FIFA WorldCup: ಕೊಲಂಬಿಯಾ ಕನಸು ಭಗ್ನ; ಕ್ವಾರ್ಟರ್​ಫೈನಲ್​ಗೇರಿದ ಸ್ವಿಸ್​ 
ಫುಟ್ಬಾಲ್

FIFA WorldCup: ಕೊಲಂಬಿಯಾ ಕನಸು ಭಗ್ನ; ಕ್ವಾರ್ಟರ್​ಫೈನಲ್​ಗೇರಿದ ಸ್ವಿಸ್​

ವ್ಯಾಂಕೋವರ್​: ಗೋಲು ರಹಿತ 120 ನಿಮಿಷಗಳ ಆಟದ ಬಳಿಕ ನಡೆದ ಪೆನಾಲ್ಟಿ ಶೂಟೌಟ್​ನಲ್ಲಿ ಕೊಲಂಬಿಯಾ ಎದುರು 4-3ರಿಂದ ರೋಚಕ ಗೆಲುವು ದಾಖಲಿಸಿದ ಸ್ವಿರ್ಜಲೆಂಡ್​ ತಂಡ ಕೊನೇ ತಂಡವಾಗಿ ಕ್ವಾರ್ಟರ್​ಫೈನಲ್​ ಸ್ಥಾನ ಖಚಿತಪಡಿಸಿಕೊಂಡಿದೆ. ನಿರ್ಣಾಯಕ ಪೆನಾಲ್ಟಿ ಕಿಕ್​ನಲ್ಲಿ ರುಬೆಲ್​ ವರ್ಗಾಸ್​ ಕೊಲಂಬಿಯಾ ಗೋಲು ಕೀಪರ್​ ಕ್ಯಾಮಿಲೊ ವರ್ಗಾರ್​ರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುವುದರೊಂದಿಗೆ ಸ್ವಿಸ್​ ತಂಡ ಬರೋಬ್ಬರಿ 72 ವರ್ಷಗಳ ಬಳಿಕ ಫಿಫಾ ವಿಶ್ವಕಪ್​ನಲ್ಲಿ (FIFA WorldCup) ಅಂತಿಮ ಎಂಟರ ಘಟ್ಟಕ್ಕೇರಿತು. ಸ್ವಿರ್ಜಲೆಂಡ್​ ಕ್ವಾರ್ಟರ್​ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಅರ್ಜೆಂಟೀನಾದ ಸವಾಲು ಎದುರಿಸಲಿದೆ.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ತಡರಾತ್ರಿ ನಡೆದ ಪಂದ್ಯದಲ್ಲಿ 90 ನಿಮಿಷಗಳ ಆಟ ಗೋಲು ರಹಿತ ಸಮಬಲದಲ್ಲಿ ಕೊನೆಗೊಂಡಿತು. ಬಳಿಕ ಹೆಚ್ಚುವರಿ 30 ನಿಮಿಷಗಳ ಆಟದಲ್ಲೂ ಗೋಲು ದಾಖಲಾಗಲಿಲ್ಲ. ಬಳಿಕ ನಡೆದ ಪೆನಾಲ್ಟಿ ಶೂಟೌಟ್​ನಲ್ಲಿ ಕೊಲಂಬಿಯಾದ ಡೇವಿನ್​ಸನ್​ ಸ್ಯಾಂಚೆಜ್​ 2ನೇ ಮತ್ತು ಸ್ವಿರ್ಜಲೆಂಡ್​ನ ಮ್ಯಾನ್ಯುಯೆಲ್​ ಅಕಾಂಜಿ 3ನೇ ಹೊಡೆತದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯಿಂದ ಹೊರಗೆ ಹೊಡೆದರು. 4ನೇ ಹೊಡೆತದಲ್ಲಿ ಕೊಲಂಬಿಯಾದ ಕುಚೊ ಹೆರ್ನಾಂಡೆಜ್​ ಹೊಡೆತವನ್ನು ಸ್ವಿಸ್​ ಗೋಲು ಕೀಪರ್​ ಗ್ರೆಗರ್​ ಕೋಬೆಲ್​ ಬಲಗಡೆಗೆ ಡೈವ್​ ಹೊಡೆದು ಯಶಸ್ವಿಯಾಗಿ ತಡೆಯುವ ಮೂಲಕ ಗೆಲುವಿಗೆ ನೆರವಾದರು. ಬಳಿಕ 5ನೇ ಹಾಗೂ ಕೊನೇ ಹೊಡೆತದಲ್ಲಿ ಕೊಲಂಬಿಯಾದ ಲೂಯಿಸ್​ ಡಯಾಜ್​ ಗೋಲು ಬಾರಿಸಿದರೂ, ಸ್ವಿಸ್​ ಪರ ರುಬೆನ್​ ವರ್ಗಾಸ್​ ಕೂಡ ಗೋಲು ಬಾರಿಸುವುದರೊಂದಿಗೆ 2014ರ ನಂತರ ಮತ್ತೊಮ್ಮೆ 8ರ ಘಟ್ಟಕ್ಕೇರುವ ಕೊಲಂಬಿಯಾ ಕನಸು ಭಗ್ನಗೊಂಡಿತು. ರುಬೆನ್​ ಪಂದ್ಯದ ಇಂಜುರಿ ಸಮಯದಲ್ಲಷ್ಟೇ (90+1) ಬದಲಿಗರಾಗಿ ಕಣಕ್ಕಿಳಿದಿದ್ದರು. ಪಂದ್ಯಕ್ಕೆ 52,497 ಪ್ರೇಕ್ಷಕರು ಸಾಕ್ಷಿಯಾದರು. ಈ ಪೈಕಿ ಫೇವರಿಟ್​ ಕೊಲಂಬಿಯಾದ ಬೆಂಬಲಿಗರೇ ಹೆಚ್ಚಿದ್ದರು.

ಸ್ವಿರ್ಜಲೆಂಡ್​ ತಂಡ 1954ರಲ್ಲಿ ತನ್ನ ಆತಿಥ್ಯದಲ್ಲೇ ನಡೆದ ವಿಶ್ವಕಪ್​ನಲ್ಲಿ ಕೊನೆಯದಾಗಿ ಕ್ವಾರ್ಟರ್​ಫೈನಲ್​ಗೇರಿತ್ತು. ಅದಕ್ಕೆ ಮುನ್ನ 1934 ಮತ್ತು 1938ರಲ್ಲೂ ಕ್ವಾರ್ಟರ್​ಫೈನಲ್​ಗೇರಿದ್ದೇ ಸ್ವಿಸ್​ ತಂಡದ ಇದುವರೆಗಿನ ಶ್ರೇಷ್ಠ ನಿರ್ವಹಣೆ ಎನಿಸಿದೆ. ಸ್ವಿರ್ಜಲೆಂಡ್​ ಕಳೆದ 3 ವಿಶ್ವಕಪ್​ಗಳಲ್ಲಿ 16ರ ಘಟ್ಟದಲ್ಲೇ ನಿರ್ಗಮಿಸಿತ್ತು.
ಪಂದ್ಯದಲ್ಲಿ ಉಭಯ ತಂಡಗಳು ಭಿನ್ನ ಕಾರ್ಯತಂತ್ರ ಅನುಸರಿಸಿದವು. ಸ್ವಿಸ್​ ತಂಡ ಅತ್ಯಂತ ಸಂಘಟಿತವಾಗಿ ಆಡಿದರೆ, ಕೊಲಂಬಿಯಾ ತಂಡ ಹೆಚ್ಚು ಆಕ್ರಮಣಕಾರಿಯಾಗಿತ್ತು. ಆದರೆ ಪಂದ್ಯದುದ್ದಕ್ಕೂ ಸ್ವಿಸ್​ ತಂಡವೇ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು.

ಕೊಲಂಬಿಯಾದ ಗುಸ್ಟಾವೊ ಪುಯೆರ್ಟಾಗೆ 21ನೇ ನಿಮಿಷದಲ್ಲಿ ಸಿಕ್ಕ ಗೋಲು ಗಳಿಸುವ ಅವಕಾಶಕ್ಕೆ ಗೋಲು ಕೀಪರ್​ ಕೋಬೆಲ್​ ತಡೆಯೊಡ್ಡಿದರು. ಸ್ವಿಸ್​ಗೆ 30ನೇ ನಿಮಿಷದಲ್ಲಿ ಅವಕಾಶವಿತ್ತು. ಆದರೆ ಫ್ಯಾಬಿಯಾನೊ ರೈಡರ್​ ಹೊಡೆತವನ್ನು ಕೊಲಂಬಿಯಾ ಗೋಲಿ ಕ್ಯಾಮಿಲೊ ವರ್ಗಾಸ್​ ಪಂಚ್​ ನೀಡಿ ಹೊರದಬ್ಬಿದರು. 52ನೇ ನಿಮಿಷದಲ್ಲಿ ಸ್ವಿಸ್​ಗೆ ಸಿಕ್ಕ ಫ್ರೀ ಕಿಕ್​ನಲ್ಲೂ ರೈಡರ್​ ಹೊಡೆತ ಗುರಿ ಸೇರದೆ, ಗೋಲು ಪೆಟ್ಟಿಗೆಯ ಪಕ್ಕದಲ್ಲಿ ಹಾದುಹೋಯಿತು.
ಸ್ವಿಸ್​ ತಂಡ ಟೂರ್ನಿಯಲ್ಲಿ 3 ಗೋಲು ಸಿಡಿಸಿರುವ 20 ವರ್ಷದ ಮಿಡ್​ಫೀಲ್ಡರ್​ ಜೋಹಾನ್​ ಮಂಜಾಂಬಿ ಗೈರಿನಲ್ಲಿ ಕಣಕ್ಕಿಳಿಯಿತು. ಮಂಜಾಂಬಿ ಸೋಮವಾರ ತರಬೇತಿಯ ವೇಳೆ ಗಾಯಗೊಂಡಿದ್ದರು.