ಕ್ರೀಡೆ

ಕನ್ನಡಿಗ ದೇವದತ್ ಪಡಿಕಲ್‌ಗೆ ಈ ಮಾಜಿ ಎಡಗೈ ಆರಂಭಿಕನೇ ಆದರ್ಶ

ಬೆಂಗಳೂರು: ಆರ್‌ಸಿಬಿ ತಂಡದಲ್ಲಿ ಕನ್ನಡಿಗರಿಲ್ಲ ಎಂಬ ಕಳೆದ ಕೆಲ ವರ್ಷಗಳ ಕೊರತೆಯನ್ನು ನೀಗಿಸಿದ್ದು ಮಾತ್ರವಲ್ಲದೆ ಐಪಿಎಲ್ 13ನೇ ಆವೃತ್ತಿಯಲ್ಲಿ ಗಮನ ಸೆಳೆದ ಯುವ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್. ಟೂರ್ನಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಗೂ ಭಾಜನರಾದ ದೇವದತ್ ಪಡಿಕಲ್, ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಆರನ್ ಫಿಂಚ್ ಅವರಂಥ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರ ಜತೆಗೆ ಆಡಿ ಸಾಮರ್ಥ್ಯ ಸಾಬೀತು ಪಡಿಸಿದರು. ಐಪಿಎಲ್ ಟೂರ್ನಿಯ ಬೆನ್ನಲ್ಲೇ ಅವರು ತಮ್ಮ ಪಾಲಿನ ಆದರ್ಶ ಬ್ಯಾಟ್ಸ್‌ಮನ್ ಯಾರೆಂದು ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಎಡಗೈ ಆರಂಭಿಕ ಗೌತಮ್ ಗಂಭೀರ್, ತಮ್ಮ ಪಾಲಿಗೆ ಅತ್ಯಂತ ಆರ್ದಶ ಬ್ಯಾಟ್ಸ್‌ಮನ್. ಅವರ ಸದೃಢ ಮನೋಭಾವ ಮತ್ತು ಒತ್ತಡದ ನಡುವೆ ಮಿಂಚುವ ಸಾಮರ್ಥ್ಯ ತಮಗಿಷ್ಟ ಎಂದು 20 ವರ್ಷದ ದೇವದತ್ ಪಡಿಕಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಗೌತಮ್ ಗಂಭೀರ್ ಅವರ ಬ್ಯಾಟಿಂಗ್ ಅನ್ನು ನಾನು ಬಾಲ್ಯದಿಂದಲೂ ಆನಂದಿಸುತ್ತ ಬಂದಿದ್ದೇನೆ. ತಂಡಕ್ಕೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ಅವರು ಮಿಂಚುತ್ತಿದ್ದರು ಮತ್ತು ತಂಡಕ್ಕೆ ಆಸರೆಯಾಗಿ ನಿಲ್ಲುತ್ತಿದ್ದರು. ಅದು ನನಗೆ ಬಲು ಇಷ್ಟವಾದುದು. ತಂಡ ಒತ್ತಡಕ್ಕೆ ಸಿಲುಕಿದಾಗಲೆಲ್ಲ ಅವರಿಂದ ಅತ್ಯುತ್ತಮ ಆಟ ಬರುತ್ತಿತ್ತು. ಅವರು ನನ್ನ ಆದರ್ಶ ಕ್ರಿಕೆಟಿಗರಲ್ಲೊಬ್ಬರು’ ಎಂದು ದೇವದತ್ ಪಡಿಕಲ್ ವಿವರಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಅವರು 473 ರನ್ ಸಿಡಿಸಿದ್ದರು. ಈ ಮೂಲಕ ಆರ್‌ಸಿಬಿ ಪರ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.

‘ನಾನು ಸಾಕಷ್ಟು ಶಾಂತವಾಗಿರಲು ಪ್ರಯತ್ನಿಸಿದ್ದೆ. ಆದರೆ ಐಪಿಎಲ್‌ನಂಥ ಟೂರ್ನಿಗಳಲ್ಲಿ ಶಾಂತವಾಗಿರುವುದು ಸುಲಭವಲ್ಲ. ತಂಡದಲ್ಲಿನ ಹಿರಿಯ ಆಟಗಾರರಿಂದ ನಾನು ಸಾಕಷ್ಟು ಕಲಿತಿದ್ದೇನೆ’ ಎಂದು ಕರ್ನಾಟಕದ ಬ್ಯಾಟ್ಸ್‌ಮನ್ ಹೇಳಿದ್ದಾರೆ.

ಯಶಸ್ಸಿನಿಂದ ಮೈಮರೆಯಬೇಡ. ಯಶಸ್ಸು ನಿನ್ನ ಮೇಲೆ ಪರಿಣಾಮ ಬೀರದಂತೆ ನೋಡಿಕೋ. ಕಠಿಣ ಪರಿಶ್ರಮವನ್ನು ಮುಂದುವರಿಸು ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಟೂರ್ನಿಯ ಅಂತ್ಯದಲ್ಲಿ ತಮಗೆ ತಿಳಿಸಿದರು ಎಂದೂ ದೇವದತ್ ಪಡಿಕಲ್ ಬಹಿರಂಗಪಡಿಸಿದ್ದಾರೆ.