ಗುರುಗ್ರಾಮ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು 2023 ODI ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಸೋತ ನಂತರದ ಭಾವನಾತ್ಮಕ ಕ್ಷಣಗಳ ಬಗ್ಗೆ ಇದೀಗ ಬಹಿರಂಗ ಪಡಿಸಿದ್ದಾರೆ.
ಮಾಸ್ಟರ್ಸ್ ಯೂನಿಯನ್ ಕನ್ವೊಕೇಷನ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "2023 ವಿಶ್ವಕಪ್ ಫೈನಲ್ ನಂತರ ನಾನು ಸಂಪೂರ್ಣವಾಗಿ ನಿರಾಶೆಗೀಡಾಗಿದ್ದೆ. ಕ್ರಿಕೆಟ್ ನನ್ನಿಂದ ಎಲ್ಲವನ್ನೂ ತೆಗೆದುಕೊಂಡಂತೆ ಭಾಸವಾಯ್ತು, ನನ್ನಲ್ಲಿ ಏನೂ ಉಳಿದಿಲ್ಲ ಎಂದುಕೊಂಡೆ. ಒಂದು ಹಂತದಲ್ಲಿ ನಾನು ಇನ್ನು ಮುಂದೆ ಈ ಕ್ರಿಕೆಟ್ ಆಡಲು ಬಯಸಲಿಲ್ಲ ಎಂದು ಭಾವಿಸಿದ್ದೆ" ಆ ಸೋಲು ತಮ್ಮನ್ನು ಇಷ್ಟೊಂದು ಭಾವುಕಗೊಳಿಸಿತ್ತು ಎಂದು ರೋಹಿತ್ ಹೇಳಿದರು.
"ನಾನು ಕ್ಯಾಪ್ಟನ್ ಆಗಿ 2022ರಿಂದಲೇ ವಿಶ್ವಕಪ್ ಗೆಲ್ಲುವುದು ಏಕೈಕ ಗುರಿಯಾಗಿತ್ತು. ಅದು ಸಾಧ್ಯವಾಗದಿದ್ದಾಗ ದೇಹದಲ್ಲಿ ಶಕ್ತಿಯೇ ಇಲ್ಲದಂತಾಯಿತು. ಚೇತರಿಸಿಕೊಳ್ಳಲು ಕೆಲವು ತಿಂಗಳುಗಳು ಬೇಕಾಯಿತು" ಎಂದರು.
ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ 240 ರನ್‌ಗಳಿಸಿದ್ದರೆ, ಟ್ರಾವಿಸ್ ಹೆಡ್ ಅವರ ಶತಕದ ಬಲದಿಂದ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಕಪ್ಪು ದಿನವೆಂಬಂತಿದ್ದ ಆ ಪಂದ್ಯದ ನಂತರ ರೋಹಿತ್‌ಗೆ ವೈಯಕ್ತಿಕವಾಗಿ ತೀವ್ರ ನಿರಾಶೆ ಉಂಟಾಗಿತ್ತು ಎಂದು ರೋಹಿತ್ ಬಹಿರಂಗವಾಗಿ ಮಾತನಾಡಿದ್ದಾರೆ.
ಇನ್ನು ವಿಶ್ವಕಪ್ ಸೋಲಿನ ನಿರಾಶೆಯಿಂದ ಹೊರಬಂದ ರೋಹಿತ್ ಅದ್ಭುತ ಕಮ್‌ಬ್ಯಾಕ್ ಮಾಡಿದರು. 2024 T20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿ T20I ನಿವೃತ್ತಿ ಘೋಷಿಸಿದರು. 2025 ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡವನ್ನು ಗೆಲ್ಲಿಸಿದರು. ಪ್ರಸ್ತುತ ODI ಫಾರ್ಮ್ಯಾಟ್‌ನಲ್ಲಿ ಮಾತ್ರ ಆಡುತ್ತಿರುವ ಅವರು, 2027 ODI ವಿಶ್ವಕಪ್ ಆಡುವ ಗುರಿ ಹೊಂದಿದ್ದಾರೆ,(ಏಜೆನ್ಸೀಸ್).