ಕ್ರೀಡೆ

ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್‌ಗೆ ಪಿತೃವಿಯೋಗ

ಮುಂಬೈ: ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಅವರ ತಂದೆ ಅಜಯ್ ಭಾಯಿ ಭಾನುವಾರ ನಿಧನರಾದರು. ‘ಇಂದು ನನ್ನ ತಂದೆ ಇಹಲೋಕ ತ್ಯಜಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಓಂ ನಮಃ ಶಿವಾಯ’ ಎಂದು ಪಾರ್ಥಿವ್ ಪಟೇಲ್ ಟ್ವೀಟ್ ಮಾಡಿದ್ದಾರೆ. 2019ರಲ್ಲಿ ಮಿದುಳು ರಕ್ತಸ್ತ್ರಾವಕ್ಕೆ ಅಜಯ್ ಭಾಯಿ ತುತ್ತಾಗಿದ್ದರು. ಈ ವೇಳೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದ ಪಾರ್ಥಿವ್ ಪಟೇಲ್, ತಂದೆಯವರ ಆರೋಗ್ಯ ವಿಚಾರಿಸುವ ಸಲುವಾಗಿ ಬಿಡುವಿನ ವೇಳೆ ಅಹಮದಾಬಾದ್‌ಗೆ ತೆರಳುತ್ತಿದ್ದರು.

36 ವರ್ಷದ ಪಾರ್ಥಿವ್ ಪಟೇಲ್ ರಾಷ್ಟ್ರೀಯ ತಂಡದ ಪರ 25 ಟೆಸ್ಟ್, 38 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿದಂತೆ ಕ್ರಿಕೆಟ್ ವಲಯದ ಹಲವು ಹಿರಿಯ ಆಟಗಾರರು ಅಜಯ್ ಭಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 17ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪಾರ್ಥಿವ್ ಪಟೇಲ್, ಕಳೆದ ಐಪಿಎಲ್ ಆವೃತ್ತಿ ಮುಕ್ತಾಯಗೊಂಡ ಬೆನ್ನಲ್ಲೇ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಆರ್‌ಸಿಬಿ ಅಲ್ಲದೆ, ಐಪಿಎಲ್‌ನಲ್ಲಿ ಸಿಎಸ್‌ಕೆ, ಡೆಕ್ಕನ್ ಚಾರ್ಜರ್ಸ್‌, ಕೊಚ್ಚಿ ಟಸ್ಕರ್ಸ್‌, ಸನ್‌ರೈಸರ್ಸ್‌ ಹೈದರಾಬಾದ್, ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಸದ್ಯ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.