ಫಿಫಾ ವಿಶ್ವಕಪ್: ಜಗತ್ತಿನ ಗಮನ ಸೆಳೆದ ಹಾಲೆಂಡ್ ಕೈಯಲ್ಲಿದ್ದ ವಿಸ್ಕಿ ರಾಕೂನ್! ಏನಿದರ ರಹಸ್ಯ? ಇಲ್ಲಿದೆ ರೋಚಕ ಕಥೆ! Erling Haaland
- ವಿಶ್ವಕಪ್ ಮುಗಿಸಿ ಮನೆಗೆ ವಿಸ್ಕಿ ರಾಕೂನ್ ಬೊಂಬೆ ಹೊತ್ತೊಯ್ದ ಸ್ಟಾರ್ ಫುಟ್‌ಬಾಲರ್ ಎರ್ಲಿಂಗ್ ಹಾಲೆಂಡ್
- ಅಮೆರಿಕದಿಂದ ನಾರ್ವೆಗೆ ವಿಲಕ್ಷಣ ಆಕೃತಿ ತಂದ ಎರ್ಲಿಂಗ್ ಹಾಲೆಂಡ್ ಹಿಂದಿರುವ ರೋಚಕ ಕಥೆ ಇಲ್ಲಿದೆ
- ಹಾಲೆಂಡ್ ಖರೀದಿಸಿದ ಒಂದೇ ಒಂದು ರಾಕೂನ್ ಆಕೃತಿಯಿಂದ ರಾತ್ರೋರಾತ್ರಿ ಬದಲಾಯಿತು ಆ ಅಮೆರಿಕನ್ ಅಂಗಡಿಯ ಅದೃಷ್ಟ
- ಫುಟ್‌ಬಾಲ್ ತಾರೆ ಎರ್ಲಿಂಗ್ ಹಾಲೆಂಡ್ ಖರೀದಿಸಿದ ಆ ವಿಸ್ಕಿ ರಾಕೂನ್ ಬೊಂಬೆಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ
Erling Haaland : ಫಿಫಾ ವಿಶ್ವಕಪ್ 2026ರಲ್ಲಿ ನಾರ್ವೆ ತಂಡದ ಐತಿಹಾಸಿಕ ಪಯಣ ಕ್ವಾರ್ಟರ್ ಫೈನಲ್ಸ್‌ನಲ್ಲಿ ಕೊನೆಗೊಂಡಿರಬಹುದು, ಆದರೆ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಮಾತ್ರ ಅಮೆರಿಕದಿಂದ ತಾಯ್ನಾಡಿಗೆ ಮರಳುವಾಗ ತನ್ನ ಜೊತೆಗೆ ತಂದ ವಿಲಕ್ಷಣ ವಸ್ತುವೊಂದರಿಂದ ಇಡೀ ವಿಶ್ವದ ಗಮನ ಸೆಳೆದಿದ್ದಾರೆ!
ಹೌದು, ಸೋಮವಾರ ನಾರ್ವೆ ತಂಡದ ವಿಮಾನ ಓಸ್ಲೋದ ಗಾರ್ಡರ್ಮೊಯೆನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಹಾಲೆಂಡ್ ಅವರ ಕೈಯಲ್ಲಿದ್ದ ವಸ್ತುವನ್ನು ಕಂಡು ಅಭಿಮಾನಿಗಳು ಒಂದು ಕ್ಷಣ ತಬ್ಬಿಬ್ಬಾದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಇಡುತ್ತಿದ್ದಂತೆ ಹಾಲೆಂಡ್, ಬರೋಬ್ಬರಿ 750 ಯುಎಸ್ ಡಾಲರ್ (USD) ಮೌಲ್ಯದ, ಕೈಯಲ್ಲಿ ವಿಸ್ಕಿ ಬಾಟಲಿಯನ್ನು ಹಿಡಿದಿರುವ ವಿಚಿತ್ರವಾದ ರಾಕೂನ್ ಪ್ರಾಣಿಯ ಕೃತಕ ಆಕೃತಿಯನ್ನು ಎತ್ತಿಕೊಂಡು ನಡೆದುಬರುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ಮ್ಯಾಂಚೆಸ್ಟರ್ ಸಿಟಿ ತಂಡದ ಸ್ಟ್ರೈಕರ್ ಆಗಿರುವ ಹಾಲೆಂಡ್, ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದಕ್ಕೆ "ಇದು ನನ್ನನ್ನು ಹಿಂಬಾಲಿಸಿಕೊಂಡು ಮನೆಗೆ ಬಂತು" ಎಂದು ಅತ್ಯಂತ ಸರಳ ಹಾಗೂ ತಮಾಷೆಯ ಶೀರ್ಷಿಕೆಯನ್ನು ನೀಡಿದ್ದಾರೆ. ಆದರೆ, ಹಾಲೆಂಡ್ ಅವರು ಕಾಡಿನ ಪ್ರಾಣಿಯೊಂದರ ಇಂತಹ ಕೃತಕ ಆಕೃತಿಯೊಂದಿಗೆ ಅಟ್ಲಾಂಟಿಕ್ ಸಾಗರವನ್ನು ದಾಟಿ ವಿಮಾನದಲ್ಲಿ ಬರಲು ಕಾರಣವಾದರೂ ಏನು ಎಂಬ ರೋಚಕ ಕಥೆ ಇಲ್ಲಿದೆ.
ಅಂದಹಾಗೆ, ಈ ಕಥೆ ಆರಂಭವಾಗುವುದು ಜುಲೈ ತಿಂಗಳ ಆರಂಭದಲ್ಲಿ. ವಿಶ್ವಕಪ್ ಟೂರ್ನಿಯ ಭಾಗವಾಗಿ ನಾರ್ವೆ ತಂಡವು ಟೆಕ್ಸಾಸ್‌ನಲ್ಲಿ ತಂಗಿದ್ದಾಗ, ಟೂರ್ನಿಯ ಬಿಡುವಿನ ವೇಳೆಯಲ್ಲಿ ಹಾಲೆಂಡ್ ಡಲ್ಲಾಸ್‌ನಲ್ಲಿರುವ 'ವೈಲ್ಡ್ ಬಿಲ್ಸ್ ವೆಸ್ಟರ್ನ್ ಸ್ಟೋರ್'ಗೆ ಭೇಟಿ ನೀಡಿದ್ದರು. ಅಲ್ಲಿನ ಅಮೆರಿಕನ್ ಸಂಸ್ಕೃತಿಗೆ ಸಂಪೂರ್ಣವಾಗಿ ಮಾರುಹೋದ ಹಾಲೆಂಡ್ ಅವರು, ಕಪ್ಪು ಕೌಬಾಯ್ ಹ್ಯಾಟ್, ಚರ್ಮದ ಬೂಟುಗಳು ಮತ್ತು ಟಿ-ಶರ್ಟ್ ಖರೀದಿಸಿದರು. ಇದೇ ವೇಳೆ ಅಂಗಡಿಯನ್ನು ಸುತ್ತಾಡುವಾಗ ಅಲ್ಲಿಟ್ಟಿದ್ದ ವಿಲಕ್ಷಣವಾದ ಟ್ಯಾಕ್ಸಿಡರ್ಮಿ ಕಲಾಕೃತಿಗಳು ಅವರ ಗಮನ ಸೆಳೆದವು. ಕೊನೆಗೆ ಅವರು ಕೈಯಲ್ಲಿ ಗಾಜಿನ ಮದ್ಯದ ಬಾಟಲಿಯನ್ನು ಹಿಡಿದುಕೊಂಡಿರುವ ಆ ಅಪರೂಪದ ರಾಕೂನ್ ಆಕೃತಿಯನ್ನು ಖರೀದಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಆಕೃತಿಯು "ವಿಸ್ಕಿ ರಾಕೂನ್" ಎಂದೇ ಬಹಳ ಪ್ರಸಿದ್ಧಿ ಪಡೆದಿದೆ.
ಖ್ಯಾತ ಫುಟ್‌ಬಾಲ್ ತಾರೆ ತಮ್ಮ ಅಂಗಡಿಗೆ ಭೇಟಿ ನೀಡಿದ್ದರಿಂದ ರೋಮಾಂಚನಗೊಂಡ ಮಾಲೀಕರು, ಹಾಲೆಂಡ್ ಅವರ ಫೋಟೋವನ್ನು ತಮ್ಮ ವೆಬ್‌ಸೈಟ್‌ನ ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ. ಇದರ ಬೆನ್ನಲ್ಲೇ "ಹಾಲೆಂಡ್ ಎಫೆಕ್ಟ್" ಶುರುವಾಗಿದ್ದು, ಬರೋಬ್ಬರಿ 750 ಯುಎಸ್ ಡಾಲರ್ ಮೌಲ್ಯದ ಆ ರಾಕೂನ್ ಬೊಂಬೆಗಳು ಆನ್‌ಲೈನ್‌ನಲ್ಲಿ ಕ್ಷಣಾರ್ಧದಲ್ಲಿ ಬಿಕರಿಯಾದವು. ಅಲ್ಲದೆ, ವಿಶ್ವದಾದ್ಯಂತ ಹರಿದುಬಂದ ಹಠಾತ್ ಆರ್ಡರ್‌ಗಳನ್ನು ನಿಭಾಯಿಸಲು ಆ ಅಂಗಡಿಯು ಅಂತಾರಾಷ್ಟ್ರೀಯ ಶಿಪ್ಪಿಂಗ್ ವ್ಯವಸ್ಥೆಯನ್ನು ಕೂಡ ವೇಗಗೊಳಿಸಬೇಕಾಗಿ ಬಂತು.
ನಾರ್ವೆ ತಂಡದ ಐತಿಹಾಸಿಕ ವಿಶ್ವಕಪ್ ಪಯಣ
ವಿಶ್ವಕಪ್ ಟೂರ್ನಿಯಲ್ಲಿ ಹಾಲೆಂಡ್ ಮತ್ತು ಅವರ ನಾರ್ವೆ ತಂಡವು ತೋರಿದ ಅದ್ಭುತ ಪ್ರದರ್ಶನಕ್ಕೆ ಇಂತಹದೊಂದು ನೆನಪಿನ ಕಾಣಿಕೆ (Souvenir) ನಿಜಕ್ಕೂ ಸೂಕ್ತವಾದುದಾಗಿದೆ. ಪ್ರಬಲ ಬ್ರೆಜಿಲ್ ತಂಡದ ವಿರುದ್ಧ ರೌಂಡ್ ಆಫ್ 16ನಲ್ಲಿ ಭರ್ಜರಿ ಜಯ ಸಾಧಿಸುವುದು ಸೇರಿದಂತೆ ಹಲವು ಸ್ಮರಣೀಯ ಪ್ರದರ್ಶನಗಳ ಮೂಲಕ, ನಾರ್ವೆ ರಾಷ್ಟ್ರೀಯ ತಂಡವು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ತಲುಪಿ ದಾಖಲೆ ಬರೆಯಿತು.
ಆದಾಗ್ಯೂ, ವಿವಾದಾತ್ಮಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದಿಂದ ನಾರ್ವೆ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದಿತು. ಆದರೆ, ಇಡೀ ಟೂರ್ನಿಯಲ್ಲಿ ನಾರ್ವೆ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಹಾಲೆಂಡ್, ಒಟ್ಟು 7 ಗೋಲುಗಳನ್ನು ಬಾರಿಸುವ ಮೂಲಕ ತಮ್ಮ ದೇಶದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮುಂಬರುವ ಪ್ರೀಮಿಯರ್ ಲೀಗ್ ಸೀಸನ್‌ಗಾಗಿ ಹಾಲೆಂಡ್ ಮ್ಯಾಂಚೆಸ್ಟರ್‌ಗೆ ಮರಳುವಾಗ ಈ ರಾಕೂನ್ ಅನ್ನು ಜೊತೆಯಲ್ಲೇ ಕೊಂಡೊಯ್ಯುತ್ತಾರಾ ಎಂಬುದು ಇನ್ನೂ ತಿಳಿದಿಲ್ಲವಾದರೂ, ಇದು ಈಗಾಗಲೇ ಈ ಬಾರಿಯ ವಿಶ್ವಕಪ್ ಟೂರ್ನಿಯ ಅತ್ಯಂತ ಪ್ರಸಿದ್ಧ ಹಾಗೂ ಐಕಾನಿಕ್ ನೆನಪಿನ ಕಾಣಿಕೆಯಾಗಿ ಹೊರಹೊಮ್ಮಿರುವುದಂತೂ ಸುಳ್ಳಲ್ಲ, (ಏಜೆನ್ಸೀಸ್).