ಕ್ರೀಡೆ

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 15 ಡಕೌಟ್!,10 ರಿಟೈಡ್ ಹರ್ಟ್: ಕಾರಣ ನಿಜಕ್ಕೂ ಅಚ್ಚರಿ!

ಬ್ಯಾಂಕಾಕ್: ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ತಂಡ ಎಲ್ಲ 10 ಬ್ಯಾಟರ್‌ಗಳು ರಿಟೈರ್ಡ್ ಹರ್ಟ್ ಆಗುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿೈಯರ್ ಟೂರ್ನಿಯ ಯುಎಇ ಹಾಗೂ ಕತಾರ್ ನಡುವಿನ ಪಂದ್ಯ ಈ ದೃಷ್ಟಾಂತಕ್ಕೆ ಸಾಕ್ಷಿಯಾಗಿದ್ದು, ಯುಎಇ 163 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಜತೆಗೆ ಮಹಿಳಾ ಟಿ20ಯಲ್ಲಿ ಅತಿ ಹೆಚ್ಚು ಡಕೌಟ್‌ಗಳು(15) ದಾಖಲಾದ ಮೊದಲ ಸನ್ನಿವೇಶವೂ ಇದಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಯುಎಇ ತಂಡ ನಾಯಕಿ ಈಶಾ ಓಜಾ (113 ರನ್, 55 ಎಸೆತ, 14 ಬೌಂಡರಿ, 5 ಸಿಕ್ಸರ್) ಹಾಗೂ ತೀರ್ಥಾ ಸತೀಶ್ (74 ರನ್, 42 ಎಸೆತ, 11 ಬೌಂಡರಿ) ಜತೆಯಾಟದ ನೆರವಿನಿಂದ 15.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 192 ರನ್‌ಗಳಿಸಿತು. ಆಗ ಹವಾಮಾನ ವೈಪರೀತ್ಯ ಮಳೆಯ ಮುನ್ಸೂಚನೆ ನೀಡಿತು. ಟಿ20ಯಲ್ಲಿ ಇನಿಂಗ್ಸ್ ಡಿಕ್ಲೇರ್‌ನ ಆಯ್ಕೆ ಇಲ್ಲದಿರುವುರಿಂದ ಪೂರ್ಣ ಅಂಕಗಳಿಸುವ ಬುದ್ಧಿವಂತಿಕೆ ಪ್ರದರ್ಶಿಸಿದ ಯುಎಇಯ ಈಶಾ, ತೀರ್ಥಾ ಸೇರಿ ಇತರ ಎಂಟು ಬ್ಯಾಟುಗಾರ್ತಿಯರೂ (ಒಂದೂ ಎಸೆತ ಎದುರಿಸದೆ) ರಿಟೈಡ್ ಹರ್ಟ್ ಆದರು. ಇದರೊಂದಿಗೆ ಯುಇಎ 16 ಓವರ್‌ಗಳಲ್ಲಿ 192 ರನ್‌ಗಳಿಗೆ ಆಲೌಟ್ ಆಯಿತು.

ಇದಕ್ಕೆ ಪ್ರತಿಯಾಗಿ ಚೇಸಿಂಗ್‌ಗೆ ಇಳಿದ ಕತಾರ್ 11.1 ಓವರ್‌ಗಳಲ್ಲಿ 29 ರನ್‌ಗಳಿಗೆ ಸರ್ವಪತನ ಕಂಡಿತು. ಏಳು ಬ್ಯಾಟುಗಾರ್ತಿಯರು ಶೂನ್ಯಕ್ಕೆ ಔಟಾದರೆ, ಮೂವರು ಕ್ರಮವಾಗಿ 20, 5,2 ರನ್‌ಗಳಿಸಿದರು. ಬೃಹತ್ ಅಂತರದ ಗೆಲುವಿನೊಂದಿಗೆ ರನ್‌ರೇಟ್‌ನಲ್ಲಿ +6.998 ಭಾರಿ ಪ್ರಗತಿ ಕಂಡ ಯುಎಇ ಬಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.