ಬೆಂಗಳೂರು: ಕರ್ನಾಟಕ ತಂಡದ ಮಾಜಿ ಬ್ಯಾಟ್ಸ್ಮನ್ ಜೆ.ಅರುಣ್ ಕುಮಾರ್, ಅಮೆರಿಕ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕ್ರಿಕೆಟ್ ವಲಯದಲ್ಲಿ ಜ್ಯಾಕ್ ಎಂದೇ ಪರಿಚಿತ ರಾಗಿರುವ ಅರುಣ್ ಕುಮಾರ್, ಹಲವು ವರ್ಷಗಳ ಕಾಲ ಕರ್ನಾಟಕ ತಂಡದ ಕೋಚ್ ಆಗಿದ್ದರು. ಜತೆಗೆ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ತರಬೇತುದಾರರಾಗಿದ್ದರು.
‘ಮಾಜಿ ಪ್ರಥಮ ದರ್ಜೆ ಆಟಗಾರ, ಐಪಿಎಲ್ ಆಟಗಾರ, ಕೋಚ್ ಆಗಿಯೂ ಅನುಭವ ಹೊಂದಿರುವ ಅರುಣ್ಕುಮಾರ್ ಅವರನ್ನು ತಂಡದ ಕೋಚ್ ಹುದ್ದೆಗೆ ಪರಿಗಣಿಸಿದ್ದೇವೆ’ ಎಂದು ಯುಎಸ್ಎ ಕ್ರಿಕೆಟ್ನ ಮುಖ್ಯ ಕಾರ್ಯನಿರ್ವಾಹಕ ಇಯಾನ್ ಹಿಗ್ಗಿನ್ಸ್ ತಿಳಿಸಿದ್ದಾರೆ. ಕರೊನಾ ವೈರಸ್ ಭೀತಿ ಮುಕ್ತಗೊಂಡ ಬಳಿಕ ಅರುಣ್ ಕುಮಾರ್ ವೀಸಾ ದಕ್ಕಿದರೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ, 2013-14 ಹಾಗೂ 2014-15ನೇ ಸಾಲಿನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ (ರಣಜಿ, ಇರಾನಿ, ವಿಜಯ್ ಹಜಾರೆ) ಗೆದ್ದುಕೊಂಡಿತ್ತು. ಕಳೆದ ದೇಶೀಯ ಋತುವಿನಲ್ಲಿ ಪುದುಚೇರಿ ತಂಡಕ್ಕೆ ಕೋಚ್ ಆಗಿದ್ದ ಅವರು, ಸ್ಥಳೀಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಉಂಟಾದ ಮನಸ್ತಾಪದಿಂದಾಗಿ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದರು.
ಟೆಸ್ಟ್ ಕ್ರಿಕೆಟ್ ಮಾನ್ಯತೆ ಕನಸು: ಅಮೆರಿಕ ತಂಡಕ್ಕೆ ಟೆಸ್ಟ್ ಮಾನ್ಯತೆ ಕೊಡಿಸುವುದೇ ತಮ್ಮ ಗುರಿ ಎಂದಿರುವ 45 ವರ್ಷದ ಅರುಣ್ ಕುಮಾರ್, ಕರೊನಾ ಭೀತಿ ನಿವಾರಣೆಯಾದ ಬಳಿಕ ವೀಸಾ ಸಿಕ್ಕರೆ ಅಮೆರಿಕಕ್ಕೆ ಪ್ರಯಾಣ ಕೈಗೊಳ್ಳುವೆ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಅರುಣ್ ಕುಮಾರ್, ಹೌಸ್ಟನ್ನಲ್ಲಿರುವ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಆಯ್ಕೆ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದರು.