ಮುಂಬೈ: ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಎ ಗುಂಪಿನಲ್ಲಿ 3ನೇ ಸೋಲು ಅನುಭವಿಸುವುದರೊಂದಿಗೆ ಸೂಪರ್ ಲೀಗ್ ಹಂತಕ್ಕೇರುವ ರೇಸ್ನಲ್ಲಿ ಭಾರಿ ಹಿನ್ನಡೆ ಕಂಡಿದೆ. ಕರ್ನಾಟಕ ತಂಡ ಭಾನುವಾರ ನಡೆದ ತನ್ನ 5ನೇ ಲೀಗ್ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಚಂಡೀಗಢ ಎದುರು 7 ವಿಕೆಟ್ಗಳಿಂದ ಶರಣಾಯಿತು. ಇದರಿಂದ ಆರ್. ಸ್ಮರಣ್ ಪಡೆ ಅಂಕಪಟ್ಟಿಯಲ್ಲಿ 8 ಅಂಕದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯಕ್ಕೆ ಇನ್ನು 2 ಲೀಗ್ ಪಂದ್ಯಗಳಷ್ಟೇ ಬಾಕಿ ಇವೆ. ಗುಂಪಿನ ಅಗ್ರ 2 ತಂಡಗಳಷ್ಟೇ ಸೂಪರ್ ಲೀಗ್ ಹಂತಕ್ಕೇರಲಿವೆ.
ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಕರ್ನಾಟಕ, ಹಾರ್ದಿಕ್ ಚೌಧರಿ (17ಕ್ಕೆ 3) ಮತ್ತು ಭಾಗ್ಮೆಂದರ್ ಲಾಥರ್ (19ಕ್ಕೆ 3) ದಾಳಿಗೆ ಕುಸಿದು 17.5 ಓವರ್ಗಳಲ್ಲಿ ಕೇವಲ 95 ರನ್ಗಳಿಗೆ ಆಲೌಟ್ ಆಯಿತು. ಲವನೀತ್ ಸಿಸೋಡಿಯಾ (18), ಕರುಣ್ ನಾಯರ್ (25) ಮೊದಲ ವಿಕೆಟ್ಗೆ 44 ರನ್ ಕಲೆಹಾಕಿದ ಬಳಿಕ ಕರ್ನಾಟಕ, 51 ರನ್ ಅಂತರದಲ್ಲಿ ಎಲ್ಲ 10 ವಿಕೆಟ್ ಕಳೆದುಕೊಂಡಿತು. ಪ್ರತಿಯಾಗಿ ಚಂಡೀಗಢ 13.5 ಓವರ್ಗಳಲ್ಲಿ 3 ವಿಕೆಟ್ಗೆ 96 ರನ್ ಗಳಿಸಿ ಜಯಿಸಿತು. ಎಡಗೈ ಸ್ಪಿನ್ನರ್ ಶ್ರೀಶ ಆಚಾರ್ (27ಕ್ಕೆ 2) ಆರಂಭಿಕರನ್ನು ಬೇಗನೆ ಔಟ್ ಮಾಡಿ ಚಂಡೀಗಢಕ್ಕೆ ಆರಂಭಿಕ ಆಘಾತ ನೀಡಿದರೂ, ನಾಯಕ ಶಿವಂ ಭಾಂಬ್ರಿ (52) ಅರ್ಧಶತಕ ಬಾರಿಸಿ ರಾಜ್ಯದ ತಿರುಗೇಟಿಗೆ ತಡೆಯೊಡ್ಡಿದರು.
ಕರ್ನಾಟಕ: 17.5 ಓವರ್ಗಳಲ್ಲಿ 95 (ಲವನೀತ್ 18, ಕರುಣ್ 25, ಅನೀಶ್ವರ್ 2, ಸ್ಮರಣ್ 3, ಮನೀಷ್ 14, ಮನ್ವಂತ್ 2, ಪ್ರವಿಣ್ ದುಬೆ 16, ಎಲ್ಆರ್ ಕುಮಾರ್ 9, ಅಭಿಲಾಷ್ 9, ಶ್ರೀಶ 2*, ಭಾಗ್ಮೆಂದರ್ 19ಕ್ಕೆ 3, ಹಾರ್ದಿಕ್ ಚೌಧರಿ 17ಕ್ಕೆ 3, ಚಿರಾಗ್ವೀರ್ 20ಕ್ಕೆ 2, ಜಗ್ಜೀತ್ 11ಕ್ಕೆ 2), ಚಂಡೀಗಢ: 13.5 ಓವರ್ಗಳಲ್ಲಿ 3 ವಿಕೆಟ್ಗೆ 96 (ಶಿವಂ ಭಾಂಬ್ರಿ 52, ಸನ್ಯಾಮ್ ಸೈನಿ 27*, ಶ್ರೀಶ ಆಚಾರ್ 27ಕ್ಕೆ 2).
ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ಮಂಗಳವಾರ
ಎದುರಾಳಿ: ರಾಜಸ್ಥಾನ
ಆರಂಭ: ಮಧ್ಯಾಹ್ನ 1.30