ಕ್ರೀಡೆ

ಪಾಕ್ ಕೋಚ್ ಹುದ್ದೆಗೆ ಟೀಮ್ ಇಂಡಿಯಾ ಕೋಚ್ ವೇತನಕ್ಕಿಂತಲೂ ಹೆಚ್ಚಿನ ಆಫರ್ !: ರೇಸ್‌ನಲ್ಲಿ ಆಸೀಸ್ ಆಲ್ರೌಂಡರ್

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ರೇಸ್‌ನಲ್ಲಿರುವ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಾರ್ಷಿಕ 17 ಕೋಟಿ ರೂಪಾಯಿ ವೇತನ ನೀಡಲು ಮುಂದಾಗಿದ್ದು, ಮಾಸಿಕವಾಗಿ 4.6 ಕೋಟಿ ರೂ. ಪಾವತಿಸಲಿದೆ. ಆದರೆ ಪಿಸಿಬಿ ತನ್ನ ಸಂಭಾವನೆಯ ಬೇಡಿಕೆಗಳನ್ನು ಒಪ್ಪಿಕೊಂಡರೂ ಕೋಚ್ ಹುದ್ದೆ ಒಪ್ಪುವಲ್ಲಿ ವ್ಯಾಟ್ಸನ್ ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ವರದಿಯಾಗಿದೆ. ಇದು ವಿದೇಶಿ ತರಬೇತುದಾರರಿಗೆ ಪಿಸಿಬಿ ಪಾವತಿಸಲಿರುವ ಅತ್ಯಧಿಕ ವೇತನ ಎನಿಸಿದೆ.

ಪ್ರಸ್ತುತ ವ್ಯಾಟ್ಸನ್, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡ ಹಾಗೂ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ತರಬೇತಿ ಬಳಗದ ಭಾಗವಾಗಿದ್ದು, ಅಂತಾರಾಷ್ಟ್ರೀಯ ತಂಡಗಳ ಪರ ಕಾರ್ಯನಿರ್ವಹಿಸಿದ ಅನುಭವ ಇಲ್ಲ. ಜತೆಗೆ ಅಮೆರಿಕದ ಮೇಜರ್ ಲೀಗ್ ಟೂರ್ನಿಯಲ್ಲೂ ವ್ಯಾಟ್ಸನ್ಸ್ ಕಣಕ್ಕಿಳಿಯಲಿದ್ದಾರೆ. ದೇಶೀಯ ಟೂರ್ನಿಗಳಿಂದ ಯುವ ಪ್ರತಿಭೆಗಳನ್ನು ಗುರತಿಸಲು ಪಾಕಿಸ್ತಾನದಲ್ಲಿ ಗರಿಷ್ಠ ಸಮಯ ಕಳೆಯಬೇಕಾಗಿದೆ.

ಜತೆಗೆ ಪಿಸಿಬಿ ಮಂಡಳಿಯಲ್ಲಿ ಪದೇ ಪದೆ ಉಂಟಾಗುವ ಬಿಕ್ಕಟ್ಟುಗಳ ನಡುವೆ ಕಾರ್ಯನಿರ್ವಹಿಸುವ ಒತ್ತಡ ಉಂಟಾಗುವುದರಿಂದ ದುಬಾರಿ ಸಂಭಾವನೆಯ ನಡುವೆಯೂ ಶೇನ್ ವ್ಯಾಟ್ಸನ್ ತನ್ನ ಅಂತಿಮ ನಿರ್ಧಾರವನ್ನು ಕಾಯ್ದಿರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಿಕ್ಕಿ ಅರ್ಥರ್‌ನಿಂದ ತೆರವಾಗಿರುವ ಸ್ಥಾನವನ್ನು ವ್ಯಾಟ್ಸನ್ ತುಂಬಲಿದ್ದಾರೆ. ಪ್ರಸ್ತುತ ತಂಡದ ಆಟಗಾರರ ಸಂಭಾವನೆ ಹಾಗೂ ಕ್ರೀಡಾಂಗಣ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಿಸಿಬಿಯ ಈ ನಡೆ ಅಚ್ಚರಿ ಎನಿಸಿದೆ. ಇದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಪಡೆಯುತ್ತಿರುವ ವಾರ್ಷಿಕ ವೇತನಕ್ಕಿಂತಲೂ ಅಧಿಕವಾಗಿದೆ. ದ್ರಾವಿಡ್ ವಾರ್ಷಿಕ ₹12 ಕೋಟಿ ವೇತನದ ಒಪ್ಪಂದ ಹೊಂದಿದ್ದಾರೆ.