ಕ್ರೀಡೆ

ಪ್ರಸ್ತುತ ಕ್ರಿಕೆಟ್​ ಜಗತ್ತಿನಲ್ಲಿ ಬೆಸ್ಟ್​ ಟೆಕ್ನಿಕ್​ ಇರುವುದು ಈತನಿಗೆ! ಆದ್ರೆ... ಮಾಜಿ ಆಟಗಾರನ ಹೇಳಿಕೆ ವೈರಲ್

ಮೋಹನ್​ ಶೆಟ್ಟಿ

ಲಾಹೋರ್​: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ 2024ರ ಟೂರ್ನಿಯ ಮೊದಲ ಹಂತದಲ್ಲೇ ಗೇಟ್ ಪಾಸ್ ಪಡೆದ ಪಾಕಿಸ್ತಾನ, ಟೂರ್ನಿಯ ಪೂರ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಗುರಿಯಾಯಿತು. ಪಾಕ್​ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂದು ದೂಷಿಸಿದ್ದ ಮಾಜಿ ಆಟಗಾರರು, ಬಾಬರ್ ಅಜಂರ ನಾಯಕತ್ವದ ವಿರುದ್ಧ ಕಿಡಿಕಾರಿದ್ದರು. ಆದ್ರೆ, ಇದೀಗ ಅದೆಲ್ಲವೂ ತಲೆಕೆಳಗಾಗಿದ್ದು, ಪ್ರಸ್ತುತ ವಿಶ್ವ ಕ್ರಿಕೆಟ್​ನಲ್ಲಿ ಬೆಸ್ಟ್​ ಟೆಕ್ನಿಕ್ ಹೊಂದಿರುವ ಆಟಗಾರ ಎಂದರೆ ಅದು ಬಾಬರ್ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್​ ಜಾಹಿದ್​, "ಬೇರೆ ಆಟಗಾರರಿಗೆ ಹೋಲಿಸಿದರೆ ಬಾಬರ್​ ಅತ್ಯುತ್ತಮ ಕ್ರಿಕೆಟಿಂಗ್ ಟೆಕ್ನಿಕ್ ಹೊಂದಿದ್ದಾರೆ. ವೈಟ್ ಬಾಲ್ ಪಂದ್ಯಗಳಿಗೆ ಕ್ಯಾಪ್ಟನ್ ಆಗಿರುವ ಬಾಬರ್ ಆಜಂ, ಇತರೆ ಹೆಸರುವಾಸಿಯಾದ ಕ್ರಿಕೆಟಿಗರಿಗಿಂತ ಉತ್ತಮ ಕೌಶಲ್ಯಗಳನ್ನು ಪಡೆದಿದ್ದಾರೆ. ಆದ್ರೆ, ಆಟದ ಬಗ್ಗೆ ಹೆಚ್ಚು ವಿಷಯ ಅರಿತುಕೊಳ್ಳುವಲ್ಲಿ ಬಾಬರ್‌ ಹಿಂದೆ ಇದ್ದರೆ, ಇಂಗ್ಲೆಂಡ್​ನ ಜೋ ರೂಟ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮುಂದಿದ್ದಾರೆ. ಅವರಿಬ್ಬರು ಹೆಚ್ಚು ಬುದ್ಧಿವಂತರು" ಎಂದರು.

"ಸ್ಕಿಲ್​ನಲ್ಲಿ ಬಾಬರ್ ಆಜಂ ಮೊದಲಿಗರು. ಅದರ ಬಗ್ಗೆ ಎರಡನೇ ಮಾತಿಲ್ಲ. ಬ್ಯಾಟರ್​​ಗಳ ಸಾಲಿನಲ್ಲಿ ಅವರು ಬೆಸ್ಟ್​ ಟೆಕ್ನಿಕ್ ಹೊಂದಿದ್ದಾರೆ. ಆದರೆ, ಪ್ರದರ್ಶನ ಅನ್ನೋ ವಿಷಯ ಬಂದಾಗ ಮಾತ್ರ ಬಾಬರ್​ ಹಿಂದುಳಿದಿದ್ದಾರೆ. ಈ ವಿಷಯದಲ್ಲಿ ಜೋ ರೂಟ್ ಮತ್ತು ಸ್ಟಿವ್ ಸ್ಮಿತ್ ಅದ್ಭುತ. ಇವರಿಬ್ಬರಿಗೆ ಆಜಂರಂತೆ ಸಾಮರ್ಥ್ಯ ಇಲ್ಲದೆ ಇರಬಹುದು. ಆದ್ರೆ, ಆಟದ ವಿಷಯದಲ್ಲಿ ಅವರು ಬುದ್ಧಿವಂತರು. ಇದನ್ನು ಅಳೆದು ತೂಗಿ ನೋಡಿದಾಗ ಸ್ಮಿತ್​ಗೆ ಪ್ರಥಮ, ರೂಟ್​ಗೆ ದ್ವಿತೀಯ ಸ್ಥಾನ ಕೊಡ್ತೀನಿ. ಇನ್ನು ಮೂರನೇ  ಸ್ಥಾನ ಬಾಬರ್​ಗೆ ಕೊಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.