ಬಾಯಿ ಮುಚ್ಚಿಕೊಂಡರೆ ರೆಡ್ ಕಾರ್ಡ್! 2026ರ ಫಿಫಾ ವಿಶ್ವಕಪ್‌ನ ಹೊಸ ನಿಯಮಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ...FIFA World Cup 2026
- ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಆತಿಥ್ಯದಲ್ಲಿ ಇಂದಿನಿಂದ ಆರಂಭವಾಗುತ್ತಿರುವ 2026ರ ಫಿಫಾ ವಿಶ್ವಕಪ್
- ಪಾರದರ್ಶಕತೆಗಾಗಿ ಕೆಲವು ಪ್ರಮುಖ ನಿಯಮಗಳನ್ನು ಜಾರಿಗೆ ತಂದ ಅಂತಾರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ
- ಮೈದಾನದಲ್ಲಿ ಆಟಗಾರರು ಗಲಾಟೆ ಅಥವಾ ವಾಗ್ವಾದದ ಸಮಯದಲ್ಲಿ ಬಾಯಿಯನ್ನು ಕೈ ಅಥವಾ ಜರ್ಸಿಯಿಂದ ಮುಚ್ಚುವಂತಿಲ್ಲ
- ತೀರ್ಪುಗಾರರ ನಿರ್ಧಾರವನ್ನು ಪ್ರತಿಭಟಿಸಿ ಮೈದಾನ ಬಿಟ್ಟು ಹೊರನಡೆದರು ಕೂಡ ರೆಡ್ ಕಾರ್ಡ್ ಶಿಕ್ಷೆಗೆ ಗುರಿ
FIFA World Cup 2026 : ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಆತಿಥ್ಯದಲ್ಲಿ ಇಂದು (ಜೂನ್ 11) ಆರಂಭವಾಗುತ್ತಿರುವ 2026ರ ಫಿಫಾ ವಿಶ್ವಕಪ್‌ನಲ್ಲಿ ಪಂದ್ಯಗಳು ಹೆಚ್ಚು ಪಾರದರ್ಶಕ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಅಂತಾರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ (IFAB) ಕೆಲವು ಪ್ರಮುಖ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮಗಳ ಅನ್ವಯ, ಮೈದಾನದಲ್ಲಿ ಆಟಗಾರರು ಗಲಾಟೆ ಅಥವಾ ವಾಗ್ವಾದದ ಸಮಯದಲ್ಲಿ ಎದುರಾಳಿ ಆಟಗಾರನ ಮೇಲಿನ ನಿಂದನೆಗಳನ್ನು ಬಚ್ಚಿಡಲು ತಮ್ಮ ಬಾಯಿಯನ್ನು ಕೈ ಅಥವಾ ಜರ್ಸಿಯಿಂದ ಮುಚ್ಚಿಕೊಂಡರೆ ನೇರವಾಗಿ ರೆಡ್ ಕಾರ್ಡ್ ನೀಡಲಾಗುತ್ತದೆ. ತೀರ್ಪುಗಾರರ ನಿರ್ಧಾರವನ್ನು ಪ್ರತಿಭಟಿಸಿ, ಮೈದಾನ ಬಿಟ್ಟು ಹೊರನಡೆದರು ಕೂಡ ರೆಡ್ ಕಾರ್ಡ್ ಶಿಕ್ಷೆ ಎದುರಿಸಬೇಕಾಗುತ್ತದೆ.
ಇನ್ನು ಸಮಯ ವ್ಯರ್ಥ ಮಾಡುವುದನ್ನು ತಡೆಯಲು, ಬದಲಿ ಆಟಗಾರನಾಗಿ (Substitution) ಹೊರಹೋಗುವ ಆಟಗಾರನಿಗೆ 10 ಸೆಕೆಂಡುಗಳ ಕಾಲಾವಕಾಶ ಮಾತ್ರ ಇರಲಿದ್ದು, ನಿಯಮ ಮೀರಿದರೆ ಆ ತಂಡ ಕನಿಷ್ಠ ಒಂದು ನಿಮಿಷದವರೆಗೆ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ, ಹಾಗೆಯೇ ಥ್ರೋ-ಇನ್ ಮತ್ತು ಗೋಲ್ ಕಿಕ್‌ಗಳನ್ನು ತೆಗೆದುಕೊಳ್ಳಲು 5 ಸೆಕೆಂಡುಗಳ ಗಡುವು ಇರಲಿದ್ದು, ತಪ್ಪಿದರೆ ಎದುರಾಳಿ ತಂಡಕ್ಕೆ ಅವಕಾಶ ಸಿಗಲಿದೆ. ಇದರೊಂದಿಗೆ ಗಾಯಗೊಂಡ ಆಟಗಾರರ ಮೈದಾನದ ಚಿಕಿತ್ಸೆಯ ನಂತರ ಒಂದು ನಿಮಿಷದ ನಿಯಮ ಹಾಗೂ ತಪ್ಪು ರೆಡ್/ಯೆಲ್ಲೋ ಕಾರ್ಡ್‌ಗಳ ಪರಿಶೀಲನೆಗಾಗಿ ವಿಎಆರ್ (VAR) ತಂತ್ರಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿರುವುದು ಆಟದ ವೇಗ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲಿದೆ.
ಹಾಗಾದರೆ, 2026ನೇ ಸಾಲಿನ ಫಿಫಾ ವಿಶ್ವಕಪ್ಗಾಗಿ ಪರಿಚಯಿಸಲಾಗಿರುವ ಹೊಸ ನಿಯಮಗಳ ಕಂಪ್ಲೀಟ್ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.
ಶಟ್ಟಿಂಗ್ ಅಪ್
ಮೈದಾನದಲ್ಲಿ ಎದುರಾಳಿ ಆಟಗಾರನೊಂದಿಗೆ ವಾಗ್ವಾದ ಅಥವಾ ಗಲಾಟೆ ನಡೆಸುವಾಗ ಆಟಗಾರನು ತನ್ನ ಕೈ, ತೋಳು ಅಥವಾ ಜರ್ಸಿಯಿಂದ ಬಾಯಿಯನ್ನು ಮುಚ್ಚಿಕೊಂಡರೆ ರೆಫರಿ ನೇರವಾಗಿ ರೆಡ್ ಕಾರ್ಡ್ (ಮೈದಾನದಿಂದ ಹೊರಹಾಕುವುದು) ತೋರಿಸಬಹುದು ಎಂದು ಫಿಫಾ ನಿಯಮ ರೂಪಿಸಿದೆ. ಆಟಗಾರರು ಪರಸ್ಪರ ಏನು ಮಾತನಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆಯೇ ಎಂಬುದನ್ನು ಮರೆಮಾಚುವ ಪ್ರಯತ್ನಗಳನ್ನು ತಡೆಯುವುದು ಮತ್ತು ಆಟದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಹೆಚ್ಚಿಸುವುದು ಈ ಕಠಿಣ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಫಿಫಾ ತಿಳಿಸಿದೆ.
ಹೊಸ ಬದಲಿ ನಿಯಮ
ಪಂದ್ಯದಲ್ಲಿ ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಬದಲಿ ಆಟಗಾರರ (Substitution) ನಿಯಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಮೈದಾನದಿಂದ ಹೊರಹೋಗುವ ಆಟಗಾರನು ಕೇವಲ 10 ಸೆಕೆಂಡುಗಳ ಒಳಗೆ ತನಗೆ ಅತ್ಯಂತ ಹತ್ತಿರವಿರುವ ಮೈದಾನದ ಗಡಿಯಿಂದ ಹೊರನಡೆಯಬೇಕಾಗುತ್ತದೆ. ಒಂದು ವೇಳೆ ಆಟಗಾರನು ಉದ್ದೇಶಪೂರ್ವಕವಾಗಿ ತಡ ಮಾಡಿದರೆ, ಆತನ ಜಾಗಕ್ಕೆ ಬರುವ ಹೊಸ ಆಟಗಾರನನ್ನು ತಕ್ಷಣವೇ ಮೈದಾನದೊಳಗೆ ಸೇರಿಸಿಕೊಳ್ಳಲಾಗುವುದಿಲ್ಲ. ಇದರಿಂದಾಗಿ, ಮುಂದಿನ ಬಾರಿ ಆಟವು ನಿಲ್ಲುವವರೆಗೆ ಆ ತಂಡವು ಒಬ್ಬ ಆಟಗಾರನ ಕೊರತೆಯೊಂದಿಗೆ ಆಡಬೇಕಾಗುತ್ತದೆ.
ಸಮಯ ವ್ಯರ್ಥ
ಮೈದಾನದಲ್ಲಿ ಸಮಯ ವ್ಯರ್ಥ ಮಾಡುವ ತಂತ್ರಗಳಿಗೆ ಕಡಿವಾಣ ಹಾಕಲು ಫಿಫಾ ಕಠಿಣ ನಿಯಮವನ್ನು ತಂದಿದ್ದು, ಆಟಗಾರರು ಉದ್ದೇಶಪೂರ್ವಕವಾಗಿ ಥ್ರೋ-ಇನ್ (Throw-in) ಅಥವಾ ಕಾರ್ನರ್ ಕಿಕ್ (Corner kick) ತೆಗೆದುಕೊಳ್ಳಲು ತಡ ಮಾಡುತ್ತಿದ್ದಾರೆ ಎಂದು ರೆಫರಿಗೆ ಅನಿಸಿದರೆ ತಕ್ಷಣವೇ 5 ಸೆಕೆಂಡುಗಳ ಕೌಂಟ್‌ಡೌನ್ ಆರಂಭಿಸಲಾಗುತ್ತದೆ. ಈ ನಿಗದಿತ ಸಮಯದೊಳಗೆ ಆಟವನ್ನು ಪುನಃ ಆರಂಭಿಸದಿದ್ದರೆ, ಚೆಂಡಿನ ಮೇಲಿನ ಹಕ್ಕನ್ನು ಕಸಿದುಕೊಂಡು ಎದುರಾಳಿ ತಂಡಕ್ಕೆ ಅವಕಾಶವನ್ನು ನೀಡಲಾಗುತ್ತದೆ.
ವಿಡಿಯೋ ಅಸಿಸ್ಟೆಂಟ್ ರೆಫರಿ ಟೆಕ್ನಾಲಜಿ
ಪಂದ್ಯಗಳಲ್ಲಿ ಆಗುವ ಸ್ಪಷ್ಟ ತಪ್ಪುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಎಆರ್ (VAR - ವಿಡಿಯೋ ಅಸಿಸ್ಟೆಂಟ್ ರೆಫರಿ) ತಂತ್ರಜ್ಞಾನದ ವ್ಯಾಪ್ತಿಯನ್ನು ಫಿಫಾ ವಿಸ್ತರಿಸಿದೆ. ಇನ್ಮುಂದೆ ತಪ್ಪಾಗಿ ನೀಡಲಾದ ಕಾರ್ನರ್ ಕಿಕ್‌ಗಳು, ಆಟ ಮುಂದುವರಿಯುವ ಮುನ್ನ ನಡೆಯುವ ಅಟ್ಯಾಕಿಂಗ್ ಫೌಲ್‌ಗಳು, ಸ್ಪಷ್ಟವಾಗಿ ತಪ್ಪಾಗಿರುವ ಎರಡನೇ ಯೆಲ್ಲೋ ಕಾರ್ಡ್‌ಗಳು ಮತ್ತು ತಪ್ಪಾದ ಆಟಗಾರನಿಗೆ ಶಿಕ್ಷೆ ವಿಧಿಸಿದ ಸಂದರ್ಭಗಳಲ್ಲಿ ರೆಫರಿ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ಸಂಪೂರ್ಣ ಅಧಿಕಾರವನ್ನು ವಿಎಆರ್ಗೆ ನೀಡಲಾಗಿದೆ.
ಒಂದು ನಿಮಿಷ ಕಾಯಬೇಕು
ಮೈದಾನದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದ ಔಟ್‌ಫೀಲ್ಡ್ ಆಟಗಾರರು ಪಂದ್ಯ ಪುನಃ ಆರಂಭವಾದ ನಂತರ ಕನಿಷ್ಠ ಒಂದು ನಿಮಿಷದವರೆಗೆ ಮೈದಾನದಿಂದ ಹೊರಗಿರಬೇಕು ಎಂಬ ನಿಯಮವನ್ನು ತರಲಾಗಿದೆ. ಆದರೆ, ಈ ನಿಯಮವು ಗೋಲ್‌ಕೀಪರ್‌ಗಳಿಗೆ, ಎದುರಾಳಿ ಆಟಗಾರನ ಫೌಲ್‌ನಿಂದಾಗಿ (ಹೊಡೆತ ಬಿದ್ದು) ಗಾಯಗೊಂಡವರಿಗೆ ಅಥವಾ ಗಂಭೀರ ಸ್ವರೂಪದ ಗಾಯಗಳಿಗೆ ಒಳಗಾದ ಆಟಗಾರರಿಗೆ ಅನ್ವಯಿಸುವುದಿಲ್ಲ.
ಪ್ರತಿಭಟಿಸಿದರೆ ಕಠಿಣ ಶಿಕ್ಷೆ
ರೆಫರಿಗಳ ನಿರ್ಧಾರವನ್ನು ಪ್ರತಿಭಟಿಸುವ ಆಟಗಾರರು ಮತ್ತು ತರಬೇತುದಾರರ ವಿರುದ್ಧವೂ ಫಿಫಾ ಕಠಿಣ ಕ್ರಮಕ್ಕೆ ಮುಂದಾಗಿದೆ. ರೆಫರಿ ತೀರ್ಪನ್ನು ವಿರೋಧಿಸಿ ಯಾವುದೇ ಆಟಗಾರ ಮೈದಾನ ಬಿಟ್ಟು ಹೊರನಡೆದರೆ ಅಥವಾ ಕೋಚ್ ಅಂತಹ ವರ್ತನೆಯನ್ನು ಪ್ರೋತ್ಸಾಹಿಸಿದರೆ ಅವರಿಗೆ ನೇರವಾಗಿ ರೆಡ್ ಕಾರ್ಡ್ ನೀಡಲಾಗುತ್ತದೆ. ಒಂದು ವೇಳೆ ಇಂತಹ ಪ್ರತಿಭಟನೆಗಳಿಂದಾಗಿ ಪಂದ್ಯವೇ ಅರ್ಧಕ್ಕೆ ನಿಂತುಹೋದರೆ, ಅದಕ್ಕೆ ಕಾರಣವಾದ ತಂಡವು ಪಂದ್ಯವನ್ನು ಸೋತಿದೆ ಎಂದು ಘೋಷಿಸಿ, ಎದುರಾಳಿ ತಂಡವನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ.
ಹೈಡ್ರೇಶನ್ ವಿರಾಮ
ಕ್ರೀಡಾಂಗಣಗಳಲ್ಲಿ ದಾಖಲಾಗುವ ಅತಿ ಹೆಚ್ಚಿನ ತಾಪಮಾನ ಮತ್ತು ಸೆಕೆಯನ್ನು ಗಮನದಲ್ಲಿಟ್ಟುಕೊಂಡು, ಆಟಗಾರರು ನೀರು ಕುಡಿದು ತಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಟ್ಟುಕೊಳ್ಳಲು ಪಂದ್ಯದ ಪ್ರತಿ ಅರ್ಧಭಾಗದಲ್ಲೂ ಹೈಡ್ರೇಶನ್ ಬ್ರೇಕ್‌ಗಳನ್ನು ಪರಿಚಯಿಸಲಾಗಿದೆ.