿ ಕ್ರಿಕೆಟಿಗರು ವೆಂಕಟೇಶ್ ಪ್ರಸಾದ್ಗೆ ಶುಭಾಶಯ ಕೋರಿದ್ದಾರೆ.
ಕರ್ನಾಟಕದ ಮತ್ತೋರ್ವ ವೇಗಿ ಜಾವಗಲ್ ಶ್ರೀನಾಥ್, ಸ್ಪಿನ್ನರ್ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್, 90ರ ದಶಕದಲ್ಲಿ ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ಪಡೆದಿದ್ದರು. ಬೌಲಿಂಗ್ನಲ್ಲಿ ವೆಂಕಿ, ಶ್ರೀನಾಥ್, ಕುಂಬ್ಳೆ ಮಿಂಚುತ್ತಿದ್ದರೆ, ರಾಹುಲ್ ದ್ರಾವಿಡ್ ಬ್ಯಾಟಿಂಗ್ನಲ್ಲಿ ತಂಡಕ್ಕೆ ಆಧಾರವಾಗುತ್ತಿದ್ದರು. ಎದುರಾಳಿ ತಂಡಕ್ಕೆ ಕಡಿವಾಣ ಹಾಕುವುದರಲ್ಲಿ ನಿಪುಣರಾಗಿದ್ದ ವೆಂಕಟೇಶ್ ಪ್ರಸಾದ್, ರಾಜ್ಯ ಹಾಗೂ ರಾಷ್ಟ್ರೀಯ ತಂಡದಲ್ಲಿ 90ರ ದಶಕದಲ್ಲಿ ಶ್ರೀನಾಥ್ ಹಾಗೂ ವೆಂಕಿ ಜೋಡಿ ಭಲೇ ವೇಗದ ಜೋಡಿ ಎನಿಸಿಕೊಂಡಿತ್ತು. ಇಂದಿಗೆ (ಆ.5) 51ನೇ ವರ್ಷಕ್ಕೆ ಕಾಲಿಟ್ಟಿರುವ ಮಾಜಿ ವೇಗಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
1996ರ ಏಕದಿನ ವಿಶ್ವಕಪ್ನ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ ಎಸೆತವನ್ನು ಬೌಂಡರಿಗಟ್ಟಿದ ಪಾಕಿಸ್ತಾನದ ಆಮೀರ್ ಸೊಹೈಲ್, ವೆಂಕಟೇಶ್ ಅವರನ್ನು ಚೆಂಡನ್ನು ತೋರಿಸಿ ಅಣಕ್ಕಿಳಿಸಿದರು. ಆದರೆ, ಮರು ಎಸೆತದಲ್ಲಿಯೇ ಸೊಹೈಲ್ ಅವರನ್ನು ಬೌಲ್ಡ್ ಮಾಡಿದ ವೆಂಕಟೇಶ್ ಸೇಡಿಗೆ ಕ್ಷಣಾರ್ಧದಲ್ಲಿಯೇ ಸೇಡು ತೀರಿಸಿಕೊಂಡಿದ್ದರು. ಈ ವಿಡಿಯೋ ಯೂಟ್ಯೂಬ್ನಲ್ಲಿ ಸಂಚಲವನ್ನೇ ಸೃಷ್ಟಿಸಿದೆ. ರಾಷ್ಟ್ರೀಯ ತಂಡದ ಪರ 33 ಟೆಸ್ಟ್, 161 ಏಕದಿನ ಪಂದ್ಯಗಳಿಂದ ಕ್ರಮವಾಗಿ 96 ಹಾಗೂ 196 ವಿಕೆಟ್ ಕಬಳಿಸಿದ್ದಾರೆ.