ಕ್ರೀಡೆ

ರಾಜಸ್ಥಾನ ರಾಯಲ್ಸ್ ಏನಾದ್ರೂ​ ಸಂಜು ಸ್ಯಾಮ್ಸನ್ ಕೈಬಿಟ್ರೆ... ಸ್ಫೋಟಕ ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ! Sanju Samson ​

Sanju Samson : ಯಾವುದೇ ಕಾರಣಕ್ಕೂ ಮುಂಬರುವ 19ನೇ ಐಪಿಎಲ್ (2026) ಆವೃತ್ತಿಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಬಿಡುಗಡೆ ಮಾಡಬೇಡಿ ಎಂದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಟೀಮ್​ ಇಂಡಿಯಾ ಮಾಜಿ ಆರಂಭಿಕ ಆಟಗಾರ ಕಿಸ್​ ಶ್ರೀಕಾಂತ್​ ಎಚ್ಚರಿಕೆ ನೀಡಿದ್ದಾರೆ.

ಸಂಜು ಸ್ಯಾಮ್ಸನ್​ ಫ್ರಾಂಚೈಸಿ ತೊರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರೂ, ರಾಜಸ್ಥಾನ ರಾಯಲ್ಸ್ ಅವರನ್ನು ಬಿಡುಗಡೆ ಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜಸ್ಥಾನ ರಾಯಲ್ಸ್ ತಂಡ ಸಂಜು ಅವರನ್ನು ಬಿಡುಗಡೆ ಮಾಡಿದರೆ ತಂಡ ಸಂಪೂರ್ಣ ಕುಸಿಯುತ್ತದೆ ಎಂದು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶ್ರೀಕಾಂತ್​ ಅವರು ಹೇಳಿದ್ದಾರೆ.

ಸಂಜು ಮತ್ತು ರಾಹುಲ್ ದ್ರಾವಿಡ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಅದರ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ತಂಡದ ಆಡಳಿತ ಮಂಡಳಿಯು ಸಂಜು ಅವರಿಗೆ ಭಾರಿ ಮೊತ್ತವನ್ನು ಪಾವತಿಸುವ ಮೂಲಕ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಈ ಪರಿಸ್ಥಿತಿಯಲ್ಲಿ, ನೀವು ಅವರನ್ನು ಇದ್ದಕ್ಕಿದ್ದಂತೆ ಬಿಡುಗಡೆ ಮಾಡಿದರೆ ತಂಡದ ಸಂಪೂರ್ಣ ಸಮತೋಲನ ಕಳೆದುಹೋಗುವುದಿಲ್ಲವೇ? ಎಂದು ಶ್ರೀಕಾಂತ್​ ಪ್ರಶ್ನೆ ಮಾಡಿದ್ದಾರೆ.

2008 ರಿಂದ ರಾಜಸ್ಥಾನ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅದಾದ ನಂತರ ಅವರು ಫೈನಲ್ ತಲುಪಿದ್ದಾರೆ. ನಾನು ಆಡಳಿತ ಮಂಡಳಿಯಲ್ಲಿದ್ದಿದ್ದರೆ ಸಂಜು ಅವರನ್ನು ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ. ರಿಯಾನ್ ಪರಾಗ್ ಅವರನ್ನು ನಾಯಕನನ್ನಾಗಿ ಮಾಡಬೇಕೆ ಅಥವಾ ಬೇಡವೇ ಎಂಬುದು ಅವರ ಆಯ್ಕೆ. ನಾನಾಗಿದ್ದರೆ, ಸಂಜು ಅವರನ್ನು ಬ್ಯಾಟ್ಸ್‌ಮನ್ ಎಂದು ಪರಿಚಯಿಸುತ್ತಿದ್ದೆ ಎಂದು ಶ್ರೀಕಾಂತ್​ ಹೇಳಿದ್ದಾರೆ.

ಐದು ಬಾರಿಯ ಚಾಂಪಿಯನ್‌ಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್​​ಮನ್ ಬದಲಿಯಾದರೆ, ಸಂಜು ಸ್ಯಾಮ್ಸನ್ ತಂಡಕ್ಕೆ ಸೂಕ್ತ ಆಟಗಾರ. ನಿಜ ಹೇಳಬೇಕೆಂದರೆ, ಸಂಜು ಒಬ್ಬ ಅದ್ಭುತ ಆಟಗಾರ ಮತ್ತು ಅವರು ಚೆನ್ನೈನಲ್ಲಿ ಬಹಳ ಜನಪ್ರಿಯರು. ಅವರಿಗೆ ಚೆನ್ನೈನಲ್ಲಿ ಉತ್ತಮ ಬ್ರಾಂಡ್ ಇಮೇಜ್ ಇದೆ. ನಾನು ಹೇಳಿದಂತೆ, ಅವರು ರಾಜಸ್ಥಾನ ತಂಡವನ್ನು ಬಿಡಲು ಸಿದ್ಧರಿದ್ದರೆ ಅವರನ್ನು ಚೆನ್ನೈ ತಂಡಕ್ಕೆ ಆಯ್ಕೆ ಮಾಡುವ ಮೊದಲ ವ್ಯಕ್ತಿ ನಾನೇ. ಸಂಜು ಅವರು ಎಂಎಸ್ ಧೋನಿಗೆ ಸರಿಯಾದ ಬದಲಿ ಆಟಗಾರ ಎಂದು ಶ್ರೀಕಾಂತ್ ಹೇಳಿದರು.

ಅಂದಹಾಗೆ, ಆರ್​ಆರ್​ ಆಡಳಿತ ಮಂಡಳಿ ಸಂಜು ಅವರನ್ನು ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ. ವಾಸ್ತವವಾಗಿ, ಸಂಜು ಅವರ ಮೇಲೆ ಅಪಾರ ಆಸಕ್ತಿ ತೋರಿಸುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆರ್​ಆರ್​ ತಂಡ ಒಂದು ಒಪ್ಪಂದವನ್ನು ಮುಂದಿಟ್ಟಿದೆ. ಅದೇನೆಂದರೆ, ಸಂಜು ಅವರನ್ನು ನೀಡಿದರೆ, ಅದಕ್ಕೆ ಬದಲಿಯಾಗಿ ಒಬ್ಬ ವಿದೇಶಿ ಆಟಗಾರ ಮತ್ತು ಒಬ್ಬ ದೇಶೀಯ ಆಟಗಾರನನ್ನು ನೀಡಬೇಕು ಎಂದು ಆರ್​ಆರ್ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸಿಎಸ್‌ಕೆ ಈ ಒಪ್ಪಂದಕ್ಕೆ ಒಪ್ಪಿದೆ ಅಂತಾನೂ ಹೇಳಲಾಗುತ್ತಿದೆ. ಆದಾಗ್ಯೂ, ಫ್ರಾಂಚೈಸಿಯ ಅಂತಿಮ ನಿರ್ಧಾರವು ಆರ್​ಆರ್​ ಮಾಲೀಕರು ಯಾರನ್ನು ಬಯಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇನ್ನು ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅಂದಹಾಗೆ, ಸಂಜು ಅವರು ರಾಜಸ್ಥಾನ ರಾಯಲ್ಸ್ ಜೊತೆ 2027ರ ಸೀಸನ್ ವರೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರಾಗೇ ಬಿಡುಗಡೆ ಮಾಡದ ಹೊರತು ಸಂಜು ಅವರು ಸ್ವಯಂ ಪ್ರೇರಿತವಾಗಿ ಬೇರೆ ಫ್ರಾಂಚೈಸ್‌ಗೆ ಹೋಗಲು ಸಾಧ್ಯವಿಲ್ಲ. ವಾಸ್ತವವಾಗಿ, ಸಂಜು, ಮ್ಯಾನೇಜ್‌ಮೆಂಟ್‌ನೊಂದಿಗೆ ಹಲವು ಸಂಪರ್ಕಗಳನ್ನು ಹೊಂದಿದ್ದಾರೆ. ನಾಯಕ ಕೂಡ ಹೌದು. ಇದಲ್ಲದೆ, ಕೋಚ್ ರಾಹುಲ್​ ದ್ರಾವಿಡ್ ಅವರ ನೆಚ್ಚಿನ ಶಿಷ್ಯ. ಅವರ ನಡುವೆ ಯಾವ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು ಎಂಬುದು ತಿಳಿದಿಲ್ಲ.

ಆದರೆ, 2025ರ ಐಪಿಎಲ್ ಋತುವಿನ ಮಧ್ಯದಲ್ಲಿ, ಸ್ಯಾಮ್ಸನ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದ ನಿರ್ವಹಣೆಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ವರದಿಗಳು ಬಂದವು. ಜೋಸ್ ಬಟ್ಲರ್ ಅವರಂತಹ ಪ್ರಮುಖ ಆಟಗಾರನನ್ನು ಸೀಸನ್​ಗೂ ಮುಂಚಿತವಾಗಿ ಬಿಡುಗಡೆ ಮಾಡಿದ್ದು ಮತ್ತು ಗಾಯದಿಂದ ಚೇತರಿಸಿಕೊಂಡ ನಂತರವೂ ಕೆಲವು ಪಂದ್ಯಗಳಲ್ಲಿ ರಿಯಾನ್ ಪರಾಗ್ ಅವರ ನಾಯಕತ್ವವನ್ನು ಮುಂದುವರಿಸಿದ್ದು ಸ್ಯಾಮ್ಸನ್​ಗೆ ಇಷ್ಟವಾಗಲಿಲ್ಲ. ಇದರಿಂದ ಅವರ ಅಸಮಾಧಾನಗೊಂಡಿದ್ದರು. ಹೀಗಾಗಿ ತಂಡವನ್ನು ತೊರೆಯಲು ಬಯಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಕಳೆದ ಐಪಿಎಲ್ ಸೀಸನ್ ಮುಗಿದ ನಂತರ, ಸಿಎಸ್‌ಕೆ ಸಿಇಒ ಮತ್ತು ಫ್ರಾಂಚೈಸಿಯ ಮುಖ್ಯ ತರಬೇತುದಾರ ಅಮೆರಿಕದಲ್ಲಿ ಸಂಜು ಅವರನ್ನು ಭೇಟಿಯಾದರು ಎಂದು ವರದಿಯಾಗಿದೆ. ಅವರ ನಡುವೆ ಸಕಾರಾತ್ಮಕ ಚರ್ಚೆಗಳು ನಡೆದಂತೆ ತೋರುತ್ತದೆ. ಎಲ್ಲವೂ ಯೋಜನೆಯಂತೆ ನಡೆದು ಸಂಜು ಅವರೇನಾದರೂ ಸಿಎಸ್‌ಕೆಗೆ ಬಂದರೆ, ಅವರು ಸಾಮಾನ್ಯ ಆಟಗಾರನಾಗಿ ಮುಂದುವರಿಯುತ್ತಾರೋ ಅಥವಾ ರುತುರಾಜ್ ಅವರನ್ನು ಬದಲಾಯಿಸಿ ನಾಯಕತ್ವವನ್ನು ಅವರಿಗೆ ಹಸ್ತಾಂತರಿಸಲಾಗುತ್ತದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. (ಏಜೆನ್ಸೀಸ್​)