ಈ ಬಾರಿ ಫಿಫಾ ವಿಶ್ವಕಪ್ ವಿಸ್ತಾರ; ತಂಡಗಳ ಸಂಖ್ಯೆ 48ಕ್ಕೆ ಏರಿಕೆ!
ಬೆಂಗಳೂರು: ಐಪಿಎಲ್ ಹಬ್ಬದ ಬಳಿಕ ಕ್ರೀಡಾಪ್ರೇಮಿಗಳ ಗಮನ ನಿಧಾನವಾಗಿ ಫುಟ್ಬಾಲ್ ಮಹಾಸಮರದತ್ತ ತಿರುಗುತ್ತಿದೆ. ಜೂನ್ 11ರಿಂದ ಜುಲೈ 19ರವರೆಗೆ ನಡೆಯಲಿರುವ 23ನೇ ಆವೃತ್ತಿಯ ಫಿಫಾ ವಿಶ್ವಕಪ್ಗೆ (FIFA World Cup) ಕ್ಷಣಗಣನೆ ಆರಂಭಗೊಂಡಿದ್ದು, 39 ದಿನಗಳ ಟೂರ್ನಿಗೆ ಆತಿಥ್ಯ ವಹಿಸಲು ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಸರ್ವಸನ್ನದ್ಧಗೊಂಡಿವೆ. ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡಗಳ ಸಂಖ್ಯೆ 32ರಿಂದ 48ಕ್ಕೆ ವಿಸ್ತರಣೆಗೊಂಡಿರುವುದರಿಂದ ಕುತೂಹಲವೂ ಹೆಚ್ಚಿದೆ. 48 ತಂಡಗಳ ಭಾಗವಹಿಸುವಿಕೆಯಿಂದ ಇದು ನಿಜ ಅರ್ಥದಲ್ಲೂ "ವಿಶ್ವಸಮರ' ಎನಿಸಿದೆ. 3 ಆತಿಥೇಯ ದೇಶಗಳೊಂದಿಗೆ ಉತ್ತರ ಅಮೆರಿಕ ಖಂಡದಿಂದ ಒಟ್ಟು 6,
ಏಷ್ಯಾದಿಂದ 9, ಆಫ್ರಿಕಾದಿಂದ 10, ದ. ಅಮೆರಿಕದಿಂದ 7, ಯುರೋಪ್ನಿಂದ 16, ಓಶಿಯಾನಿಯಾದಿಂದ ಒಂದು ತಂಡ ಟೂರ್ನಿಯಲ್ಲಿ ಭಾಗವಹಿಸಲಿವೆ. ತಂಡಗಳ ಸಂಖ್ಯೆ ಏರಿಕೆಯಿಂದ ಟೂರ್ನಿಯಲ್ಲಿ ಆಫ್ರಿಕಾ ಮತ್ತು ಏಷ್ಯಾದ ತಂಡಗಳ ಸ್ಪರ್ಧೆಯೂ ಹೆಚ್ಚಾಗಿದೆ.
ಹೆಚ್ಚಿನ ತಂಡಗಳ ಭಾಗವಹಿಸುವಿಕೆಯಿಂದ ಈ ಬಾರಿ ಸ್ಪರ್ಧಾತ್ಮಕತೆ ಹೆಚ್ಚಲಿದೆ. ಜತೆಗೆ ಹೆಚ್ಚಿನ ದೇಶಗಳ ಸ್ಟಾರ್ ಆಟಗಾರರಿಗೂ ಟೂರ್ನಿಯಲ್ಲಿ ಆಡುವ ಅವಕಾಶ ಲಭಿಸಲಿದೆ. ತಂಡಗಳ ಸಂಖ್ಯೆ ಏರಿಕೆಯಿಂದ ಈ ಬಾರಿ ಪಂದ್ಯಗಳ ಸಂಖ್ಯೆಯೂ 40ರಷ್ಟು ಏರಿಕೆಯಾಗಿದೆ. ಅಂದರೆ 64ರಿಂದ 104ಕ್ಕೆ ಪಂದ್ಯಗಳ ಸಂಖ್ಯೆ ಹೆಚ್ಚಳವಾಗಲಿದೆ. ಹೀಗಾಗಿ ಇದು ಪಂದ್ಯಗಳ ಲೆಕ್ಕದಲ್ಲೂ ಅತಿದೊಡ್ಡ ವಿಶ್ವಕಪ್ ಎನಿಸಿದೆ. ಟೂರ್ನಿಯ ನಾಕೌಟ್ ಹಂತದಲ್ಲೂ 32 ತಂಡಗಳು ಕಣಕ್ಕಿಳಿಯಲಿವೆ. ಈ ಬಾರಿ ಪ್ರತಿ ಗುಂಪಿನ ಅಗ್ರ 2 ತಂಡಗಳ ಜತೆಗೆ, 3ನೇ ಸ್ಥಾನ ಪಡೆದ 8 ಅತ್ಯುತ್ತಮ ತಂಡಗಳೂ ನಾಕೌಟ್ ಹಂತಕ್ಕೇರಲಿವೆ.
*ಫಿಫಾ ವಿಶ್ವಕಪ್ನಲ್ಲಿ 48 ತಂಡಗಳನ್ನು ಆಡಿಸುವುದು ಸರಿಯಾದ ಹೆಜ್ಜೆ. 211 ದೇಶಗಳ ಫಿಫಾ ಸದಸ್ಯತ್ವ ಹೊಂದಿವೆ. ಈ ಪೈಕಿ ಶೇ. 25ರಷ್ಟು ತಂಡಗಳು ಮಾತ್ರ ವಿಶ್ವಕಪ್ನಲ್ಲಿ ಆಡಲಿವೆ. ಅಂದರೆ ಪ್ರತಿ ನಾಲ್ಕರಲ್ಲಿ ಒಂದು ತಂಡಕ್ಕೆ ಮಾತ್ರಕ್ಕೆ ಸ್ಪರ್ಧೆ ಅವಕಾಶ ಲಭಿಸಲಿದೆ. ಶೇ. 75 ತಂಡಗಳಿಗೆ ಈಗಲೂ ವಿಶ್ವಕಪ್ ಸ್ಪರ್ಧೆ ಅವಕಾಶ ಕೈತಪ್ಪಿದೆ.
| ಆರ್ಸೆನ್ ವೆಂಗರ್, ಫಿಫಾ ಗ್ಲೋಬಲ್ ಫುಟ್ಬಾಲ್ ಡೆವಲಪ್ಮೆಂಟ್ ಮುಖ್ಯಸ್ಥ
ಮೂರು ಬಾರಿಯ ಚಾಂಪಿಯನ್ ಇಟಲಿ ತಂಡ ಸತತ 3ನೇ ಬಾರಿ ಫಿಫಾ ವಿಶ್ವಕಪ್ ತಪ್ಪಿಸಿಕೊಳ್ಳಲಿದೆ. ಈ ಬಾರಿಯೂ ಅರ್ಹತಾ ಟೂರ್ನಿಯಲ್ಲಿ ಇಟಲಿ ಮುಗ್ಗರಿಸಿತ್ತು. ಈ ಬಾರಿ ತಂಡಗಳ ಹೆಚ್ಚಿದ ನಡುವೆಯೂ ಇಟಲಿ ಅರ್ಹತೆ ತಪ್ಪಿಸಿಕೊಂಡಿರುವುದು ವಿಪರ್ಯಾಸವೆನಿಸಿದೆ. ಡೆನ್ಮಾರ್ಕ್, ವೇಲ್ಸ್, ಸೆರ್ಬಿಯಾ ಮತ್ತು ಪೋಲೆಂಡ್ ಯುರೋಪ್ ಖಂಡದಿಂದ ಈ ಬಾರಿ ಅರ್ಹತೆ ತಪ್ಪಿಸಿಕೊಂಡಿರುವ ಇತರ ಪ್ರಮುಖ ತಂಡಗಳಾಗಿವೆ. ಆಫ್ರಿಕಾ ಖಂಡದಿಂದ ಕ್ಯಾಮರೂನ್ ಮತ್ತು ನೈಜೀರಿಯಾ ಈ ಬಾರಿ ಅರ್ಹತೆ ತಪ್ಪಿಸಿಕೊಂಡಿರುವ ಪ್ರಮುಖ ತಂಡಗಳಾಗಿವೆ. ಇನ್ನು ಜನಸಂಖ್ಯೆಯ ಲೆಕ್ಕದಲ್ಲಿ ಪ್ರಪಂಚದ ಅಗ್ರ 2 ತಂಡಗಳೆನಿಸಿರುವ ಚೀನಾ, ಭಾರತ ಈ ಬಾರಿಯೂ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿಲ್ಲ.
ಎ: ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಜೆಕ್ ಗಣರಾಜ್ಯ.
ಬಿ: ಕೆನಡಾ, ಬೋಸ್ನಿಯಾ-ಹರ್ಜೆಗೋವಿನಾ, ಕತಾರ್, ಸ್ವಿರ್ಜಲೆಂಡ್.
ಸಿ: ಬ್ರೆಜಿಲ್, ಮೊರಾಕ್ಕೊ, ಹೈಟಿ, ಸ್ಕಾಟ್ಲೆಂಡ್.
ಡಿ: ಅಮೆರಿಕ, ಪರಾಗ್ವೆ, ಆಸ್ಟ್ರೆಲಿಯಾ, ಟರ್ಕಿ.
ಇ: ಜರ್ಮನಿ, ಕುರಾಕಾವೊ, ಐವರಿಕೋಸ್ಟ್, ಈಕ್ವೆಡಾರ್.
ಎಫ್: ನೆದರ್ಲೆಂಡ್, ಜಪಾನ್, ಸ್ವೀಡನ್, ಟುನೀಷಿಯಾ.
ಜಿ: ಬೆಲ್ಜಿಯಂ, ಈಜಿಪ್ಟ್, ಇರಾನ್, ನ್ಯೂಜಿಲೆಂಡ್.
ಎಚ್: ಸ್ಪೇನ್, ಕೇಪ್ ವರ್ಡೆ, ಸೌದಿ ಅರೇಬಿಯಾ, ಉರುಗ್ವೆ.
ಐ: ಫ್ರಾನ್ಸ್, ಸೆನೆಗಲ್, ಇರಾಕ್, ನಾರ್ವೆ.
ಜೆ: ಅರ್ಜೆಂಟೀನಾ, ಅಲ್ಜೀರಿಯಾ, ಆಸ್ಟ್ರಿಯಾ, ಜೋರ್ಡಾನ್.
ಕೆ: ಪೋರ್ಚುಗಲ್, ಕಾಂಗೋ ಡಿಆರ್, ಉಜ್ಬೇಕಿಸ್ತಾನ, ಕೊಲಂಬಿಯಾ.
ಎಲ್: ಇಂಗ್ಲೆಂಡ್, ಕ್ರೋಷಿಯಾ, ಘಾನಾ, ಪನಾಮ.
ಕತಾರ್ನಲ್ಲಿ ನಡೆದ ಕಳೆದ 2022ರ ಫಿಫಾ ವಿಶ್ವಕಪ್ನಲ್ಲಿ ಆಡಿದ್ದ 32 ತಂಡಗಳ ಪೈಕಿ 26 ತಂಡಗಳು ಈ ಬಾರಿಯೂ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಕಳೆದ ಬಾರಿ ಆಡಿದ್ದ ಕೋಸ್ಟಾರಿಕಾ, ಕ್ಯಾಮರೂನ್, ಡೆನ್ಮಾರ್ಕ್, ಪೋಲೆಂಡ್, ಸೆರ್ಬಿಯಾ ಮತ್ತು ವೇಲ್ಸ್ ಈ ಬಾರಿ ಅರ್ಹತೆಯಿಂದ ವಂಚಿತವಾಗಿವೆ. 4 ದೇಶಗಳಾದ ಕೇಪ್ ವರ್ಡೆ, ಕುರಾಕಾವೊ, ಜೋರ್ಡಾನ್ ಮತ್ತು ಉಜ್ಬೇಕಿಸ್ತಾನ ಈ ಬಾರಿ ಫಿಫಾ ವಿಶ್ವಕಪ್ಗೆ ಪದಾರ್ಪಣೆ ಮಾಡಲಿವೆ. ಕಳೆದ ವರ್ಷ ಆತಿಥೇಯ ತಂಡವಾಗಿ ನೇರಅರ್ಹತೆ ಪಡೆದಿದ್ದ ಕತಾರ್, ಇದೇ ಮೊದಲ ಬಾರಿಗೆ ಅರ್ಹತಾ ಟೂರ್ನಿಯ ಮೂಲಕ ವಿಶ್ವಕಪ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ. ಕಾಂಗೋ ಡಿಆರ್ ಮತ್ತು ಹೈಟಿ ದೇಶಗಳು ಬರೋಬ್ಬರಿ 52 ವರ್ಷಗಳ ಬಳಿಕ ಅಂದರೆ 1974ರ ಬಳಿಕ ವಿಶ್ವಕಪ್ ಆಡುವ ಅವಕಾಶ ಪಡೆದಿವೆ. ಇನ್ನುಳಿದಂತೆ ಇರಾಕ್ 1986ರ ಬಳಿಕ, ಆಸ್ಟ್ರಿಯಾ, ನಾರ್ವೆ, ಸ್ಕಾಟ್ಲೆಂಡ್ 1998ರ ಬಳಿಕ, ಟರ್ಕಿ 2002ರ ಬಳಿಕ ಜೆಕ್ ಗಣರಾಜ್ಯ 2006ರ ಬಳಿಕ, ನ್ಯೂಜಿಲೆಂಡ್, ಪರಾಗ್ವೆ, ದ. ಆಫ್ರಿಕಾ 2010ರ ಬಳಿಕ, ಅಲ್ಜೀರಿಯಾ, ಬೋಸ್ನಿಯಾ-ಹರ್ಜೆಗೋವಿನಾ, ಐವರಿಕೋಸ್ಟ್ 2014ರ ಬಳಿಕ ವಿಶ್ವಕಪ್ ಅರ್ಹತೆ ಗಿಟ್ಟಿಸಿಕೊಂಡಿವೆ. 2022ರ ಟೂರ್ನಿ ತಪ್ಪಿಸಿಕೊಂಡಿದ್ದ ಕೊಲಂಬಿಯಾ, ಈಜಿಪ್ಟ್, ಪನಾಮ, ಸ್ವೀಡನ್ ಈ ಬಾರಿ ಮರಳಿವೆ.
*85: ಫಿಫಾ ರ್ಯಾಂಕಿಂಗ್ನಲ್ಲಿ 85ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಟೂರ್ನಿಯಲ್ಲಿ ಆಡಲಿರುವ ಅತ್ಯಂತ ಕೆಳ ರ್ಯಾಂಕ್ನ ತಂಡವೆನಿಸಿದೆ.
ಕೇವಲ 1.56 ಲಕ್ಷ ಜನಸಂಖ್ಯೆ ಹೊಂದಿರುವ ಕುರಾಕಾವೊ (444 ಕಿಲೋಮೀಟರ್ ವಿಸ್ತೀರ್ಣ) ಫಿಾ ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಅತಿಸಣ್ಣ ದೇಶವೆನಿಸಿದೆ. 3.50 ಲಕ್ಷ ಜನಸಂಖ್ಯೆಯ ಐಸ್ಲ್ಯಾಂಡ್ 2018ರ ವಿಶ್ವಕಪ್ನಲ್ಲಿ ಆಡಿದ್ದು ಹಿಂದಿನ ದಾಖಲೆ. ಈ ಬಾರಿ ವಿಶ್ವಕಪ್ಗೆ ಪದಾರ್ಪಣೆ ಮಾಡಲಿರುವ ಕೇಪ್ ವರ್ಡೆ (4,033 ಕಿಮೀ ವಿಸ್ತೀರ್ಣ) ಕೂಡ ಕೇವಲ 5.25 ಲಕ್ಷ ಜನಸಂಖ್ಯೆ ಹೊಂದಿದೆ.