FIFA WorldCup: 12 ವರ್ಷಗಳ ಬಳಿಕ ನಾಕೌಟ್ಗೇರಿದ ಜರ್ಮನಿ
ಟೊರಾಂಟೊ: ಡೆನಿಜ್ ಉಂಡಾವ್ (68, 90+4ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ಬಲದಿಂದ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ ಐವರಿ ಕೋಸ್ಟ್ ವಿರುದ್ಧ 2-1 ಅಂತರದಿಂದ ಗೆಲುವು ದಾಖಲಿಸಿದೆ. ಭಾರತೀಯ ಕಾಲಮಾನ ಪ್ರಕಾರ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಸತತ 2ನೇ ಜಯ ಒಲಿಸಿಕೊಳ್ಳುವ ಮೂಲಕ ಜರ್ಮನಿ 3ನೇ ತಂಡವಾಗಿ ನಾಕೌಟ್ ಪ್ರವೇಶವನ್ನು ಖಾತ್ರಿಪಡಿಸಿಕೊಂಡಿದೆ. ಜರ್ಮನಿ ಕಳೆದ 2 ಆವೃತ್ತಿಗಳಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು ಮತ್ತು 2014ರಲ್ಲಿ ಕೊನೆಯದಾಗಿ ನಾಕೌಟ್ಗೇರಿತ್ತು.
ಪಂದ್ಯದ 30ನೇ ನಿಮಿಷದಲ್ಲಿ ನಾಯಕ ಫ್ರಾಂಕ್ ಕೆಸ್ಸಿ ಗೋಲು ಸಿಡಿಸುವ ಮೂಲಕ ಐವರಿ ಕೋಸ್ಟ್ಗೆ ಆರಂಭಿಕ ಮುನ್ನಡೆ ಒದಗಿಸಿದ್ದರು ಮತ್ತು ಜರ್ಮನಿ 0-1 ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ಮೊದಲಾರ್ಧದಲ್ಲಿ ಜರ್ಮನಿ ಬಾರಿಸಿದ 2 ಗೋಲುಗಳು ಆಫ್ಸೈಡ್ ಆದವು.
ದ್ವೀತಿಯಾರ್ಧದಲ್ಲಿ 29 ವರ್ಷದ ಉಂಡಾವ್, ನದೀಮ್ ಅಮಿರಿ ನೀಡಿದ ಲಾಂಗ್ ಪಾಸ್ನಲ್ಲಿ ಗೋಲಿಯನ್ನು ವಂಚಿಸಿ ಗೋಲು ದಾಖಲಿಸಿದರು. ಉಂಡಾವ್ ಮತ್ತು ಅಮಿರಿ ಅದಕ್ಕೆ 8 ನಿಮಿಷ ಮೊದಲಷ್ಟೇ ಬದಲಿಗರಾಗಿ ಮೈದಾನಕ್ಕಿಳಿದಿದ್ದರು. ಪಂದ್ಯ ಡ್ರಾದತ್ತ ಸಾಗುತ್ತಿದ್ದಾಗ ಇಂಜುರಿ ಸಮಯದ 4ನೇ ನಿಮಿಷದಲ್ಲಿ ಉಂಡಾವ್, :ಫೆಲಿಕ್ಸ್ ಎನ್ಮೆಚಾ ನೀಡಿದ ಪಾಸ್ನಲ್ಲಿ ಗೆಲುವಿನ ಗೋಲು ಬಾರಿಸಿದರು. ಆಗಲೂ ಐವರಿ ಕೋಸ್ಟ್ ಗೋಲು ಕೀಪರ್ ಯಾಹಿಯಾ ಫೋನಾ ಅಸಹಾಯಕರಾಗಿದ್ದರು.
*ಡೆನಿಜ್ ಉಂಡಾವ್ (68, 90+4ನೇ ನಿಮಿಷ)
2: ಡೆನಿಜ್ ಉಂಡಾವ್ ಸಿಡಿಸಿದ 2ನೇ ಗೋಲು ಜರ್ಮನಿಗೆ ವಿಶ್ವಕಪ್ನಲ್ಲಿ 2ನೇ ಅತಿ ತಡವಾದ ಗೆಲುವಿನ ಗೋಲಾಗಿದೆ. 2018ರಲ್ಲಿ ಸ್ವೀಡನ್ ಎದುರು ಟೋನಿ ಕ್ರೂಸ್ 90+5ನೇ ನಿಮಿಷದಲ್ಲಿ ಗೋಲು ಸಿಡಿಸಿದ್ದು ಅತಿ ವಿಳಂಬವಾಗಿದೆ.
20: ಜರ್ಮನಿ ಫಿಫಾ ವಿಶ್ವಕಪ್ನಲ್ಲಿ 20 ವರ್ಷಗಳ ಬಳಿಕ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು.
*21: 40 ವರ್ಷದ ಮ್ಯಾನ್ಯುಯೆಲ್ ನ್ಯೂಯೆರ್ ವಿಶ್ವಕಪ್ನಲ್ಲಿ ಗರಿಷ್ಠ ಪಂದ್ಯ (21) ಆಡಿದ ಗೋಲು ಕೀಪರ್ ಎನಿಸಿದರು. ಅವರು ಫ್ರಾನ್ಸ್ನ ಹ್ಯುಗೋ ಲಾರಿಸ್ (20) ದಾಖಲೆ ಮುರಿದರು.