ಈ ಬಾರಿ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಬಳಸುವ ಮುನ್ನ ಚಾರ್ಜ್ ಮಾಡಬೇಕಿದೆ ಫುಟ್ಬಾಲ್ ಚೆಂಡು!
ಬೆಂಗಳೂರು: ಫುಟ್ಬಾಲ್ ಆಡುವಾಗ ಸಾಮಾನ್ಯವಾಗಿ ಚೆಂಡಿಗೆ ಅನಿಲ ಸರಿಯಾಗಿ ತುಂಬಿದೆಯೇ ಎಂದು ಚೆಕ್ ಮಾಡಲಾಗುತ್ತದೆ. ಆದರೆ ಈ ಬಾರಿ ಫಿಫಾ ವಿಶ್ವಕಪ್ನಲ್ಲಿ ಪಂದ್ಯಗಳನ್ನು ಆಡುವಾಗ ಚೆಂಡಿಗೆ ಚಾರ್ಜ್ ಮಾಡಲಾಗಿದೆಯೇ ಎಂದೂ ಪರಿಶೀಲಿಸಬೇಕಾಗುತ್ತದೆ! ಹೌದು, ಈ ಬಾರಿ ಫಿಫಾ ವಿಶ್ವಕಪ್ನಲ್ಲಿ (FIFA World Cup) ಬಳಸುವ ಫುಟ್ಬಾಲ್ ಅನ್ನು, ಮೊಬೈಲ್, ಬ್ಲೂಟೂತ್ ಡಿವೈಸ್ಗಳಂತೆ ಚಾರ್ಜ್ ಮಾಡುವುದು ಅಗತ್ಯವಾಗಿದೆ. ಇದರಲ್ಲಿರುವ ಎಐ, ಟ್ರ್ಯಾಕಿಂಗ್ ತಂತ್ರಜ್ಞಾನ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದು ನಿರ್ಣಾಯಕ ತೀರ್ಪುಗಳ ವೇಳೆ ರೆಫ್ರಿ ಮತ್ತು ವಿಎಆರ್ ಸಿಸ್ಟಮ್ಗೂ ನೆರವಾಗಲಿದೆ.
ಫಿಫಾ ವಿಶ್ವಕಪ್ನಲ್ಲಿ 1970ರಿಂದಲೂ ಕ್ರೀಡಾ ಉಡುಪುಗಳ ದೈತ್ಯ ಕಂಪನಿ "ಅಡಿಡಾಸ್' ಸಿದ್ಧಪಡಿಸುವ ಚೆಂಡುಗಳನ್ನೇ ಬಳಸಲಾಗುತ್ತದೆ. ಈ ಬಾರಿ ಬಳಲಾಗುವ ಚೆಂಡು ಬರೀ ಫುಟ್ಬಾಲ್ ಅಲ್ಲ. ಅದು ಆಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಚೆಂಡಾಗಿದೆ. ಇದರಿಂದ ಚೆಂಡನ್ನು ಆಟಗಾರ ಸ್ಪರ್ಶಿಸಿರುವನೇ, ಇಲ್ಲವೇ ಎಂಬುದು ಸ್ಪಷ್ಟವಾಗುತ್ತದೆ. ಆಫ್ಸೈಡ್-ಹ್ಯಾಂಡ್ಬಾಲ್ನಂಥ ನಿರ್ಧಾರದ ವೇಳೆ ವಿಎಆರ್ ಸಿಸ್ಟಮ್ಗೆ ನಿಖರ ತೀರ್ಪು ನೀಡಲು ನೆರವಾಗಲಿದೆ.
ಟೂರ್ನಿಯಲ್ಲಿ ಪ್ರತಿ ಆಟಗಾರನನ್ನೂ ಡಿಜಿಟಲ್ ಸ್ಕ್ಯಾನ್ ಮೂಲಕ ಕೃತಕ ಬುದ್ದಿಮತ್ತೆ (ಎಐ) ಸಕ್ರಿಯಗೊಳಿಸಿದ 3ಡಿ ಅವತಾರವನ್ನು ರಚಿಸಲಾಗುತ್ತದೆ. ಇದು ನಿಕಟ ನಿರ್ಧಾರಗಳ ಸ್ಪಷ್ಟ ದೃಶ್ಯೀಕರಣವನ್ನು ಒದಗಿಸುತ್ತದೆ ಮತ್ತು ಇದನ್ನು ಅಭಿಮಾನಿಗಳು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಫಿಫಾ ತಿಳಿಸಿದೆ.
ಬರೀ ಬಾಲಲ್ಲ, ಸ್ಮಾರ್ಟ್ಬಾಲ್
ಈ ಸಲದ ಫುಟ್ಬಾಲ್, ಸ್ಮಾರ್ಟ್ಬಾಲ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದರ ಹೃದಯ ಭಾಗದಲ್ಲಿ 14 ಗ್ರಾಮ್ನ ಮೋಷನ್ ಸೆನ್ಸರ್ ಚಿಪ್ ಮತ್ತು ಬ್ಯಾಟರಿ ಕೂಡ ಇದೆ. ಇದು ಚೆಂಡಿನ ಚಲನೆ, ವೇಗ, ತಿರುವು ಮತ್ತು ಸ್ಥಾನವನ್ನು ಟ್ರ್ಯಾಕ್ ಮಾಡುತ್ತಿರುತ್ತದೆ. ಪ್ರತಿ ಸೆಕೆಂಡ್ಗೆ 500 ಬಾರಿ ಡೇಟಾವನ್ನು ವಿಎಆರ್ ಸಿಸ್ಟಮ್ಗೆ ರವಾನಿಸುತ್ತಿರುತ್ತದೆ. ಚೆಂಡನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 6 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದಾಗಿರುತ್ತದೆ. ಇದರಿಂದ ಪೂರ್ಣ ಪಂದ್ಯ, ಹೆಚ್ಚುವರಿ ಅವಧಿ ಮತ್ತು ಪೆನಾಲ್ಟಿ ಶೂಟೌಟ್ನಲ್ಲೂ ಒಂದೇ ಚೆಂಡು ಬಳಸಬಹುದಾಗಿರುತ್ತದೆ. ಚೆಂಡು ಒಮ್ಮೆಗೆ ಪೂರ್ಣ ಚಾರ್ಜ್ ಆಗಲು 90 ನಿಮಿಷ ಬೇಕಾಗುತ್ತದೆ.
ಪ್ರತಿ ಆವೃತ್ತಿಯ ಫಿಫಾ ವಿಶ್ವಕಪ್ನಲ್ಲಿ ಬಳಸಲಾಗುವ ಚೆಂಡಿಗೂ ಭಿನ್ನವಾದ ಹೆಸರು ಇಡಲಾಗುತ್ತದೆ. ಈ ಬಾರಿಯ ಚೆಂಡಿಗೆ "ಟ್ರಿಯೋಂಡಾ' ಎಂದು ನಾಮಕರಣ ಮಾಡಲಾಗಿದೆ. ಸ್ಪ್ಯಾನಿಷ್ನಲ್ಲಿ "ಮೂರು ಅಲೆಗಳು' ಎಂಬುದು ಇದರ ಅರ್ಥವಾಗಿದೆ. 3 ಆತಿಥೇಯ ರಾಷ್ಟ್ರಗಳಾದ ಅಮೆರಿಕ, ಮೆಕ್ಸಿಕೋ, ಕೆನಡಾದ ಪ್ರತಿನಿಧಿಯಾಗಿ ನೀಲಿ, ಹಸಿರು, ಕೆಂಪು ಬಣ್ಣದಲ್ಲಿ ಚೆಂಡನ್ನು ವಿನ್ಯಾಸಗೊಳಿಸಿರುವುದರಿಂದ ಈ ಹೆಸರು ಇಡಲಾಗಿದೆ.