ಈ ಸಲ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಒಂದಲ್ಲ, ಮೂರು ವಿರಾಮ! 4 ಕ್ವಾರ್ಟರ್ಗಳಲ್ಲಿ ಕಾದಾಟ!
ಬೆಂಗಳೂರು: ಫುಟ್ಬಾಲ್ ಪಂದ್ಯಗಳು ಸಾಮಾನ್ಯವಾಗಿ ಎರಡು ಭಾಗಗಳಲ್ಲಿ ನಡೆಯುತ್ತವೆ ಮತ್ತು 90 ನಿಮಿಷಗಳ ಪಂದ್ಯದಲ್ಲಿ ಮೊದಲ 45 ನಿಮಿಷಗಳ ಬಳಿಕ ಸಣ್ಣ ವಿರಾಮವೊಂದಿರುತ್ತದೆ. ಆದರೆ ಈ ಬಾರಿ ಫುಟ್ಬಾಲ್ ವಿಶ್ವಕಪ್ (FIFA World Cup) ನಲ್ಲಿ ಒಂದಲ್ಲ, ಮೂರು ವಿರಾಮಗಳನ್ನು ನೀಡಲಾಗುತ್ತದೆ. ಇದರಿಂದ ಪಂದ್ಯಗಳು ನಾಲ್ಕು ಕ್ವಾರ್ಟರ್ಗಳಲ್ಲಿ ವಿಭಜನೆಯಾಗಲಿವೆ. ಆಟಗಾರರಿಗೆ ದಣಿವು ತಣಿಸಲು ಎರಡು ಪಾನೀಯ ವಿರಾಮವನ್ನು ನೀಡಲಾಗುತ್ತದೆ ಎಂದು ಫಿಫಾ ಹೇಳುತ್ತಿದ್ದರೂ, ಈ ವಿರಾಮದ ಸಮಯದಲ್ಲಿ ಟಿವಿಯಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಹಣ ಸಂಪಾದನೆಯ ಉದ್ದೇಶವೂ ಇದರ ಹಿಂದಿದೆ ಎಂದರೆ ತಪ್ಪಿಲ್ಲ.
ಎರಡು ಹೈಡ್ರೇಷನ್ ಬ್ರೇಕ್: ಫಿಫಾ ವಿಶ್ವಕಪ್ನಲ್ಲಿ ಮೊದಲ 45 ನಿಮಿಷಗಳ ಆಟದ ಬಳಿಕ 15 ನಿಮಿಷಗಳ ವಿರಾಮ ಇದ್ದೇ ಇರಲಿದೆ. ಜತೆಗೆ ಈ ಬಾರಿ 45 ನಿಮಿಷಗಳ ಎರಡು ಭಾಗದ ನಡುವೆಯೂ ವಿರಾಮ ನೀಡಲಾಗುತ್ತದೆ. ಮೊದಲಾರ್ಧದಲ್ಲಿ 22 ನಿಮಿಷಗಳ ಬಳಿಕ ಮತ್ತು ದ್ವೀತಿಯಾರ್ಧದಲ್ಲಿ 67 ನಿಮಿಷಗಳ ಬಳಿಕ ತಲಾ 3 ನಿಮಿಷಗಳ ಪಾನೀಯ ವಿರಾಮ ನೀಡಲಾಗುತ್ತದೆ. ಇದನ್ನು ಫಿಫಾ "ಹೈಡ್ರೇಷನ್ ಬ್ರೇಕ್' ಎನ್ನುತ್ತಿದೆ. ವಾತಾವರಣ ತಂಪಾಗಿದ್ದರೂ, ಪ್ರತಿ ಪಂದ್ಯದ ನಡುವೆ ಈ ವಿರಾಮ ಇದ್ದೇ ಇರಲಿದೆ. ಇದರಿಂದ ಫುಟ್ಬಾಲ್ ಕೂಡ ಹಾಕಿಯಂತೆ 4 ಕ್ವಾರ್ಟರ್ಗಳ ಪಂದ್ಯವಾಗಿರಲಿದೆ. ಈ ಹೈಡ್ರೇಷನ್ ಬ್ರೇಕ್ ವೇಳೆಯೂ ಕೋಚ್ಗಳು ಆಟಗಾರರಿಗೆ ಮಾರ್ಗದರ್ಶನ ನೀಡುವ ಅವಕಾಶವಿರಲಿದೆ. ಹೀಗಾಗಿ ಇದು ಕಾರ್ಯತಂತ್ರ ಬದಲಾವಣೆ, ಪರಿಶೀಲನೆ ದೃಷ್ಟಿಯಿಂದಲೂ ಅನುಕೂಲಕರ.
ಹೈಡ್ರೇಷನ್ ಬ್ರೇಕ್ನಿಂದಾಗಿ ಈ ಬಾರಿ ಟೂರ್ನಿಯ 104 ಪಂದ್ಯಗಳ ವೇಳೆ 624 ನಿಮಿಷ ಹೆಚ್ಚುವರಿ ಆಗಲಿದೆ. ಇದರಿಂದ ಪ್ರಸಾರ ವಾಹಿನಿಗೆ ಪಂದ್ಯ ನಡುವೆ ಜಾಹೀರಾತು ಪ್ರಕಟಿಸಲು 10 ಗಂಟೆಗೂ ಅಧಿಕ ಸಮಯ ಲಭಿಸಲಿದೆ. ಅಂದರೆ ಈ ಸಮಯದಲ್ಲಿ 90 ನಿಮಿಷಗಳ 7 ಫುಟ್ಬಾಲ್ ಪಂದ್ಯಗಳನ್ನು ಆಡಬಹುದು!
ಟಿವಿ ಆದಾಯ ಸ್ನೇಹಿ ಫುಟ್ಬಾಲ್
ಅಮೆರಿಕದ ಎನ್ಬಿಎ, ಎನ್ಎಫ್ಎಲ್ಗಳಲ್ಲಿ 4 ಕ್ವಾರ್ಟರ್ಗಳ ನಡುವೆ ಟಿವಿ ಜಾಹೀರಾತುಗಳಿಂದ ಹೇರಳ ಆದಾಯ ಬರುತ್ತದೆ. ಇದೇ ರೀತಿ ಕ್ರಿಕೆಟ್ನಲ್ಲೂ ಪ್ರತಿ ಓವರ್ ನಡುವೆ ಟಿವಿ ಜಾಹೀರಾತು ಪ್ರಸಾರ ಮಾಡುವ ಅನುಕೂಲವಿದೆ. ಇದೇ ರೀತಿ ಈಗ ಹೆಚ್ಚಿನ ವಿರಾಮದ ಮೂಲಕ ಫುಟ್ಬಾಲ್ ಪಂದ್ಯವನ್ನೂ ಟಿವಿ ಆದಾಯ ಸ್ನೇಹಿಯಾಗಿ ಮಾಡಲು ಫಿಫಾ ಪ್ರಯತ್ನಿಸುತ್ತಿದೆ.
ಫೈನಲ್ನಲ್ಲಿ ಅರ್ಧಗಂಟೆ ಬ್ರೇಕ್!
ಫಿಫಾ ವಿಶ್ವಕಪ್ನಲ್ಲಿ ಜುಲೈ 19ರಂದು ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದ ನಡುವೆ 15 ನಿಮಿಷಕ್ಕೆ ಬದಲಾಗಿ ಅರ್ಧ ಗಂಟೆಯ ವಿರಾಮ ಇರಲಿದೆ. ಈ ಸಮಯದಲ್ಲಿ ಸಮಾರೋಪದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಪ್ ತಾರೆಯರಾದ ಮಡೋನ್ನಾ, ಶಕೀರಾ, ಬಿಟಿಎಸ್ ಸಂಗೀತ ಸುಧೆ ಹರಿಸಲಿದ್ದಾರೆ. ಇದು ಪಂದ್ಯಕ್ಕೆ ಅಡಚಣೆ ತರುತ್ತದೆ, ಆಟಗಾರರ ಲಯ ತಪ್ಪುತ್ತದೆ ಮತ್ತು ಏಕಾಗ್ರತೆಗೆ ಭಂಗವಾಗುತ್ತದೆ ಎಂಬ ಟೀಕೆಗಳು ಎದುರಾಗಿದ್ದರೂ, ಫಿಫಾ ಇದಕ್ಕೆ ಸೊಪ್ಪು ಹಾಕಿಲ್ಲ.