ಕ್ರೀಡಾ ಸಚಿವಾಲಯದಿಂದ ಎನ್ಎಸ್ಬಿ, ಎನ್ಎಸ್ಟಿ ನಿಯಮಗಳ ಅಧಿಸೂಚನೆ
ನವದೆಹಲಿ: ಶೀಘ್ರದಲ್ಲೇ ರಚನೆಯಾಗಲಿರುವ (National Sports Tribunal) ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್ಎಸ್ಬಿ) ಮತ್ತು (National Sports Board) ರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ (ಎನ್ಎಸ್ಟಿ) ಕಾರ್ಯಾಚರಣೆಯ ನಿಯಮಗಳ ಅಧಿಸೂಚನೆಯನ್ನು ಕ್ರೀಡಾ ಸಚಿವಾಲಯ ಮಂಗಳವಾರ ಹೊರಡಿಸಿದೆ. ವಿವಾದಗಳನ್ನು ಸಲ್ಲಿಸಲು ಮತ್ತು ಕಾನೂನು ದಾಖಲೆಗಳ ನಿರ್ವಹಣೆಗೆ ಮೀಸಲಾದ ಪ್ರತ್ಯೇಕ ಪೋರ್ಟಲ್ ಕೂಡ ಆರಂಭಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲಾಗಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯಡಿಯಲ್ಲಿ ಇವೆರಡು ಸಂಸ್ಥೆಗಳು ರಚನೆಯಾಗಲಿದ್ದು, ಎರಡರ ಪಾತ್ರಗಳನ್ನು ತಿಳಿಸುವ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿ ಮೇಲ್ವಿಚಾರಣೆಯಲ್ಲಿ ಸರ್ಚ್ ಮತ್ತು ಆಯ್ಕೆ ಸಮಿತಿಯನ್ನು ರಚಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಕ್ರೀಡಾ ವಿವಾದಕ್ಕೆ ಪ್ರತ್ಯೇಕ ಕೋರ್ಟ್
ಕ್ರೀಡೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ಮೀಸಲಾದ ಪ್ರತ್ಯೇಕ ನ್ಯಾಯಾಲಯವೇ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಎನ್ಎಸ್ಟಿ). ಇದರ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಮಾತ್ರ ಪ್ರಶ್ನಿಸಲು ಅವಕಾಶವಿರಲಿದೆ. ಇದರ ಸಂಖ್ಯಾಬಲವನ್ನು ಸರ್ಕಾರ ರ್ನಿದಿಷ್ಟಪಡಿಸಿಲ್ಲ. ಆದರೆ ಕ್ರೀಡಾ ವಿವಾದ, ಸೂಚನೆ, ಪ್ರತಿಕ್ರಿಯೆ, ದಾಖಲೆ ಮತ್ತು ಸ್ಪಷ್ಟೀಕರಣಗಳ ಸಲ್ಲಿಕೆಗೆ ಮೀಸಲಾದ ಪೋರ್ಟಲ್ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾಯಮಂಡಳಿಯ ಸಂವಹನ, ಆದೇಶಗಳ ಪ್ರಕಟಣೆ, ವರ್ಚುವಲ್ ವಿಚಾರಣೆ ಮತ್ತು ಪ್ರಕ್ರಿಯೆ-ಆದೇಶಗಳಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯೂ ಈ ಪೋರ್ಟಲ್ ಮೂಲಕ ಆಗಲಿದೆ. ಕ್ರೀಡಾಪಟುಗಳು ಸಿವಿಲ್ ನ್ಯಾಯಾಲಯಗಳನ್ನು ಅವಲಂಬಿಸುವುದನ್ನು ಎನ್ಎಸ್ಬಿ ಕಡಿಮೆ ಮಾಡಲಿದೆ. ಜತೆಗೆ ಕ್ರೀಡಾ ಆಡಳಿತ ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳ ಸ್ವತಂತ್ರ, ತ್ವರಿತ, ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ವಿಲೇವಾರಿಯನ್ನೂ ಎನ್ಎಸ್ಬಿ ಖಚಿತಪಡಿಸಲಿದೆ. ಎನ್ಎಸ್ಬಿಯ ಅಧ್ಯಕ್ಷರು ಅಥವಾ ಸದಸ್ಯರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರಾಗಿದ್ದರೆ, ಅವರು ಕ್ರೀಡಾ ನ್ಯಾಯಮಂಡಳಿ ಸೇರುವ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂಪ್ರೇರಿತ ನಿವೃತ್ತಿ ಪಡೆಯಬೇಕು ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಕ್ರೀಡಾ ಮಂಡಳಿಯು (ಎನ್ಎಸ್ಬಿ) ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್ಎಸ್ಎಫ್) ಮಾನ್ಯತೆ ನೀಡುವ, ಆಡಳಿತ, ಹಣಕಾಸು ಮತ್ತು ನೈತಿಕ ಮಾನದಂಡಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವ ಕೇಂದ್ರ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲಿದೆ. ಇದು ಓರ್ವ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರನ್ನು ಹೊಂದಿರುತ್ತದೆ. ಇವರ ಅಧಿಕಾರಾವಧಿ 3 ವರ್ಷ. ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿಯ ಪಟ್ಟಿಯನ್ನು ಮತ್ತು ಎನ್ಎಸ್ಎಫ್ಗಳ ಅಂಗಸಂಸ್ಥೆಗಳ ನೋಂದಣಿಯ ಕೆಲಸವನ್ನೂ ಎನ್ಎಸ್ಬಿ ನಿರ್ವಹಿಸಲಿದೆ. ಕ್ರೀಡಾ ಆಡಳಿತದ ಕುರಿತು ಮಾದರಿ ಮಾರ್ಗಸೂಚಿ ಅಥವಾ ನಿಯಮಗಳನ್ನು ರ್ನಿದಿಷ್ಟಪಡಿಸಲು ಕೂಡ ಎನ್ಎಸ್ಬಿಗೆ ಅಧಿಕಾರ ನೀಡಲಾಗಿದೆ. ಸದಸ್ಯರಿಗೆ 65 ವರ್ಷ ವಯಸ್ಸಿನ ಮಿತಿಯನ್ನೂ ನಿಗದಿಪಡಿಸಲಾಗಿದೆ.