World Yoga Championship 2026: India wins five gold medals on the first day itself! 
ಫುಟ್ಬಾಲ್

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

ಅಹಮದಾಬಾದ್‌: ಏಕಾ ಅರೆನಾದಲ್ಲಿ ನಡೆಯುತ್ತಿರುವ ಉದ್ಘಾಟನಾ ‘ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ ( World Yoga Championship) 2026’ರಲ್ಲಿ ಆತಿಥೇಯ ಭಾರತ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಚಾಂಪಿಯನ್‌ಶಿಪ್‌ನ ಆರಂಭಿಕ ಆರು ಚಿನ್ನದ ಪದಕಗಳಲ್ಲಿ ಐದನ್ನು ಗೆಲ್ಲುವ ಮೂಲಕ ಭಾರತ ತನ್ನ ಸಂಪೂರ್ಣ ಪ್ರಾಬಲ್ಯವನ್ನು ಮೆರೆದಿದೆ.
ಪಶ್ಚಿಮ ಬಂಗಾಳದ ಅಭಯ್ ಬರ್ಮನ್ (ಸೀನಿಯರ್ ಪುರುಷ) ಮತ್ತು ರಿತು ಮೊಂಡಲ್ (ಸೀನಿಯರ್ ಮಹಿಳಾ) ಸಾಂಪ್ರದಾಯಿಕ ಯೋಗಾಸನ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಭವ್ಯ ಆರಂಭವನ್ನು ಒದಗಿಸಿದರು. ಅಭಯ್ ಬರ್ಮನ್ 63.42 ಅಂಕಗಳೊಂದಿಗೆ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರೆ, ಇಂಡೋನೇಷ್ಯಾದ ಅರ್ಕಾನ್ ರಿಯಾಂಟೊ (57.23) ಬೆಳ್ಳಿ ಮತ್ತು ಉಜ್ಬೇಕಿಸ್ತಾನದ ಅಲಾನ್ (53.21) ಕಂಚಿನ ಪದಕ ಪಡೆದರು. ನಂತರ ರಿತು ಮೊಂಡಲ್ 64.33 ಅಂಕಗಳೊಂದಿಗೆ ಸೀನಿಯರ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು; ಕಜಕಿಸ್ತಾನದ ಐಝನ್ ಕುವಾನಿಶ್ಬಯೆವಾ (58.97) ಬೆಳ್ಳಿ ಮತ್ತು ಹಾಂಗ್‌ಕಾಂಗ್‌ನ ಲ್ಯಾಮ್ ನಗಾ ಮ್ಯಾನ್ (56.98) ಕಂಚಿನ ಪದಕ ಗೆದ್ದುಕೊಂಡರು.
ಸೀನಿಯರ್ 'ಎ' ಪುರುಷರ ವಿಭಾಗದಲ್ಲಿ ಸಿಂಗಾಪುರದ ನಥಾನಿಯಲ್ ಟಾನ್ ಲಿಯೊಂಗ್ ಆನ್ 55.37 ಅಂಕಗಳೊಂದಿಗೆ ಚಿನ್ನ ಗೆದ್ದು, ಭಾರತದ ಸಂಪೂರ್ಣ ಪ್ರಾಬಲ್ಯಕ್ಕೆ ತಡೆಯೊಡ್ಡಿದರು. ತಾಂಜಾನಿಯಾದ ಕರೀಮು ಸ್ವಾಫಿ (54.99) ಬೆಳ್ಳಿ ಮತ್ತು ಭಾರತದ ಸುಮಿರ್ ಗ್ನವಾಲಿ (54.00) ಕಂಚಿನ ಪದಕ ಪಡೆದರು. ಇದಾದ ಬಳಿಕ, ಸೀನಿಯರ್ 'ಎ' ಮಹಿಳಾ ವಿಭಾಗದಲ್ಲಿ ರಿತು ಠಾಕೂರ್ (63.50) ಚಿನ್ನ, ಅರ್ಜೆಂಟೀನಾದ ನಬೀಲಾ ಸೋಲ್ ಬರಾಜಾ (62.04) ಬೆಳ್ಳಿ ಮತ್ತು ಕೀನ್ಯಾದ ಅವೂರ್ ಸೌಲಿನ್ಹಾ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸೀನಿಯರ್ 'ಬಿ' ಪುರುಷರ ವಿಭಾಗದಲ್ಲಿ ರೋಷನ್ ಥಾಪಾ (65.67) ಚಿನ್ನದ ಪದಕ ಗೆದ್ದರೆ, ಬಾಂಗ್ಲಾದೇಶದ ಮೊಹಮ್ಮದ್ ಮಾಮುನ್ ಖಾನ್ ಬಾಬು (58.57) ಬೆಳ್ಳಿ ಮತ್ತು ಕಿರ್ಗಿಸ್ತಾನದ ಡ್ಯಾನಿಲ್ ರೈಕೋವ್ (53.55) ಕಂಚಿನ ಪದಕ ಪಡೆದರು. ಅಂತಿಮವಾಗಿ, ಜ್ಯೋತಿ ದೇರ್ಕರ್ ಅವರು ಟ್ವಿಸ್ಟಿಂಗ್ ಬಾಡಿ ಇಂಡಿವಿಜುವಲ್ ಸೀನಿಯರ್ 'ಬಿ' ಮಹಿಳಾ ವಿಭಾಗದಲ್ಲಿ 46.14 ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು.
ಈ ಉದ್ಘಾಟನಾ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್, ಭಾರತದ ಪ್ರಾಚೀನ ಅಭ್ಯಾಸವನ್ನು ಜಾಗತಿಕ ಸ್ಪರ್ಧಾತ್ಮಕ ಕ್ರೀಡೆಯಾಗಿ ಪರಿವರ್ತಿಸುವಲ್ಲಿ ಮತ್ತು ಒಲಿಂಪಿಕ್ ಮನ್ನಣೆಯತ್ತ ಸಾಗುವಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಆಯುಷ್ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ (SAI), ಗುಜರಾತ್ ಕ್ರೀಡಾ ಪ್ರಾಧಿಕಾರ, ಗುಜರಾತ್ ಪ್ರವಾಸೋದ್ಯಮ ಮತ್ತು ಗುಜರಾತ್ ಯೋಗಾಸನ ಕ್ರೀಡಾ ಸಂಘದ ಸಹಯೋಗದೊಂದಿಗೆ ಈ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಭಾರತವು ಒಟ್ಟು 122 ಸದಸ್ಯರ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದ್ದು, ಆರು ವಯೋಮಿತಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ.